ಸಾರಾಂಶ
ವಿಶ್ವ ಸಂಸ್ಥೆಯು ಜೂ.30ನ್ನು ‘ಅಂತಾರಾಷ್ಟ್ರೀಯ ಕ್ಷುದ್ರಗ್ರಹ ದಿನ’ ಎಂದು ಅನುಮೋದಿಸಿ, ಕ್ಷುದ್ರಗ್ರಹಗಳಿಂದಾಗಬಹುದಾದ ಅಪಾಯಗಳ ಬಗ್ಗೆ ಜಾಗತಿಕ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲು ಕರೆ ನೀಡಿದೆ. ಅದರಂತೆ ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಈ ದಿನವನ್ನು ಆಚರಿಸಲಾಯಿತು.
ಕನ್ನಡಪ್ರಭ ವಾರ್ತೆ ಮಂಗಳೂರು
1908ರ ಜೂನ್ 30ರಂದು ಸೈಬೀರಿಯಾದ ತುಂಗುಸ್ಕಾ ಎಂಬ ಪ್ರದೇಶದಲ್ಲಿ ಕ್ಷುದ್ರಗ್ರಹವೊಂದು ಭೂಮಿಯೆಡೆಗೆ ಉರಿದು ಬೀಳುತ್ತಾ ಅಪ್ಪಳಿಸಿ ಅಪಾರ ಹಾನಿ ಸಂಭವಿಸಿತ್ತು. ಇಂತಹ ಸಂಭವನೀಯ ಘಟನೆಗಳ ಬಗ್ಗೆ ಅರಿವು ಮೂಡಿಸಲು ವಿಶ್ವ ಸಂಸ್ಥೆಯು ಜೂ.30ನ್ನು ‘ಅಂತಾರಾಷ್ಟ್ರೀಯ ಕ್ಷುದ್ರಗ್ರಹ ದಿನ’ ಎಂದು ಅನುಮೋದಿಸಿ, ಕ್ಷುದ್ರಗ್ರಹಗಳಿಂದಾಗಬಹುದಾದ ಅಪಾಯಗಳ ಬಗ್ಗೆ ಜಾಗತಿಕ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲು ಕರೆ ನೀಡಿದೆ. ಅದರಂತೆ ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಈ ದಿನವನ್ನು ಆಚರಿಸಲಾಯಿತು.ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದ ವೈಜ್ಞಾನಿಕಾಧಿಕಾರಿ ವಿಘ್ನೇಶ್ ಭಟ್ ಉಪನ್ಯಾಸ ನೀಡಿ, ಕ್ಷುದ್ರಗ್ರಹ ದಿನದ ಇತಿಹಾಸ, ಸೌರವ್ಯೂಹ, ಕ್ಷುದ್ರಗ್ರಹಗಳ ರಚನೆ, ಕ್ಷುದ್ರಗ್ರಹಗಳ ಮಹತ್ವ ಮತ್ತು ಅವುಗಳಿಂದ ಆಗುವ ಅಪಾಯಗಳು, ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿರುವ ಉಪಗ್ರಹಾಧಾರಿತ ಪ್ರಯೋಗಗಳು ಇತ್ಯಾದಿಗಳ ಬಗ್ಗೆ ವಿವರಿಸಿದರು.ನಂತರ ವಿಶೇಷ ಪ್ರಾತ್ಯಕ್ಷಿಕೆಗಳು, ತಾರಾಲಯದಲ್ಲಿ ಲೈವ್ ಅಸ್ಟ್ರೋನಾಮಿ ಶೋ ಜತೆಗೆ ತಾರಾಲಯ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಭಾಗವಹಿಸಿದ ವಿದ್ಯಾರ್ಥಿಗಳು ಕೇಂದ್ರದ ಗ್ಯಾಲರಿಗಳ ಮಾದರಿ ವೀಕ್ಷಣೆ ಮಾಡಿದರು. ಸುಮಾರು 150 ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು ಭಾಗವಹಿಸಿದ್ದರು.ಕೇಂದ್ರದ ಕ್ಯುರೇಟರ್ ಜಗನ್ನಾಥ ಕಾರ್ಯಕ್ರಮ ನಿರ್ವಹಿಸಿದರು. ಸಿಬ್ಬಂದಿಗಳಾದ ಹೃತಿಕ್, ಅಂಬಿಕಾ, ಸಹನಾ, ರಶ್ಮಿ, ವಿರೂಪಾಕ್ಷಯ್ಯ ವಿ, ವಿಕ್ಟರ್ ವಿಮಲಾನಾದನ್ ಹಾಗೂ ವಂದನಾ ಪ್ರಮೋದ್ ಕುಮಾರ್ ಸಹಕರಿಸಿದರು.