ಸಾರಾಂಶ
ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿದ ಸೇವಾ ಆವಧಿ ತೃಪ್ತಿ ಸಿಕ್ಕಿದೆ. ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಬೇಕೆಂಬ ಆಶಯದೊಂದಿಗೆ ಉತ್ತಮವಾಗಿ ಕೆಲಸ ನಿರ್ವಹಿಸಿದ್ದೇನೆ. ನನ್ನ ಸೇವೆಯನ್ನು ಗುರುತಿಸಿ ಶಿಕ್ಷಣ ಇಲಾಖೆ, ಅವ್ವೇರಹಳ್ಳಿ ಸರ್ಕಾರಿ ಶಾಲೆ ಹಾಗೂ ಸಾರ್ವಜನಿಕರು ಪ್ರೀತಿಯಿಂದ ಅಭಿನಂದಿಸುತ್ತಿರುವುದು ಮರೆಯದ ಕ್ಷಣವಾಗಿದೆ.
ಕನ್ನಡಪ್ರಭ ವಾರ್ತೆ ಮಳವಳ್ಳಿ
ಶಿಕ್ಷಕರಿಗೆ ಸಾವಿರಾರು ವಿದ್ಯಾರ್ಥಿಗಳ ಬದುಕನ್ನು ಹಸನು ಮಾಡುವ ಅವಕಾಶ ಲಭಿಸಿರುವುದು ಪುಣ್ಯವಾಗಿದ್ದು, ನಿವೃತ್ತ ಶಿಕ್ಷಕರ ಮುಂದಿನ ಜೀವನ ಸುಖಮಯವಾಗಿರಲಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಈ ಉಮಾ ತಿಳಿಸಿದರು. ತಾಲೂಕಿನ ಅವ್ವೇರಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಭಾರ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಕೊದೇನಕೊಪ್ಪಲು ದೇವರಾಜು ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿ, ಗ್ರಾಮೀಣ ಪ್ರದೇಶದ ಸಾವಿರಾರು ಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವುದು ಶಿಕ್ಷಕರ ಬೋಧನೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದರು.ವಿದ್ಯಾರ್ಥಿಗಳ ತಪ್ಪುಗಳನ್ನು ತಿದ್ದಿ ಸರಿ ದಾರಿ ತೋರಿಸುವ ಶಕ್ತಿ ಶಿಕ್ಷಕರಿಗೆ ಮಾತ್ರ ಇದೆ. ಸರ್ಕಾರಿ ನೌಕರರಿಗೆ ನಿವೃತ್ತಿ ಎನ್ನುವುದು ಸಹಜ. ಶಿಕ್ಷಕರ ವೃತ್ತಿಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗುತ್ತಿರುವ ದೇವರಾಜು ಅವರು ಸರ್ಕಾರಿ ಶಾಲೆಗಳಿಗೆ ಕೊಟ್ಟಿರುವ ಕೊಡುಗೆ ಅವಿಸ್ಮರಣೀಯ. ಅವರು ನಿವೃತ್ತಿ ದಿನಗಳಲ್ಲಿ ಕುಟುಂಬದೊಂದಿಗೆ ನೆಮ್ಮದಿಯಿಂದ ಬದುಕಲಿ ಎಂದು ಆಶಿಸಿದರು.
ಅಭಿನಂದನೆ ಸ್ವೀಕರಿಸಿದ ನಿವೃತ್ತ ಶಿಕ್ಷಕ ದೇವರಾಜು ಮಾತನಾಡಿ, ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿದ ಸೇವಾ ಆವಧಿ ತೃಪ್ತಿ ಸಿಕ್ಕಿದೆ. ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಬೇಕೆಂಬ ಆಶಯದೊಂದಿಗೆ ಉತ್ತಮವಾಗಿ ಕೆಲಸ ನಿರ್ವಹಿಸಿದ್ದೇನೆ. ನನ್ನ ಸೇವೆಯನ್ನು ಗುರುತಿಸಿ ಶಿಕ್ಷಣ ಇಲಾಖೆ, ಅವ್ವೇರಹಳ್ಳಿ ಸರ್ಕಾರಿ ಶಾಲೆ ಹಾಗೂ ಸಾರ್ವಜನಿಕರು ಪ್ರೀತಿಯಿಂದ ಅಭಿನಂದಿಸುತ್ತಿರುವುದು ಮರೆಯದ ಕ್ಷಣವಾಗಿದೆ ಎಂದರು.ಕ್ಷೇತ್ರ ಸಮನ್ವಯಾಧಿಕಾರಿ ಶ್ರೀನಿವಾಸ್, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನಯ್ಯ, ನಿವೃತ್ತ ಅಧಿಕಾರಿ ಚಿಕ್ಕಸ್ವಾಮಿ, ಶಿಕ್ಷಣ ಇಲಾಖೆಯ ಬಾಬು, ನಾಗರಾಜು, ಕೃಷ್ಣೇಗೌಡ, ಕೃಷ್ಣ ಸೇರಿದಂತೆ ಇತರರು ಇದ್ದರು.