ಸಾರಾಂಶ
ಕನ್ನಡಪ್ರಭ ವಾರ್ತೆ ಬೀದರ್
ಸಮಕಾಲೀನ ಸಾಹಿತ್ಯದಲ್ಲಿ ಯುವಕರ ಮಾನಸಿಕತೆ ಕುರಿತು ಒಂದು ದಿನದ ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣವನ್ನು ಬೀದರ್ ವಿಶ್ವವಿದ್ಯಾಲಯ ಕುಲಪತಿಗಳಾದ ಡಾ.ಬಿ.ಎಸ್.ಬಿರಾದಾರ ಉದ್ಘಾಟಿಸಿದರು.ನಗರದ ಬಿ.ವಿ.ಭೂಮರಡ್ಡಿ ಪದವಿ ಮಹಾವಿದ್ಯಾಲಯದಲ್ಲಿ ಹಿಂದಿ ವಿಭಾಗದಿಂದ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿ, ಹಿಂದಿ ಭಾಷೆ ಇಡೀ ಭಾರತದ ಸಂವಹನ ಭಾಷೆಯಾಗಿದೆ. ಈ ಭಾಷೆಯಿಂದ ಭಾರತದ ಪ್ರತಿಯೊಂದು ರಾಜ್ಯದ ಪ್ರತಿಯೊಬ್ಬ ಪ್ರಜೆಯ ಮನಸ್ಸಿನ ಭಾವನೆಗಳನ್ನು ಅರಿತುಕೊಳ್ಳಲು ಸಹಾಯಕವಾಗುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಹಿಂದಿ ಭಾಷೆಯ ಅಧ್ಯಯನ ಮಾಡಿ ಭಾರತದ ಪರಂಪರೆಯನ್ನು ಪಸರಿಸಬೇಕೆಂದು ನುಡಿದರು.
ಕೇಂದ್ರೀಯ ನಿರ್ದೇಶಕರು ಹಿಂದಿ ಸಂಸ್ಥಾನ ಮೈಸೂರು ಕೇಂದ್ರದ ಡಾ.ರಣಜಿತ ಭಾರತಿ ಮಾತನಾಡಿ, ಹಿಂದಿ ಸಾಹಿತ್ಯ ಬಹುದೊಡ್ಡ ಕಾಣಿಕೆ ಭಾರತ ದೇಶಕ್ಕೆ ನೀಡಿದೆ. ಈ ಭಾಷೆ ಕಾಶ್ಮೀರದಿಂದ ಕನ್ಯಾ ಕುಮಾರಿವರೆಗೆ ಭಾರತದ ಜನಮನಸ್ಸಿನ ಭಾವನೆಗಳನ್ನು ಒಂದುಗೂಡಿಸಿ ದೇಶದ ಕೀರ್ತಿಯನ್ನು ಉತ್ತರದಿಂದ ದಕ್ಷಿಣಕ್ಕೆ ಹಾಗೂ ಪೂರ್ವದಿಂದ ಪಶ್ಚಿಮಕ್ಕೆ ಹರಡಲು ಕಾರಣೀಭೂತವಾಗಿದೆ ಎಂದು ನುಡಿದರು.ಕರ್ನಾಟಕ ವಿಶ್ವವಿದ್ಯಾಲಯದ ಧಾರವಾಡ ಹಿಂದಿ ವಿಭಾಗದ ಮುಖ್ಯಸ್ಥರಾದ ಪ್ರೊ.ಎಸ್.ಕೆ.ಪವಾರ ಮುಖ್ಯ ಭಾಷಣಕಾರರಾಗಿ ಪಾಲ್ಗೊಂಡು ನಮ್ಮ ಹಿಂದಿ ಭಾಷೆ, ಆದಿವಾಸಿ ಜನಾಂಗ, ಬುಡಕಟ್ಟು ಜನಾಂಗ ಹಾಗೂ ಆರಣ್ಯದಲ್ಲಿ ವಾಸ ಮಾಡುವ ಸೋಲಿಗ ಜನಾಂಗದವರನ್ನು ಸಹ ಭಾರತ ದೇಶದ ಭವ್ಯತೆಗೆ ಹಿಡಿದ ಕನ್ನಡಿ ಹಿಂದಿ ಭಾಷೆಯಾಗಿದೆ ಎಂದರು.
ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು ಹಾಗೂ ಬಿ.ವಿ.ಬಿ. ಮಹಾವಿದ್ಯಾಲಯ ಮತ್ತು ಶಾಲಾ ಕಾಲೇಜುಗಳ ಸಂಚಾಲಕರಾದ ಡಾ.ರಜನೀಶ ಎಸ್. ವಾಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಹಿಂದಿ ಭಾಷೆ ಅತ್ಯಂತ ಪುರಾತನ ಭಾಷೆ ಈ ಭಾಷೆಯಿಂದ ಭಾರತದ ಪ್ರಜೆ ಯಾವುದೇ ರಾಜ್ಯದಲ್ಲಿ ಪ್ರವಾಸ ಮಾಡಿ ಅಲ್ಲಿನ ಗತವೈಭವವನ್ನು ತಿಳಿದುಕೊಂಡು ನಮ್ಮ ಭಾರತದ ಭವ್ಯ ಸಂಸ್ಕೃತಿಯನ್ನು ಇಂದಿನ ವಿದ್ಯಾರ್ಥಿಗಳು ಅರಿತು ವಿದೇಶಗಳಲ್ಲಿ ಸಹ ಹಿಂದಿ ಭಾಷೆಯ ಜನಜಾಗೃತಿಯನ್ನು ಮೂಡಿಸಿ ಭಾರತದ ಕೀರ್ತಿ ಪತಾಕೆಯನ್ನು ಹಾರಿಸಬೇಕೆಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.ದೇಶದ ವಿವಿಧ ವಿಶ್ವವಿದ್ಯಾಲಯ ಹಾಗೂ ಮಹಾವಿದ್ಯಾಲಯಗಳಿಂದ ಸುಮಾರು 148 ಪ್ರೌಢ ಪ್ರಬಂಧಗಳು ಬಂದಿವೆ. ಹಿಂದಿ ವಿಭಾಗದ ಮುಖ್ಯಸ್ಥರಾದ ಡಾ.ದೀಪಾ ರಾಗ, ಮಹಾವಿದ್ಯಾಲಯದ ಪ್ರಾಂಶು ಪಾಲ ಡಾ.ಪಿ.ವಿಠ್ಠಲ ರಡ್ಡಿ, ಮಾರುತಿ ಭೀಮಣ್ಣಾ, ನೂರ ಪಾಶಾ, ವಿವಿಧ ರಾಜ್ಯಗಳ ವಿಶ್ವವಿದ್ಯಾಲಯದಿಂದ, ಮಹಾವಿದ್ಯಾಲಯದಿಂದ ಅನೇಕ ಪ್ರತಿನಿಧಿಗಳು ಆಗಮಿಸಿದ್ದರು.