ಪಾರಂಪರಿಕ ಕಟ್ಟಡವನ್ನು ಸಂರಕ್ಷಿಸುವ ಉದ್ದೇಶದಿಂದ ಮಾರುಕಟ್ಟೆಯನ್ನು ನವೀಕರಿಸಬೇಕು
ಕನ್ನಡಪ್ರಭ ವಾರ್ತೆ ಮೈಸೂರುನಗರದ ದೇವರಾಜ ಮಾರುಕಟ್ಟೆಯನ್ನು ಕೆಡವಿ ಹೊಸದಾಗಿ ನಿರ್ಮಿಸದೆ, ನವೀಕರಿಸಬೇಕು ಎಂದು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.ನಗರದ ದೇವರಾಜ ಮಾರುಕಟ್ಟೆಯ ಚಿಕ್ಕ ಗಡಿಯಾರದ ಬಳಿ ಸೋಮವಾರ ಸಂಜೆ ಮಾರುಕಟ್ಟೆಯ ವರ್ತಕರನ್ನು ಭೇಟಿಯಾಗಿ ಮನವಿ ಆಲಿಸಿದ ಅವರು, ಪಾರಂಪರಿಕ ಕಟ್ಟಡವನ್ನು ಸಂರಕ್ಷಿಸುವ ಉದ್ದೇಶದಿಂದ ಮಾರುಕಟ್ಟೆಯನ್ನು ನವೀಕರಿಸಬೇಕು. ಈ ವಿಷಯದಲ್ಲಿ ಸುಪ್ರಿಂ ಕೋರ್ಟ್‌ಕೂಡ ನವೀಕರಿಸುವಂತೆ ಸೂಚಿಸಿದೆ. ರಾಜ್ಯ ಸರ್ಕಾರ ಅದರಂತೆ ನಡೆದುಕೊಳ್ಳಬೇಕು ಎಂದರು.ಕಳೆದ 2005ರಿಂದಲೂ ದೇವರಾಜ ಮಾರುಕಟ್ಟೆಯನ್ನು ಕೆಡವದೇ ನವೀಕರಿಸಬೇಕು ಎಂದು ಹೋರಾಟ ನಡೆಯುತ್ತಿದೆ. ಸರ್ಕಾರ ಈ ಹೋರಾಟವನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ. ಮಾರುಕಟ್ಟೆಯ ವರ್ತಕರ ಹಿತದೃಷ್ಟಿಯಿಂದ ಮಾರುಕಟ್ಟೆಯ ಕಟ್ಟಡವನ್ನು ನವೀಕರಣಗೊಳಿಸಬೇಕಿದೆ. ಇಂತಹ ಹಲವು ಪಾರಂಪರಿಕ ಕಟ್ಟಡಗಳನ್ನು ನವೀಕರಣಗೊಳಿಸಿರುವ ಉದಾಹರಣೆ ಇದೆ. ರಾಜ್ಯ ಸರ್ಕಾರದ ಹಠಕ್ಕೆ ಬಿದ್ದು ಪುನರ್ ನಿರ್ಮಾಣಕ್ಕೆ ಮುಂದಾಗಬಾರದು. ಕೋರ್ಟ್ ಆದೇಶವನ್ನು ಪಾಲಿಸಬೇಕು ಎಂದರು.ಈ ವಿಷಯದಲ್ಲಿ ಸುಪ್ರೀಂ ಕೋರ್ಟ್ ಆದೇಶದ ವಿರುದ್ಧ ಜಿಲ್ಲಾಧಿಕಾರಿಗಳು ಮೇಲ್ಮನವಿ ಸಲ್ಲಿಸಲು ಮುಂದಾಗಿರುವುದು ಸರಿಯಲ್ಲ. ಕೆಲ ಪಟ್ಟಭದ್ರ ಹಿತಾಸಕ್ತಿಗಳು ಮಾರುಕಟ್ಟೆ ಕೆಡವಲು ಮುಂದಾಗಿದ್ದಾರೆ. ಅದಕ್ಕೆ ಸರ್ಕಾರ ಸ್ಪಂದಿಸಬಾರದು, ಮಾರುಕಟ್ಟೆ ಪುನರ್ ನಿರ್ಮಾಣಕ್ಕೆ ಮೀಸಲಿಟ್ಟಿರುವ ಹಣವನ್ನು ನವೀಕರಣಕ್ಕೆ ಬಳಸಬೇಕು. ಈ ಕಾರ್ಯಕ್ಕೆ ಮಾರುಕಟ್ಟೆಯ ವರ್ತಕರು ಕೂಡ ಕೈ ಜೋಡಿಸುತ್ತಾರೆ. ಹಂತ ಹಂತವಾಗಿ ನವೀಕರಣ ಕಾರ್ಯ ನಡೆಸಬಹುದು ಎಂದರು.ಈ ವೇಳೆ ದೇವರಾಜ ಮಾರುಕಟ್ಟೆಯ ವರ್ತಕರ ಸಂಘದ ಅಧ್ಯಕ್ಷ ಮಹದೇವು ಸೇರಿ ಹಲವು ವರ್ತಕರು ಇದ್ದರು.