ಒಳಮೀಸಲು: ದುರ್ಬಲ ವರ್ಗಕ್ಕೆ ಅನ್ಯಾಯ

| Published : Sep 14 2025, 01:04 AM IST

ಸಾರಾಂಶ

ಕಾಂಗ್ರೆಸ್ ಸರ್ಕಾರದಿಂದ ಒಳ ಮೀಸಲಾತಿ ವರ್ಗೀಕರಣದ ವಿಚಾರದಲ್ಲಿ ದುರ್ಬಲ ವರ್ಗಗಗಳಿಗೆ ಅನ್ಯಾಯವಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಆರೋಪಿಸಿದರು.

ಶಿವಮೊಗ್ಗ: ಕಾಂಗ್ರೆಸ್ ಸರ್ಕಾರದಿಂದ ಒಳ ಮೀಸಲಾತಿ ವರ್ಗೀಕರಣದ ವಿಚಾರದಲ್ಲಿ ದುರ್ಬಲ ವರ್ಗಗಗಳಿಗೆ ಅನ್ಯಾಯವಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಆರೋಪಿಸಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಶಿವಮೊಗ್ಗ ಜಿಲ್ಲಾ ಬಂಜಾರ ಸಂಘ, ಕರ್ನಾಟಕ ಬಂಜಾರ ಹಕ್ಕು ಸಂರಕ್ಷಣಾ ಸಮಿತಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಒಳ ಮೀಸಲಾತಿ ವರ್ಗೀಕರಣ ವಿರೋಧಿಸಿ ಶುಕ್ರವಾರದಿಂದ ಆರಂಭವಾದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹದಲ್ಲಿ ಶನಿವಾರ ಪಾಲ್ಗೊಂಡು ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಸ್ವಾಂತಂತ್ರ್ಯ ಬಂದ ಮೇಲೆ ಹಾವನೂರು ವರದಿ, ಸದಾಶಿವ ವರದಿ, ಮಾಧುಸ್ವಾಮಿ ಸಮಿತಿಯ ಶಿಫಾರಸು, ಕಾಂತರಾಜ್ ವರದಿ, ನಾಗಮೋಹನ್ ದಾಸ್ ವರದಿ ಎಲ್ಲವನ್ನೂ ಸರ್ಕಾರಗಳು ಇನ್ನೂ ಅನುಷ್ಠಾನಕ್ಕೆ ತಂದಿಲ್ಲ ಎಂದು ದೂರಿದರು.

150 ಕೋಟಿ ರು. ತೆರಿಗೆ ಹಣವನ್ನು ಖರ್ಚು ಮಾಡಿ ಕಾಂತರಾಜ್ ವರದಿ ನೀಡಿದರೂ ಅದನ್ನು ಕೂಡ ಜಾರಿಗೊಳಿಸಿಲ್ಲ. ಈಗ ನಾಗಮೋಹನ್ ದಾಸ್ ವರದಿಯನ್ನು ಕೂಡ ಯಥಾವತ್ ಜಾರಿಗೊಳಿಸದೇ ಒಳ ಮೀಸಲಾತಿಯನ್ನು 4 ಭಾಗಗಳಾಗಿ ವಿಂಗಡಿಸಿ ನೀಡಿದ ವರದಿಯನ್ನು 3ಕ್ಕೆ ಸೀಮಿತಗೊಳಿಸಿ ಬಂಜಾರರಿಗೆ ಬಿಜೆಪಿ ಸರ್ಕಾರ ನೀಡಿದ ಶೇ.4.5ರಷ್ಟು ಮೀಸಲಾತಿಯನ್ನು 5.5ರಷ್ಟು ಹೆಚ್ಚಿಸಿ ಅವರೊಂದಿಗೆ ಈಗ 63 ಜಾತಿಗಳನ್ನು ಸೇರಿಸಿ ಅಲೆಮಾರಿ ಜಾತಿಗೆ ಮೀಸಲಿಟ್ಟ ಶೇ.1ರಷ್ಟು ರದ್ದು ಮಾಡಿ ಅದನ್ನೂ ಇವರೊಂದಿಗೆ ಸೇರಿಸಿ ಎಲ್ಲ ಹಿಂದುಳಿದ ಮತ್ತು ದಲಿತರಿಗೆ ಈ ಸರ್ಕಾರ ಅನ್ಯಾಯ ಮಾಡಿದೆ ಎಂದು ದೂರಿದರು.

