ಕೊಡಗಹಳ್ಳಿ ಗೋಮಾಳ ಖಾಸಗಿ ವ್ಯಕ್ತಿಗಳಿಗೆ ಮಂಜೂರು: ರೈತ ಸಂಘಗಳ ಪ್ರತಿಭಟನೆ

| Published : Jul 03 2025, 11:47 PM IST / Updated: Jul 03 2025, 11:48 PM IST

ಸಾರಾಂಶ

ಕೊಡಗಹಳ್ಳಿ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆಗೆ ಸೇರಿದ ಜಾಗ ಎಷ್ಟು ಎನ್ನುವುದು ನಿಖರವಾಗಿ ತಿಳಿದಿಲ್ಲ. ಮರ ಕಡಿದಿರುವ ಇಬ್ಬರು ವ್ಯಕ್ತಿಗಳ ವಿರುದ್ಧ ಎಫ್ ಐಆರ್ ದಾಖಲು ಮಾಡಲಾಗಿದೆ. ರೈತರು ಹೇಳುತ್ತಿರುವಷ್ಟು ಎಕರೆ ವ್ಯಾಪ್ತಿಯಲ್ಲಿ ಮರಗಳನ್ನು ಕಡಿದಿಲ್ಲವೆಂದು ಜಾರಿಕೆ ಉತ್ತರ ನೀಡಲು ಮುಂದಾದಾಗ ರೈತರು ಅವರನ್ನು ತರಾಟೆ ತೆಗೆದುಕೊಂಡರು.

ಕನ್ನಡಪ್ರಭ ವಾರ್ತೆ ಮಂಡ್ಯ

ತಾಲೂಕಿನ ಕೊಡಗಹಳ್ಳಿ ಪ್ರದೇಶದ ಸರ್ವೇ ನಂ.37ರಲ್ಲಿರುವ 133 ಎಕರೆ ಸರ್ಕಾರಿ ಗೋಮಾಳದಲ್ಲಿ ಖಾಸಗಿ ವ್ಯಕ್ತಿಗಳಿಗೆ ತಲಾ 4 ಎಕರೆಯಂತೆ ಮಂಜೂರು ಮಾಡಲಾಗಿದ್ದು, 40 ರಿಂದ 50 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಬೆಲೆಬಾಳುವ ಮರಗಳನ್ನು ಕಡಿದು ಹಾಕಲಾಗಿದೆ ಎಂದು ಆರೋಪಿಸಿ ರಾಜ್ಯ ರೈತಸಂಘದ ಜೊತೆಗೂಡಿ ಗ್ರಾಮಸ್ಥರು ಗುರುವಾರ ಪ್ರತಿಭಟನೆ ನಡೆಸಿದರು.

ಕೊಡಗಹಳ್ಳಿ ಸರ್ಕಾರಿ ಗೋಮಾಳ ಸಂರಕ್ಷಣಾ ಸಮಿತಿ ಹಾಗೂ ರೈತಸಂಘದ ಕಾರ್ಯಕರ್ತರು ನಗರದ ತಾಲೂಕು ಕಚೇರಿ ಎದುರು ಅಹೋರಾತ್ರಿ ಧರಣಿ ನಡೆಸಿ ತಹಸೀಲ್ದಾರ್ ಸೇರಿದಂತೆ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು.

ಗ್ರಾಮದ ಸರ್ವೇ ನಂ.38ರಲ್ಲಿರುವ 133 ಎಕರೆ ಸರ್ಕಾರಿ ಗೋಮಾಳದಲ್ಲಿ ಅರಣ್ಯ ಇಲಾಖೆಯ 21 ಎಕರೆ ಪ್ರದೇಶವಿದೆ. ಈ ಜಮೀನಿನಲ್ಲಿ ಬೆಲೆಬಾಳುವ ಮರಗಳಾದ ಶ್ರೀಗಂಧ, ರಕ್ತಚಂದನ, ಸಿಲ್ವರ್ ಹಾಗೂ ನೀಲಗಿರಿ ಮರಗಳನ್ನು ಬೆಳೆಯಲಾಗಿತ್ತು. ಈ ಪ್ರದೇಶವನ್ನು ಅಕ್ರಮವಾಗಿ ನಾಲ್ಕು ಮಂದಿ ಖಾಸಗಿ ವ್ಯಕ್ತಿಗಳಿಗೆ ತಲಾ 4 ಎಕರೆಯಂತೆ ಅಕ್ರಮವಾಗಿ ಜಮೀನು ಮಂಜೂರು ಮಾಡಲಾಗಿದೆ ಎಂದು ಆರೋಪಿಸಿದರು.

