ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸುವುದು ಶಿಕ್ಷಕರ ಜವಾಬ್ದಾರಿ: ಸಚಿವ ಎನ್.ಚಲುವರಾಯಸ್ವಾಮಿ

| Published : Sep 11 2025, 12:03 AM IST

ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸುವುದು ಶಿಕ್ಷಕರ ಜವಾಬ್ದಾರಿ: ಸಚಿವ ಎನ್.ಚಲುವರಾಯಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ಶಿಕ್ಷಕರ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ವಿವಿಧ ಕ್ರೀಡೆ, ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದ ಶಿಕ್ಷಕರಿಗೆ ಬಹುಮಾನ ವಿತರಿಸಲಾಯಿತು. ಸೇವಾ ನಿವೃತ್ತಿ ಹೊಂದಿದ 40ಕ್ಕೂ ಹೆಚ್ಚು ನಿವೃತ್ತ ಶಿಕ್ಷಕರು ಮತ್ತು 80ವರ್ಷ ವಯೋಮಾನದ ಹಿರಿಯ ಶಿಕ್ಷಕರನ್ನು ಗೌರವಿಸಲಾಯಿತು.

ಕನ್ನಡಪ್ರಭ ವಾರ್ತೆ ನಾಗಮಂಗಲ

ಮಕ್ಕಳಿಗೆ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರ ಕಲಿಸಿ, ದೇಶದ ಬಗ್ಗೆ ಅಭಿಮಾನದ ಅರಿವು ಮೂಡಿಸುವುದು ಪ್ರತಿಯೊಬ್ಬ ಶಿಕ್ಷಕರ ಜವಾಬ್ದಾರಿ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.

ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ ನಡೆದ ಶಿಕ್ಷಕರ ದಿನಾಚರಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಶಿಕ್ಷಕರ ಸಮಸ್ಯೆ ಮತ್ತು ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಬದ್ಧವಾಗಿ ನಿಮ್ಮ ಜೊತೆ ನಿಂತಾಗ ಶಿಕ್ಷಕರಾದ ನೀವು ಸಮಾಜ ಮತ್ತು ಸಮುದಾಯಕ್ಕೆ, ನಾವು ಯಾವ ರೀತಿ ಕೊಡುಗೆ ನೀಡಬೇಕೆಂಬುದನ್ನು ಬಹು ಮುಖ್ಯವಾಗಿ ಯೋಚಿಸಬೇಕಿದೆ ಎಂದರು.

ಮಕ್ಕಳನ್ನು ಚಿಕ್ಕ ವಯಸ್ಸಿನಲ್ಲಿಯೇ ಸರಿಯಾದ ರೀತಿಯಲ್ಲಿ ತಿದ್ದುವ ಅವಕಾಶವಿರುವುದು ಪೋಷಕರನ್ನು ಬಿಟ್ಟರೆ ಶಿಕ್ಷಕರಿಗೆ ಮಾತ್ರ. ಶಿಕ್ಷಕರೆಂದರೆ ಕೇವಲ ಮಕ್ಕಳಿಗೆ ಪಾಠ ಮಾಡಿ ಪರೀಕ್ಷೆಯಲ್ಲಿ ಪಾಸ್ ಮಾಡಿಸುವುದಷ್ಟೇ ಅಲ್ಲ. ಸಮಾಜದ ಬದಲಾವಣೆಗೆ ಜನರನ್ನು ಪರಿವರ್ತನೆ ಮಾಡುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ಹೇಳಿದರು.

ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಬದ್ಧತೆ ಬೆಳೆಯಬೇಕು. ದೇಶದ ಬಗ್ಗೆ ಗೌರವ, ಪ್ರೀತಿ ಹೆಚ್ಚಾಗುವ ರೀತಿಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಹಂತದಲ್ಲಿಯೇ ಶಿಕ್ಷಕರು ಮಕ್ಕಳಿಗೆ ಕಲಿಸಬೇಕು. ಇಲ್ಲದಿದ್ದರೆ ಐಎಎಸ್, ಐಪಿಎಸ್ ಶಿಕ್ಷಣ ಪಡೆದು ಬರುವ ಅನೇಕರು ಆಡಳಿತದಲ್ಲಿ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಧ್ಯತೆ ಇದೆ. ಹಾಗಾಗಿ ಶಿಕ್ಷಕರು ಹೆಚ್ಚು ಜವಾಬ್ದಾರಿ ವಹಿಸಿ ಮಕ್ಕಳ ಮನಸ್ಸಿನ ಮೇಲೆ ಪರಿಣಾಮ ಬೀರಬೇಕು ಎಂದರು.

ಜಿಪಂ ಸಿಇಒ ಕೆ.ಆರ್.ನಂದಿನಿ ಮಾತನಾಡಿ, ಮೌಲ್ಯ, ಸಂಸ್ಕೃತಿ, ಸಂಸ್ಕಾರ, ಕಲೆ ಮತ್ತು ಸಾಹಿತ್ಯವನ್ನು ಗುರು ಮುಖೇನ ಕಲಿಯಬೇಕು ಹೊರತು, ಯಾವುದೇ ಎಐ ಮೂಲಕ ಕಲಿಯಲು ಸಾಧ್ಯವಿಲ್ಲ. ಹಾಗಾಗಿ ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣ ಕಲಿಸುವ ಮೂಲಕ ಅವರನ್ನು ಉತ್ತಮ ಸ್ಥಾನಕ್ಕೇರಿಸುವಂತಹ ಗುರುತರ ಜವಾಬ್ದಾರಿ ಎಲ್ಲಾ ಶಿಕ್ಷಕರ ಮೇಲಿದೆ ಎಂದರು.

