ಬೆಂಗಳೂರು : ಒಂದು ಪ್ರಭುತ್ವದ ಜೊತೆ ಇದ್ದುಕೊಂಡು ಸೃಜನಶೀಲತೆಯನ್ನು ಕಳೆದುಕೊಳ್ಳದೆ ಪ್ರತಿನಾಯಕತ್ವದ ಲಕ್ಷಣಗಳನ್ನು ಪ್ರತಿಪಾದಿಸುವುದು ಹೇಗೆ ಎಂದು ಹೇಳಿ ಕೊಟ್ಟ ಕವಿ ಪಂಪನನ್ನು ಇಂದು ಮರೆತೇ ಬಿಟ್ಟಿದ್ದೇವೆ. ಮರ್ಯಾದೆ ಇದ್ದರೆ ಆದಿಕವಿ ಪಂಪನನ್ನು ಜಗತ್ತಿಗೆ ಪರಿಚಯಿಸಿ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಹೇಳಿದರು.

ಭಾನುವಾರ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಕಾವ್ಯ ಸಮ್ಮಿಲನ

ನಗರದ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಕಾವ್ಯ ಸಮ್ಮಿಲನ-2026ರ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇಂದು ಜಾಗತಿಕ ಮಟ್ಟದಲ್ಲಿ ಬಹುಪಾಲು ಎಲ್ಲ ರಾಷ್ಟ್ರಗಳಲ್ಲಿ ಪ್ರತಿಗಾಮಿ ಪ್ರತಿನಿಧಿಗಳು ಆಯಾ ರಾಷ್ಟ್ರಗಳನ್ನು ಪ್ರತಿನಿಧಿಸುತ್ತಿದ್ದಾರೆ. ಇದರ ಪರಿಣಾಮ ಭಾರತವೂ ಸೇರಿದಂತೆ ಅನೇಕ ರಾಷ್ಟ್ರಗಳಲ್ಲಿ ಸೃಜನಶೀಲ ಸ್ವಾತಂತ್ರ್ಯ,ಅಭಿವೃಕ್ತಿ ಸ್ವಾತಂತ್ರ್ಯ ಕುಗ್ಗಿಹೋಗಿದೆ ಎಂದರು.

ಇಂತಹ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಕ್ಷೇತ್ರದ ಆದಿಕವಿ ಪಂಪನನ್ನು ನೆನಪಿಸಿಕೊಳ್ಳಬೇಕು. ಪಂಪ 10ನೇ ಶತಮಾನದಲ್ಲಿಯೇ ಆಳುವ ಪ್ರಭುತ್ವ ಇಷ್ಟವಿಲ್ಲದಿದ್ದರೂ ಅದರ ಜೊತೆ ಇದ್ದುಕೊಂಡೇ ಸೃಜನಶೀಲತೆಯನ್ನು ಉಳಿಸಿಕೊಳ್ಳುವುದು ಹೇಗೆ ಎಂದು ನಮಗೆ ಹೇಳಿಕೊಟ್ಟಿದ್ದಾರೆ. ಅಂದಿನ ಕಾಲದಲ್ಲಿಯೇ ಪಂಪ ಜಾತೀಯತೆ ವಿರುದ್ಧ ಹೋರಾಡಿ ಅದಕ್ಕೆ ಪರ್ಯಾಯವನ್ನೂ ಹೇಳಿಕೊಟ್ಟಿದ್ದಾರೆ. ಪ್ರಭುತ್ವದ ಜೊತೆ ಇದ್ದುಕೊಂಡೇ ಪ್ರತಿರೋಧ ಒಡ್ಡುವುದು ಹೇಗೆ, ಪ್ರತಿನಾಯಕತ್ವದ ಲಕ್ಷಣಗಳನ್ನು ಪ್ರತಿಪಾದಿಸುವುದು ಹೇಗೆ ಎಂದು ಹೇಳಿಕೊಟ್ಟ ಕವಿಯನ್ನು ಇಂದು ಎಲ್ಲರೂ ಮರೆತಿದ್ದಾರೆ ಎಂದರು.


ಕಾವ್ಯ ವೈಯಕ್ತಿಕವಾದುದು, ಅದೇ ಸಂದರ್ಭದಲ್ಲಿ ಅದು ಜಾಗತಿಕವಾದುದು

ಕಾವ್ಯ ವೈಯಕ್ತಿಕವಾದುದು, ಅದೇ ಸಂದರ್ಭದಲ್ಲಿ ಅದು ಜಾಗತಿಕವಾದುದು, ಭೂಗೋಳವನ್ನು ಮೀರಿ ವಿಸ್ತರಿಸಿಕೊಳ್ಳುವಂತಹ ಗುಣ ಕವಿ, ಕಾವ್ಯಕ್ಕೆ ಅಷ್ಟೇ ಅಲ್ಲ, ಎಲ್ಲ ಸಾಹಿತ್ಯ ಪ್ರಾಕಾರ, ಸಾಂಸ್ಕೃತಿಕ ಪ್ರಾಕಾರಗಳಿಗೂ ಇದೆ ಎಂದರು.

ನಟ, ನಿರ್ದೇಶಕ ಸಂಗಮೇಶ ಉಪಾಸೆ ಹೇ ರಾಮ್ ಎಂಬ ಕವನ ಎಲ್ಲರ ಗಮನ ಸೆಳೆಯಿತು. ಐಜಿಪಿ ಬಿ.ಆರ್. ರವಿಕಾಂತೇಗೌಡ, ಮುಂಬಯಿಯ ಕನ್ನಡ ಕವಿ ಗೋಪಾಲ್ ತ್ರಾಸಿ ಕವನ ವಾಚಿಸಿದರು.

ಮಹಾರಾಷ್ಟ್ರದ ಸಾಹಿತಿ ಉದಯನ್ ವಾಜಪೇಯಿ, ಓ.ಎಲ್.ನಾಗಭೂಷಣ, ಕಜಕಿಸ್ತಾನದ ಕವಿ ಸಯಾತ್, ವಿಧಾನ ಪರಿಷತ್ ಮಾಜಿ ಸದಸ್ಯ ಮೋಹನ್ ಕೊಂಡಜ್ಜಿ, ಕವಿ ಎಲ್.ಹನುಮಂತಯ್ಯ, ನಿವೃತ್ತ ಡಿಜಿಪಿ ಅಜಯಕುಮಾರ್ ಸಿಂಗ್ ಉಪಸ್ಥಿತರಿದ್ದರು.