ಕನ್ನಡಪ್ರಭ ವಾರ್ತೆ ದಾವಣಗೆರೆ

ದಾವಣಗೆರೆ ವಿಶ್ವವಿದ್ಯಾಲಯ ವ್ಯಾಪ್ತಿಯ ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳ ಬಿ.ಇಡಿ ಕಾಲೇಜುಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳನ್ನು ನೋಂದಾಯಿಸಿಕೊಂಡು, ತರಗತಿ ಮತ್ತು ತರಬೇತಿಯನ್ನೇ ನಡೆಸದೆ ನೇರವಾಗಿ ಪರೀಕ್ಷೆ ಮಾಡಿ, ಅಂಕ ಮತ್ತು ಅಂಕ ಪಟ್ಟಿಗಳನ್ನೇ ಮಾರಾಟ ಮಾಡಿಕೊಳ್ಳಲಾಗುತ್ತಿದೆ ಎಂದು ಹೆಣ್ಣುಭ್ರೂಣ ಹತ್ಯೆ ನಿಯಂತ್ರಣ ಮತ್ತು ಮಕ್ಕಳ ಹಕ್ಕುಗಳ ರಕ್ಷಣೆಯ ಆರುಷಿ ಯೋಜನೆ ರೂವಾರಿ ಸಿ.ಎಂ.ಜಕ್ಕಾಳಿ ಆರೋಪಿಸಿದರು.

ನಗರದಲ್ಲಿ ಬುಧ‍ವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅ‍ವಳಿ ಜಿಲ್ಲೆಗಳಲ್ಲಿ ಬಿ.ಇಡಿ ತರಗತಿ, ತರಬೇತಿ ನಡೆಸದೇ, ನೇರವಾಗಿ ಪರೀಕ್ಷೆ ಮಾಡಿ, ಅಂಕ ಮತ್ತು ಅಂಕ ಪಟ್ಟಿಗಳನ್ನು ಮಾರಾಟ ಮಾಡಿಕೊಳ್ಳುತ್ತಿರುವ ಬಗ್ಗೆ ಲೋಕಾಯುಕ್ತಕ್ಕೆ ತಾವು ದೂರು ನೀಡಿದ್ದು, ದಾವಿವಿ ಕುಲ ಸಚಿವರು ಅಪೂರ್ಣ ಮತ್ತು ತನಿಖೆಯನ್ನು ದಿಕ್ಕು ತಪ್ಪಿಸುವ ವರದಿ ನೀಡಿರುವ ಹಿನ್ನೆಲೆಯಲ್ಲಿ ಇಡೀ ಪ್ರಕರಣವನ್ನು ಉನ್ನತ ಮಟ್ಟದ ತನಿಖೆಗೊಪ್ಪಿಸುವಂತೆ ಮತ್ತೆ ಲೋಕಾಯುಕ್ತರ ಮೊರೆ ಹೋಗಲಿದ್ದೇವೆ ಎಂದರು.

ಬಿ.ಇಡಿ ಕಾಲೇಜುಗಳ ಪ್ರಾರಂಭಕ್ಕೆ ಮಾನ್ಯತೆ(ಸಂಯೋಜನೆ) ಆದೇಶ ನೀಡುವ ಮತ್ತು ವಾರ್ಷಿಕವಾರು ಸಂಯೋಜನೆ ನೀಡುವ ಪ್ರಾಧಿಕಾರ, ಕಾಲೇಜುಗಳಿಗೆ ಪ್ರಾಚಾರ್ಯರು, ಉಪನ್ಯಾಸಕರ ನೇಮಕಾತಿಗೆ ವಿದ್ಯಾರ್ಹತೆಗಳು, ವೇತನ ಇತ್ಯಾದಿ ನಿಯಮಗಳು ಹಾಗೂ ವಿದ್ಯಾರ್ಥಿಗಳಿಗೆ ತರಗತಿ, ತರಬೇತಿ ನಡೆಸುವ ನಿಯಮಗಳು, ದಾಖಲಾತಿಗಳು, ಹಾಜರಾತಿ, ಪಠ್ಯಕ್ರಮಗಳು, ಬೋಧನಾ ಕ್ರಮಗಳು, ಬಿ.ಇಡಿ ಕಾಲೇಜು ಸಂಪೂರ್ಣ ನಿಯಂತ್ರಣ‍ನ್ನು ದಾವಿವಿ ಕುಲಪತಿ, ಕುಲ ಸಚಿವರು ಹೊಂದಿರುತ್ತಾರೆ ಎಂದು ತಿಳಿಸಿದರು.

ಅವಳಿ ಜಿಲ್ಲೆಗಳಲ್ಲಿ 34 ಬಿ.ಇಡಿ ಕಾಲೇಜುಗಳಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ 2-3 ಸೆಮಿಸ್ಟರ್ ರೂಢಿ ಪಾಠ ಬೋಧನೆಯ ಹಾಗೂ 4ನೇ ಸೆಮಿಸ್ಟರ್‌ನ ನಿಕಟ ಪೂರ್ವ ತರಬೇತಿ ನಡೆಸಿಲ್ಲವೆಂದು ಪ್ರಾಚಾರ್ಯರು, ಪದ ನಿಮಿತ್ತ ಹ ನಿರ್ದೇಶಕರು, ಶಿಕ್ಷಕರ ಸರ್ಕಾರಿ ಶಿಕ್ಷಣ ಮಹಾ ವಿದ್ಯಾಲಯ, ಸ್ಟೇಡಿಯಂ ಜೋಡು ರಸ್ತೆ, ಚಿತ್ರದುರ್ಗ ಹಾಗೂ ಅವಳಿ ಜಿಲ್ಲೆಯ ಶಾಲಾ ಶಿಕ್ಷಣ ಇಲಾಖೆ ಕಚೇರಿ ದಾಖಲೆಗಳು ದೃಢೀಕರಿಸುತ್ತಿವೆ. ಶಾಲಾ ಶಿಕ್ಷಣ ಇಲಾಖೆಯ ಯಾವುದೇ ಅಧಿಕಾರಿಗಳಿಗೆ ಬಿ.ಇಡಿ ಕಾೇಜುಗಳ ಪ್ರಾರಂಭ ಯಾವುದೇ ಸಮಿತಿಯಲ್ಲೂ ಅವಕಾಶ ಇಲ್ಲ ಎಂದು ಹೇಳಿದರು.


ಮಾನ್ಯತೆ ನವೀಕರಣಕ್ಕೆ ಮಾಡಿದ ಯಾವುದೇ ಮಾಹಿತಿಯನ್ನು ವಿವಿಯಿಂದ ಅಥವಾ ಬಿ.ಇಡಿ ಕಾಲೇಜುಗಳಿಂದ ಸೌಜನ್ಯಕ್ಕೂ ಸಹ ನೀಡುವುದಿಲ್ಲ. ವಿವಿಯಾಗಲೀ, ಬಿ.ಇಡಿ ಕಾಲೇಜುಗಳ ನಿಯಂತ್ರಣ ಶಾಲಾ ಶಿಕ್ಷಣ ಇಲಾಖೆಯ ಯಾವುದೇ ಅಧಿಕಾರಿಗಳ ವ್ಯಾಪ್ತಿಗೊಳಪಡುವುದಿಲ್ಲ. ಇಂತಹ ಸ್ಥಿತಿಯಲ್ಲಿರುವ ಶಾಲಾ ಶಿಕ್ಷಣ ಅಧಿಕಾರಿಗಳ ಮೇಲೆ ರೂಢಿ ಪಾಠ ಬೋಧನೆ ಮತ್ತು ನಿಕಟ ಪೂರ್ವ ಸೇವಾ ತರಬೇತಿಗಳ ವೈಫಲ್ಯದ ಹೊಣೆಗಾರಿಕೆ ಕುಲ ಸಚಿವರು ಮಾಡುತ್ತಿರುವುದು ತಪ್ಪು ಕ್ರಮವಾಗಿದೆ ಎಂದಿದ್ದಾರೆ.

ಅತಂತ್ರ ಸ್ಥಿತಿಯಲ್ಲಿರುವ ಪ್ರಾಚಾರ್ಯರ ಮೇಲೆ ಹೊಣೆಗಾರಿಕೆ ಕುಲ ಸಚಿವರು ಮಾಡುತ್ತಿರುವುದು ತಪ್ಪು ಕ್ರಮವಾಗಿದೆ. ಈ ಬಗ್ಗೆ ಸೂಕ್ತ ತನಿಖೆ ಮಾಡಿ, ತರಗತಿ ಹಾಗೂ ತರಬೇತಿಗೆ ಹಾಜರಾಗದೇ ಅಂಕ ಮತ್ತು ಅಂಕಪಟ್ಟಿಯನ್ನು ಕೊಂಡುಕೊಂಡಿರುವ ಪ್ರತಿಯೊಬ್ಬರ ಬಿ.ಇಡಿ ಪದವಿ ಪ್ರಮಾಣಪತ್ರವನ್ನು ಮತ್ತು ಅಂಕ ಪಟ್ಟಿಯನ್ನು ಅಮಾನ್ಯಗೊಳಿಸುವಂತೆ ಈಗಾಗಲೇ ಸರ್ಕಾರಿ ಶಿಕ್ಷಕರ ಹುದ್ದೆಯನ್ನು ಪಡೆದ ಪ್ರತಿಯೊಬ್ಬರನ್ನೂ ಹುದ್ದೆಯಿಂದ ಶಾಶ್ವತವಾಗಿ ವಜಾಗೊಳಿಸುವಂತೆ ಲೋಕಾಯುಕ್ತಕ್ಕೆ ಮನವಿ ಸಲ್ಲಿಸಲಾಗಿದೆ ಎಂದರು.

ಹೊನ್ನಾಳಿ ತಾಲೂಕು ಬಣಜಾರ ಸಂಘದ ಕಾರ್ಯದರ್ಶಿ ಡಿ.ಮಂಜಾನಾಯ್ಕ ಇತರರು ಇದ್ದರು.

ದಾವಿವಿ ವ್ಯಾಪ್ತಿಯ ಬಿ.ಇಡಿ ಕಾಲೇಜುಗಳ ವಿಚಾರವಾಗಿ ತಾವು ಹೋರಾಟ ಶುರು ಮಾಡಿದಾಗಿನಿಂದ ಕೆಲವರಿಂದ ತಮಗೆ ಬೆದರಿಕೆ ಮಾತುಗಳು ಕೇಳಿ ಬರುತ್ತಿವೆ. ಈ ಹಿನ್ನೆಲೆಯಲ್ಲಿ ತಮಗೆ, ತಮ್ಮ ಕುಟುಂಬಕ್ಕೆ ಸೂಕ್ತ ರಕ್ಷಣೆ ಭದ್ರತೆ ಕಲ್ಪಿಸುವಂತೆ ರಾಜ್ಯ ಪೊಲೀಸ್ ಮಹಾ ನಿರೀಕ್ಷಕರಿಗೆ ಭೇಟಿ ಮಾಡಿ, ಮನವಿ ಅರ್ಪಿಸಲಿದ್ದೇನೆ.

ಸಿ.ಎಂ.ಜಕ್ಕಾಳಿ ಆರುಷಿ ಯೋಜನೆ ರೂವಾರಿ.