ಗೋಮಾಳವನ್ನು ಅಕ್ರಮವಾಗಿ ಮಂಜೂರು ಮಾಡಿಸಿಕೊಂಡಿರುವವರ ಜಮೀನನ್ನು 2006ರಲ್ಲಿ ಅಂದಿನ ಉಪವಿಭಾಗಾಧಿಕಾರಿಗಳು ದಾಖಲೆ ಸಮಂಜಸವಾಗಿಲ್ಲವೆಂದು ವಜಾಗೊಳಿಸಿದ್ದರು. ನಂತರ ರಾಜ್ಯ ಉಚ್ಛ ನ್ಯಾಯಾಲಯಕ್ಕೆ ಕಣೆಯಪ್ಪ ಎಂಬುವರು ಅರ್ಜಿ ಸಲ್ಲಿಸಿದ್ದು, 2013ರಲ್ಲಿ ಅಲ್ಲಿಯೂ ವಜಾಗೊಂಡಿದೆ ಎಂದು ರೈತ ಮುಖಂಡರು ತಿಳಿಸಿದರು.

ಅಲ್ಲಿಂದ ಮುಂದೆ ಯಾವುದೇ ಪ್ರಕ್ರಿಯೆಯಿಲ್ಲದೆ ಸ್ಥಗಿತಗೊಂಡಿದ್ದ ಈ ಗೋಮಾಳ ಜಮೀನಿಗೆ 2020ರಲ್ಲಿ ಮರುಜೀವ ಬರುತ್ತದೆ. ಆನಂತರದಲ್ಲಿ ಕಣೆಯಪ್ಪ, ಸಿದ್ದಮ್ಮ, ಗಂಗಮ್ಮ ಮತ್ತು ಚಿಕ್ಕಣ್ಣ ಎಂಬುವರ ಹೆಸರಿಗೆ ತಲಾ 4 ಎಕರೆ ಜಮೀನು ಮಂಜೂರು ಮಾಡಿರುವುದಲ್ಲದೆ, 40 ರಿಂದ 50 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಬೆಲೆಬಾಳುವ ಮರಗಳನ್ನು ಅಕ್ರಮವಾಗಿ ಕಡಿದು ಸುಮಾರು 30 ಲೋಡ್‌ಗಳಷ್ಟು ಮರಗಳನ್ನು ಅಕ್ರಮವಾಗಿ ಸಾಗಣೆ ಮಾಡಲಾಗಿದೆ ಎಂದು ದೂಷಿಸಿದರು.

ಸರ್ಕಾರಿ ಗೋಮಾಳ ಜಮೀನನ್ನು ನೀಡುವಂತೆ ದರಖಾಸ್ತು ಸಮಿತಿಗೆ ಯಾರೂ ಅರ್ಜಿಯನ್ನು ಸಲ್ಲಿಸಿಲ್ಲ. ಅಕ್ರಮ ಖಾತೆ ಮಾಡಿಸಿಕೊಂಡಿರುವವರು ಕೊಡಗಹಳ್ಳಿ ಗ್ರಾಮದವರೂ ಅಲ್ಲ. ಖಾಸಗಿ ವ್ಯಕ್ತಿಗಳಿಗೆ ಅಕ್ರಮವಾಗಿ ಪರಭಾರೆ ಮಾಡಿರುವುದರ ಹಿಂದೆ ಕಂದಾಯ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳ ಕೈವಾಡವಿರುವುದು ಸ್ಪಷ್ಟವಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು, ನೌಕರರೇ ಮುಂದೆ ನಿಂತು ಮರ ಕಡಿಸಿದ್ದಾರೆ. ಆದರೆ, ಮರ ಕಡಿತಕ್ಕೆ ಸಂಬಂಧಿಸಿದಂತೆ ಯಾವುದೇ ಕ್ರಮ ಕೈಗೊಳ್ಳದ ಅರಣ್ಯ ಇಲಾಖೆ ಅಧಿಕಾರಿಗಳು ಪ್ರತಿಭಟನೆ ನಡೆಸುವ ವಿಚಾರ ತಿಳಿದು ಇತ್ತೀಚೆಗೆ ಇಬ್ಬರ ವಿರುದ್ಧ ಎಫ್ ಐಆರ್ ದಾಖಲಿಸಿದ್ದಾರೆ ಎಂದು ಟೀಕಿಸಿದರು.

ಭೂಗಳ್ಳರೊಂದಿಗೆ ಕಂದಾಯ ಇಲಾಖೆ, ಅರಣ್ಯಾಧಿಕಾರಿಗಳು ಶಾಮೀಲಾಗಿದ್ದಾರೆ. ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಅವರ ಹೆಸರಿಗೆ ಜಮೀನನ್ನು ಖಾತೆ ಮಾಡಿಕೊಡಲಾಗಿದೆ. ದನ- ಕರುಗಳಿಗೆ ಆಶ್ರಯವಾಗಿರಲೆಂಬ ಕಾರಣಕ್ಕೆ ಗೋಮಾಳ ಜಮೀನಿಗೆ ಊರಿನ ಯಾರೊಬ್ಬರೂ ದರಖಾಸ್ತು ಸಮಿತಿಯಲ್ಲಿ ಅರ್ಜಿ ಸಲ್ಲಿಸಿರಲಿಲ್ಲ. ಇದನ್ನು ದೃಷ್ಟಿಯಲ್ಲಿಟ್ಟುಕೊಂಡೇ ಖಾಸಗಿ ವ್ಯಕ್ತಿಗಳು ಕಂದಾಯ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಆಮಿಷವೊಡ್ಡಿ ಖಾತೆ ಮಾಡಿಸಿಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನಾ ನಿರತ ಸ್ಥಳಕ್ಕೆ ತಹಸೀಲ್ದಾರ್ ಮತ್ತು ಆರ್‌ಎಫ್ ಒ ನವ್ಯಶ್ರೀ ಆಗಮಿಸಿ ಪ್ರತಿಭಟನಾನಿರತರ ಅಹವಾಲುಗಳನ್ನು ಆಲಿಸಿದರು. ತಹಸೀಲ್ದಾರ್ ಶಿವಕುಮಾರ್ ಬಿರಾದಾರ್ ಅವರು ಜಿಲ್ಲಾಧಿಕಾರಿ ಮತ್ತು ಮಂಡ್ಯ ಉಪವಿಭಾಗಾಧಿಕಾರಿ ಅವರ ಆದೇಶದಂತೆ ಅವರ ಹೆಸರಿಗೆ ಖಾತೆ ಮಾಡಿಕೊಡಲಾಗಿದೆ. ನೀವು ಇದನ್ನು ಮತ್ತೆ ಉಪವಿಭಾಗಾಧಿಕಾರಿ ನ್ಯಾಯಾಲಯದಲ್ಲೇ ಪ್ರಶ್ನೆ ಮಾಡಬೇಕು. ಎಲ್ಲಿ ತಪ್ಪಾಗಿದೆ ಎಂಬುದರ ಕುರಿತು ದಾಖಲೆಗಳನ್ನು ಪರಿಶೀಲಿಸಬೇಕು ಎಂದು ಹೇಳಿದರು.

ಕೊಡಗಹಳ್ಳಿ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆಗೆ ಸೇರಿದ ಜಾಗ ಎಷ್ಟು ಎನ್ನುವುದು ನಿಖರವಾಗಿ ತಿಳಿದಿಲ್ಲ. ಮರ ಕಡಿದಿರುವ ಇಬ್ಬರು ವ್ಯಕ್ತಿಗಳ ವಿರುದ್ಧ ಎಫ್ ಐಆರ್ ದಾಖಲು ಮಾಡಲಾಗಿದೆ. ರೈತರು ಹೇಳುತ್ತಿರುವಷ್ಟು ಎಕರೆ ವ್ಯಾಪ್ತಿಯಲ್ಲಿ ಮರಗಳನ್ನು ಕಡಿದಿಲ್ಲವೆಂದು ಜಾರಿಕೆ ಉತ್ತರ ನೀಡಲು ಮುಂದಾದಾಗ ರೈತರು ಅವರನ್ನು ತರಾಟೆ ತೆಗೆದುಕೊಂಡರು.

ಅರಣ್ಯ ಇಲಾಖೆಯವರೇ ಮುಂದೆ ನಿಂತು ಕ್ರೇನ್ ತಂದು ಮರಗಳನ್ನು ಕಡಿಸಿದ್ದಾರೆ. ಅರಣ್ಯ ಇಲಾಖೆ ಜಾಗ ಎಷ್ಟಿದೆ ಎನ್ನುವುದು ತಿಳಿದಿಲ್ಲ ಎನ್ನುವ ನೀವು ಇಲಾಖೆ ದಾಖಲೆಗಳು, ಸರ್ಕಾರದ ಅಧಿಸೂಚನೆಗಳನ್ನು ಪರಿಶೀಲಿಸುವಂತೆ ಕಟುವಾಗಿ ಹೇಳಿದರು.

ಪ್ರತಿಭಟನೆಯಲ್ಲಿ ಸಾಮಾಜಿಕ ಹೋರಾಟಗಾರ ಕೆ.ಆರ್.ರವೀಂದ್ರ, ರೈತಸಂಘದ ಅಣ್ಣಯ್ಯ, ಕುಳ್ಳೇಗೌಡ, ದೇವರಾಜೇಗೌಡ, ಗಿರೀಶ, ಬಸವರಾಜು, ಹೊಂಬಾಳಯ್ಯ, ತಮ್ಮಯ್ಯ, ಅಪ್ಪಾಜಿ, ನಿಂಗರಾಜು, ಹುಲ್ಕೆರೆ ಮಹದೇವು, ಆನಂದ್, ಪ್ರಕಾಶ್, ಚಿಕ್ಕೇಗೌಡ, ಉಮೇಶ್, ಮೊಳೆಚನ್ನೇಗೌಡ, ದೊಡ್ಡಯ್ಯ, ಕರವೇ ಜಿಲ್ಲಾಧ್ಯಕ್ಷ ಎಚ್.ಡಿ.ಜಯರಾಂ, ಕಬ್ಬು ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಸಾತನೂರು ವೇಣುಗೋಪಾಲ್ ಇತರರಿದ್ದರು.