ವ್ಯಾಪಕ ಪ್ರತಿಭಟನೆ ಬಳಿಕ ಈಗ ಮತ್ತೆ 450 ಕೋಟಿ ರು. ವೆಚ್ಚದಲ್ಲಿ ಆರ್ಥಿಕ ಮತ್ತು ಸಾಮಾಜಿಕ ಜಾತಿಗಣತಿಗೆ ಹೊರಟಿದ್ದಾರೆ. ಕೇಂದ್ರ ಸರ್ಕಾರ ಕೂಡ ಮುಂದಿನ ತಿಂಗಳಿಂದ ಜನಗಣತಿಗೆ ಆದೇಶ ನೀಡಿದೆ. ವಿಪರ್ಯಾಸ ಎಂದರೆ ಎಲ್ಲೋ ಒಂದು ಕಡೆ ಕಾಣದ ಕೈಗಳು ಲಂಬಾಣಿ ಜನಾಂಗವನ್ನು ಒಡೆಯುವ ಷಡ್ಯಂತ್ರ ಮಾಡುತ್ತಿವೆ. ಲಂಬಾಣಿ ಕ್ರಿಶ್ಚಿಯನ್, ಭೋವಿ ಕ್ರಿಶ್ಚಿಯನ್ ಎಂದು ಹಲವಾರು ಉಪಪಂಗಡಗಳಿಗೆ ಕ್ರಿಶ್ಚಿಯನ್ ಜಾತಿಯನ್ನು ಲಗತ್ತಿಸಿ ಹಿಂದುಗಳನ್ನು ಒಡೆಯುವ ಕುತಂತ್ರ ಮಾಡುತ್ತಿದೆ. ಇದರಿಂದ ಒಟ್ಟಾರೆಯಾಗಿ ಆ ಜಾತಿಯ ಜನಸಂಖ್ಯೆ ಕಡಿಮೆ ನಮೂದು ಆಗುವುದರಿಂದ ಅವರಿಗೆ ಸಿಗಬೇಕಾದ ಶೇಕಡವಾರು ಮೀಸಲಾತಿಯಲ್ಲಿ ಕಡಿಮೆಯಾಗಿ ವಂಚಿತರಾಗುತ್ತಾರೆ ಎಂದರು.

ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಗಳಾಗಿದ್ದಾಗ ಲಂಬಾಣಿ ತಾಂಡಾ ಅಭಿವೃದ್ಧಿ ನಿಗಮ ಸ್ಥಾಪಿಸಿ ನೂರಾರು ಕೋಟಿ ರು. ಅನುದಾನ ನೀಡಿ ಸರ್ಕಾರದ ಹಲವು ಪ್ರಮುಖ ಹುದ್ದೆಗಳನ್ನು ಕೂಡ ಈ ಸಮಾಜಕ್ಕೆ ನೀಡಿದ್ದರು. ಸೇವಾಲಾಲ್ ಜನ್ಮಸ್ಥಳ ಅಭಿವೃದ್ಧಿಪಡಿಸಿದ್ದರು. ಈಗ ಆ ಜಾಗಕ್ಕೆ ರೈಲು ಕೂಡ ನಿಲುಗಡೆಯಾಗಿ ದೊಡ್ಡ ಪ್ರವಾಸಿತಾಣವಾಗಲಿದೆ. ಮಹಾರಾಷ್ಟ್ರದ ಸೇವಾಲಾಲ್‌ಗೆ ಸಂಬಂಧಿಸಿದ ಬಾಯಗಢ ಅಭಿವೃದ್ಧಿಗೆ 450 ಕೋಟಿ ರು.ಗಳನ್ನು ಮೋದಿ ಸರ್ಕಾರ ನೀಡಿದೆ. ಸದಾಕಾಲ ಬಿಎಸ್‌ವೈ ಕುಟುಂಬ ನಿಮ್ಮ ಜೊತೆಗಿದೆ. ನಿಮಗಾದ ಅನ್ಯಾಯದ ವಿರುದ್ಧ ಧ್ವನಿ ಎತ್ತುತ್ತೇವೆ ಎಂದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಕೆ.ಬಿ.ಅಶೋಕ್ ನಾಯ್ಕ್, ಬಂಜಾರ ಸಮುದಾಯದ ಗುರುಗಳಾದ ಸೈನಾ ಭಗತ್ ಮಹಾರಾಜ್, ಕೆ.ಜೆ.ನಾಗೇಶ್ ನಾಯ್ಕ್, ಬಸವರಾಜ್ ನಾಯ್ಕ್, ನಾನ್ಯಾನಾಯ್ಕ್, ಜಗದೀಶ್ ನಾಯ್ಕ್, ನಾಗರಾಜ್ ನಾಯ್ಕ್, ಗಂಗಾನಾಯ್ಕ್, ರಮೇಶ್ ನಾಯ್ಕ್, ಶಿವಾನಾಯ್ಕ್, ಗಿರೀಶ್ ನಾಯ್ಕ್, ಆನಂದ್ ನಾಯ್ಕ್, ಭದ್ರಾವತಿ ಹಾಗೂ ಶಿವಮೊಗ್ಗ ತಾಲೂಕಿನ 10ಕ್ಕೂ ಅಧಿಕ ತಾಂಡಾಗಳ ಪ್ರಮುಖರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.