ಕಡ್ಡಾಯ ಮತದಾನ, ಚುನಾವಣೆಗಳನ್ನು ರಾಜಕೀಯ ಪಕ್ಷಗಳ ಬದಲಿಗೆ ಸರ್ಕಾರವೇ ನಡೆಸುವುದು ಸೇರಿದಂತೆ ಪ್ರಮುಖ ಸುಧಾರಣೆಗಳನ್ನು ಮಾಡಿದಾಗ ಮಾತ್ರ ವ್ಯವಸ್ಥೆ ಸರಿ ಪಡಿಸುವುದಕ್ಕೆ ಸಾಧ್ಯ ಎಂದು ಹಿರಿಯ ಕಲಾವಿದ, ಎಎಪಿ ರಾಜ್ಯಾಧ್ಯಕ್ಷ ಡಾ.ಮುಖ್ಯಮಂತ್ರಿ ಚಂದ್ರು ಅಭಿಪ್ರಾಯಪಟ್ಟರು.
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ಕಡ್ಡಾಯ ಮತದಾನ, ಚುನಾವಣೆಗಳನ್ನು ರಾಜಕೀಯ ಪಕ್ಷಗಳ ಬದಲಿಗೆ ಸರ್ಕಾರವೇ ನಡೆಸುವುದು ಸೇರಿದಂತೆ ಪ್ರಮುಖ ಸುಧಾರಣೆಗಳನ್ನು ಮಾಡಿದಾಗ ಮಾತ್ರ ವ್ಯವಸ್ಥೆ ಸರಿ ಪಡಿಸುವುದಕ್ಕೆ ಸಾಧ್ಯ ಎಂದು ಹಿರಿಯ ಕಲಾವಿದ, ಎಎಪಿ ರಾಜ್ಯಾಧ್ಯಕ್ಷ ಡಾ.ಮುಖ್ಯಮಂತ್ರಿ ಚಂದ್ರು ಅಭಿಪ್ರಾಯಪಟ್ಟರು.ಚಿಕ್ಕಮಗಳೂರಿನ ಶಾರದಾ ಸ್ಕೂಲ್ ಆಫ್ ಲಾ ಹಾಗೂ ಮೈಸೂರಿನ ದಾರಿ ಫೌಂಡೇಷನ್ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ ‘ಭವಿಷ್ಯದಲ್ಲಿ ಪ್ರಜಾಪ್ರಭುತ್ವದ ರಕ್ಷಣೆ ಜವಾಬ್ದಾರಿ ಯುವ ಶಕ್ತಿಯ ಕೈಯಲ್ಲಿ ಮುಕ್ತ- ಸಂವಾದ’ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಡಾ.ಬಿ,ಆರ್.ಅಂಬೇಡ್ಕರ್ ಸಂವಿಧಾನದ ಆಶಯಗಳು ಇಂದಿಗೂ ಈಡೇರಿಲ್ಲ. ಸಂವಿಧಾನದ ವಿರುದ್ಧ ನಡೆಯುತ್ತಿದ್ದೇವೆ. ಪ್ರಜೆಗಳನ್ನು ಗುಲಾಮರಾಗಿ ಮಾಡಿಕೊಳ್ಳಲಾಗಿದೆ. ಈ ವ್ಯವಸ್ಥೆ ಸುಧಾರಣೆ ಆಗಬೇಕಾದರೆ, ಕಡ್ಡಾಯ ಮತದಾನ ವ್ಯವಸ್ಥೆ ಜಾರಿಗೊಳಿಸಬೇಕು. ಜತೆಗೆ, ಐದು ವರ್ಷಕ್ಕೆ ಆಯ್ಕೆ ಮಾಡಿದ ಜನಪ್ರತಿನಿಧಿ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದರೆ, ಆ ಜನಪ್ರತಿನಿದಿಯನ್ನು ಕೆಳಗೆ ಇಳಿಸುವ ವ್ಯವಸ್ಥೆ ಇರಬೇಕು. ಮುಖ್ಯವಾಗಿ ಸದ್ಯ ರಾಜಕೀಯ ಪಕ್ಷಗಳು ನಡೆಸುತ್ತಿರುವ ಚುನಾವಣೆಯನ್ನು ಸರ್ಕಾರವೇ ನಡೆಸಬೇಕು. ಅಭ್ಯರ್ಥಿಯಿಂದ ನಿಗದಿತ ಪ್ರಮಾಣದಷ್ಟು ಹಣ ಪಡೆದು, ಪ್ರಚಾರ ಕಾರ್ಯವನ್ನು ಸರ್ಕಾರವೇ ಮಾಡಬೇಕು. ಹಣ, ಮದ್ಯ ಹಂಚಿಕೆ ಮಾಡುವುದಕ್ಕೆ ಅವಕಾಶ ನೀಡಬಾರದು. ಅಭ್ಯರ್ಥಿಗಳ ಪಟ್ಟಿ ಹಾಗೂ ಅಭ್ಯರ್ಥಿಯ ಸ್ವ ವಿವರವನ್ನು ಪ್ರಚಾರ ಮಾಡಬೇಕು. ಆಗ ಜನರು ತಮಗೆ ಬೇಕಾದ ಅಭ್ಯರ್ಥಿಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಎಂದು ಅಭಿಪ್ರಾಯಪಟ್ಟರು.1985ರಷ್ಟು ಜನತಾ ಪಕ್ಷದಿಂದ ಗೌರಿಬಿದನೂರಿನಿಂದ ಶಾಸಕನಾಗಿ ಆಯ್ಕೆ ಆಗಿದ್ದೆ, ಪಕ್ಷ ನೀಡಿದ ನಾಲ್ಕ ಲಕ್ಷ ರು, ವೆಚ್ಚ ಮಾಡಿ ಚುನಾವಣೆ ಮಾಡಲಾಗಿತ್ತು. ಆದರೀಗ ಚುನಾವಣೆ ಮಾಡುವುದಕ್ಕೆ ಬರೋಬ್ಬರಿ 40 ಕೋಟಿ ರು.ನಿಂದ 50 ಕೋಟಿ ರು. ಬೇಕಿದೆ. ಅಷ್ಟೇ ಅಲ್ಲ, ಧರ್ಮ, ಜಾತಿ ಆಧಾರಿತವಾಗಿ ಚುನಾವಣೆಗಳು ನಡೆಸಲಾಗುತ್ತಿದೆ. ಸ್ವಾತಂತ್ರ್ಯ ಬಂದು 78 ವರ್ಷ ಆಗಿದ್ದು, ಕುಟುಂಬ ರಾಜಕಾರಣ ನಿರಂತರವಾಗಿ ನಡೆಯುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಈ ವ್ಯವಸ್ಥೆ ಬದಲಾಗಬೇಕಾದರೆ, ಮತದಾರರು ದಂಗೆ ಏಳಬೇಕು. ಯುವಕರು ಮತದಾನ ಮಾಡುವಾಗ ದೇಶದ ಹಿತದೃಷ್ಟಿ ಇಟ್ಟುಕೊಂಡು ಮತದಾನ ಮಾಡಬೇಕು. ಆತ್ಮಸಾಕ್ಷಿಗೆ ಮತ ಹಾಕಬೇಕು ಎಂದರು.ಮೈಸೂರು ದಾರಿ ಫೌಂಡೇಷನ್ ಕಾರ್ಯದರ್ಶಿ ತಗಡೂರು ವೀರೇಶ್‌ಕುಮಾರ್ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ನೀಡಿದ ಸಂವಿಧಾನ ದೇಶದಲ್ಲಿ ಇಂದಿಗೂ ಜಾರಿಗೆ ಬಂದಂತೆ ಅನಿಸುತ್ತಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಭುಗಳು ಆಗಬೇಕಾದ ಪ್ರಜೆಗಳು ಗುಲಾಮರಾಗಿದ್ದು, ಕುಟುಂಬ ರಾಜಕಾರಣ ನಡೆಯುತ್ತಿದೆ. ಯುವಕರು ರಾಜಕಾರಣಕ್ಕೆ ಬರಬಾರದು ಎನ್ನುವಷ್ಟು ಕ್ಷೇತ್ರ ಕಲುಷಿತವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇತ್ತೀಚಿನ ದಿನಗಳಲ್ಲಿ ಸರ್ಕಾರಿಗಳು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಈ ಪೈಕಿ ಜನರಿಗೆ ಅತ್ಯಂತ ಅಗತ್ಯವಿರುವ ಶಿಕ್ಷಣ ಮತ್ತು ಆರೋಗ್ಯದ ಗ್ಯಾರಂಟಿ ಯೋಜನೆಗಳನ್ನು ನೀಡಬೇಕು. ಆಗ ಮಾತ್ರ ಸಮಾಜದಲ್ಲಿ ಭ್ರಷ್ಟಾಚಾರ ನಿರ್ಮೂಲನೆ ಮಾಡುವುದಕ್ಕೆ ಸಾಧ್ಯ ಎಂದರು.ದಾರಿ ಫೌಂಡೇಷನ್ ಜಿಲ್ಲಾ ಸಂಚಾಲಕ ಡಾ.ಕೆ.ಸುಂದರಗೌಡ ಮಾತನಾಡಿದರು. ಶ್ರೀ ಶಾರದ ಸ್ಕೂಲ್ ಆಫ್ ಲಾ ಪ್ರಭಾರ ಪ್ರಾಂಶುಪಾಲ ಎಸ್.ಕುಮಾರ್, ಕಾಲೇಜು ಕಾರ್ಯದರ್ಶಿ ಜಿ.ಆರ್.ಶ್ರವಣ್, ವಕೀಲರ ಸಂಘದ ಕಾರ್ಯದರ್ಶಿ ಆರ್.ಅನಿಲ್‌ಕುಮಾರ್, ಮೈಸೂರು ದಾರಿ ಫೌಂಡೇಷನ್ ಅಧ್ಯಕ್ಷ ಎಲ್.ರಂಗಯ್ಯ ಹಾಜರಿದ್ದರು.
ಶೇ.70ರಷ್ಟು ರಾಜಕಾರಣಗಳು ಮೆಡಿಕಲ್ ಕಾಲೇಜುಗಳ ಮಾಲೀಕರುರಾಜ್ಯದ ವಿಧಾನಸಭೆಗೆ ಆಯ್ಕೆಯಾಗುವ ಶೇ.70 ರಷ್ಟು ರಾಜಕಾರಣಗಳು ಖಾಸಗಿ ಮೆಡಿಕಲ್ ಕಾಲೇಜು ಮತ್ತು ಶಿಕ್ಷಣ ಸಂಸ್ಥೆಗಳನ್ನು ಹೊಂದಿದ್ದಾರೆ. ಸರ್ಕಾರಿ ಶಾಲಾ ಕಾಲೇಜುಗಳಿಗೆ ಸರಿಯಾದ ರೀತಿಯಲ್ಲಿ ಸೌಲಭ್ಯ ನೀಡದೇ ಮುಚ್ಚಿಸುವ ಕೆಲಸ ಮಾಡುತ್ತಿದ್ದಾರೆ. ಪಿತೂರಿ ಮಾಡಿ ಸರ್ಕಾರಿ ಶಾಲಾ ಕಾಲೇಜುಗಳಿಗೆ ಶಿಕ್ಷಕರು ಉಪನ್ಯಾಸಕರನ್ನು ನೇಮಕಾತಿ ಮಾಡದಂತೆ ಒತ್ತಡ ಹಾಕುವ ವ್ಯವಸ್ಥೆ ಇದೆ ಎಂದು ಡಾ.ಮುಖ್ಯಮಂತ್ರಿ ಚಂದ್ರು ಬೇಸರ ವ್ಯಕ್ತಪಡಿಸಿದರು.