ಈ ಹಿಂದೆ ಗುರುಗಳು ಹೇಳುತ್ತಿದ್ದ ಮಾತುಗಳು ಮಕ್ಕಳಿಗೆ ವೇದವಾಕ್ಯ, ಗುರು ತೋರಿದ ದಾರಿ ಪರಮ ಪವಿತ್ರವಾಗುತ್ತಿತ್ತು. ಆದರೀಗ ಒಂದು ಮಗುವಿಗೆ ಎರಡು ನಿಮಿಷ ಏಕಾಗ್ರತೆ ಚಿತ್ತವಾಗಿ ಪಾಠ ಕಲಿಸಬೇಕೆಂದರೆ ಎಲ್ಲಾ ಶಿಕ್ಷಕರಿಗೂ ಕಷ್ಟವಾಗುತ್ತದೆ. ಹಾಗಾಗಿ ಪಠ್ಯ ಪುಸ್ತಕದಲ್ಲಿರುವ ಪಾಠಗಳನ್ನು ಮಾತ್ರ ಕಲಿಸಿದರೆ ಗುರುಗಳ ಸ್ಥಾನಮಾನಕ್ಕಿರುವ ಸವಾಲುಗಳನ್ನು ಅಳಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು.

ಮಕ್ಕಳಿಗೆ ಹೊಟ್ಟೆ ಹಸಿವನ್ನು ನೀಗಿಸುವ ಮತ್ತು ಉತ್ತಮ ಬದುಕನ್ನು ಕಟ್ಟಿಕೊಡುವ ಎರಡು ಬಗೆಯ ವಿದ್ಯೆಯನ್ನು ಕಲಿಸಿದರೆ ಯಾವುದೇ ಕೃತಕ ಬುದ್ಧಿಮತೆ (ಎಐ) ಬಂದರೂ ಸಹ ನಮ್ಮ ಗುರು ಪರಂಪರೆಯನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ತಿಳಿಸಿದರು.

ಶಿಕ್ಷಕರ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ವಿವಿಧ ಕ್ರೀಡೆ, ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದ ಶಿಕ್ಷಕರಿಗೆ ಬಹುಮಾನ ವಿತರಿಸಲಾಯಿತು. ಸೇವಾ ನಿವೃತ್ತಿ ಹೊಂದಿದ 40ಕ್ಕೂ ಹೆಚ್ಚು ನಿವೃತ್ತ ಶಿಕ್ಷಕರು ಮತ್ತು 80ವರ್ಷ ವಯೋಮಾನದ ಹಿರಿಯ ಶಿಕ್ಷಕರನ್ನು ಗೌರವಿಸಲಾಯಿತು.

ಇದಕ್ಕೂ ಮುನ್ನ ಡಾ.ಸರ್ವಪಲ್ಲಿ ರಾಧಾಕೃಷ್ಣನ್‌ರವರ ಬೃಹತ್ ಭಾವಚಿತ್ರವನ್ನು ಅಲಂಕರಿಸಿದ್ದ ಎತ್ತಿನಗಾಡಿಯಲ್ಲಿರಿಸಿ ಟಿ.ಬಿ. ಬಡಾವಣೆಯ ಬಿಜಿಎಸ್ ವೃತ್ತದಿಂದ ಕಾಲೇಜುವರೆಗೆ ಮೆರವಣಿಗೆ ನಡೆಸಲಾಯಿತು.

ಸಮಾರಂಭದಲ್ಲಿ ಪುರಸಭಾ ಉಪಾಧ್ಯಕ್ಷೆ ವಸಂತಲಕ್ಷ್ಮೀ, ತಹಸೀಲ್ದಾರ್ ಜಿ.ಆದರ್ಶ, ತಾಪಂ ಇಒ ಸತೀಶ್, ಡಿವೈಎಸ್‌ಪಿ ಬಿ.ಚಲುವರಾಜು, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಲೋಕೇಶ್, ಡಯಟ್‌ನ ಉಪನಿರ್ದೇಶಕ ಕೆ.ಯೋಗೇಶ್, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೆ.ನಾಗೇಶ್, ತಾಲೂಕು ಘಟಕದ ಅಧ್ಯಕ್ಷ ಜೆ.ವೈ.ಮಂಜುನಾಥ್, ನಿವೃತ್ತ ಶಿಕ್ಷಕ ಬಿ.ಎಂ.ಪ್ರಕಾಶ್, ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷ ರುದ್ರೇಶ್, ಪುರಸಭೆ ಮುಖ್ಯಾಧಿಕಾರಿ ಶ್ರೀನಿವಾಸ್ ಸೇರಿ ಹಲವರು ಇದ್ದರು.