- ​ಎರಡೆರಡು ಕಡೆ ಮತದಾನವಿದ್ದರೆ ಕ್ರಿಮಿನಲ್ ಮೊಕದ್ದಮೆ: ಜಗಳೂರಲ್ಲಿ ಡಿಸಿ ಗಂಗಾಧರ ಸ್ವಾಮಿ ಎಚ್ಚರಿಕೆ

- - -

ಕನ್ನಡಪ್ರಭ ವಾರ್ತೆ ಜಗಳೂರು

ಭಾರತ ಚುನಾವಣಾ ಆಯೋಗ ನಿರ್ದೇಶನದಂತೆ, 2026ರ ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯು ಜಗಳೂರು ತಾಲೂಕಿನಲ್ಲಿ ಅತ್ಯಂತ ವ್ಯವಸ್ಥಿತವಾಗಿ ಸಾಗುತ್ತಿದ್ದು, ಶೇ.೧೦೦ ಪ್ರಗತಿ ಸಾಧಿಸಲಾಗಿದೆ ಎಂದು ದಾವಣಗೆರೆ ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ತಿಳಿಸಿದರು.

ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ತಾಲೂಕು ಚುನಾವಣಾ ಶಾಖೆಯ ವತಿಯಿಂದ ಆಯೋಜಿಸಲಾಗಿದ್ದ ಜಗಳೂರು ಕ್ಷೇತ್ರದ ಮತಗಟ್ಟೆ ಆಅಧಿಕಾರಿಗಳು (ಬಿಎಲ್‌ಒ) ಹಾಗೂ ಮೇಲ್ವಿಚಾರಕರ ತರಬೇತಿ ಕಾರ್ಯಾಗಾರದ ನಂತರ ಸುದ್ದಗಾರರೊಂದಿಗೆ ಅವರು ಮಾತನಾಡಿದರು.


ಜೂನ್ 30ರಿಂದಲೇ ಕ್ಷೇತ್ರ ವ್ಯಾಪ್ತಿಯಲ್ಲಿ ಮನೆ ಮನೆ ಸಮೀಕ್ಷೆ ಕಾರ್ಯ ಆರಂಭಗೊಂಡಿದ್ದು, ಪ್ರಗತಿಯಲ್ಲಿದೆ. ಮತದಾರರ ಪಟ್ಟಿಯಲ್ಲಿ ಒಂದಕ್ಕಿಂತ ಹೆಚ್ಚು ಕಡೆ ಹೆಸರು ಹೊಂದಿರುವುದು ಮತ್ತು ಎರಡೆರಡು ಕಡೆ ಮತದಾನ ಚಲಾಯಿಸುವುದು ಗುರುತರ ಕಾನೂನುಬಾಹಿರ ಕೃತ್ಯವಾಗಿದೆ. ಮತದಾರರು ಕಡ್ಡಾಯವಾಗಿ ಯಾವುದಾದರೂ ಒಂದೇ ಕಡೆ ಮತದಾನದ ಹಕ್ಕು ಇರುವಂತೆ ನೋಡಿಕೊಳ್ಳಬೇಕು. ಒಂದುವೇಳೆ ಎರಡು ಕಡೆ ಮತದಾನದ ಹಕ್ಕು ಹೊಂದಿರುವುದು ಅಥವಾ ಮತ ಚಲಾಯಿಸುವುದು ಪತ್ತೆಯಾದರೆ, ಅದನ್ನು ಗಂಭೀರ ಕ್ರಿಮಿನಲ್ ಅಪರಾಧ ಎಂದು ಪರಿಗಣಿಸಲಾಗುತ್ತದೆ. ಇಂತಹ ನಿಯಮ ಉಲ್ಲಂಘಿಸುವವರ ವಿರುದ್ಧ ಕ್ರಿಮಿನಲ್ ಕಾಯ್ದೆ ಹಾಗೂ ಚುನಾವಣಾ ನಿಯಮಾವಳಿಗಳ ಅಡಿಯಲ್ಲಿ ತಕ್ಷಣವೇ ಕೇಸ್ ದಾಖಲಿಸಿ, ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಶೇ.100 ತರಬೇತಿ- ಫಾರಂ ವಿತರಣೆ:

ಕ್ಷೇತ್ರಾದ್ಯಂತ ಒಟ್ಟು 263 ಬೂತ್‌ಮಟ್ಟದ ಅಧಿಕಾರಿಗಳನ್ನು (ಬಿಎಲ್‌ಒ) ನಿಯೋಜಿಸಲಾಗಿದ್ದು, ಎಲ್ಲ 263 ಅಧಿಕಾರಿಗಳಿಗೂ ಶೇ.100 ಯಶಸ್ವಿ ತರಬೇತಿ ನೀಡಲಾಗಿದೆ. ಇಸಿಐನೆಟ್ ಪೋರ್ಟಲ್ ಅಂಕಿ-ಅಂಶಗಳ ಪ್ರಕಾರ, ಕ್ಷೇತ್ರದಲ್ಲಿ ಜೂನ್ 16ರವರೆಗೆ ಲಭ್ಯವಿರುವ ಮಾಹಿತಿ ಅನ್ವಯ ಒಟ್ಟು 2,00,836 ಮತದಾರರಿದ್ದಾರೆ. ಇವರೆಲ್ಲರ ವಿವರಗಳನ್ನು ಒಳಗೊಂಡ 100ಕ್ಕೆ ನೂರರಷ್ಟು ಎನುಮರೇಷನ್ ಫಾರಂಗಳನ್ನು ಮುದ್ರಿಸಲಾಗಿದೆ. ಈ ಪೈಕಿ 2,00,796 99.98% ಫಾರಂಗಳನ್ನು ಬಿಎಲ್‌ಒಗಳ ಮೂಲಕ ಮತದಾರರ ಮನೆ ಮನೆಗೆ ಈಗಾಗಲೇ ತಲುಪಿಸಲಾಗಿದೆ.​ ಕೇವಲ ೧೮ ಮಾತ್ರ ಬಾಕಿ ಉಳಿದಿವೆ ಎಂದರು.

ಅರ್ಜಿಗಳು ತಪ್ಪಾಗಿದ್ದರೆ ಆತಂಕ ಬೇಡ:

​ಸಭೆಯಲ್ಲಿ ಹಿರೇಮಲ್ಲನಹೊಳೆ ಗ್ರಾಮದಲ್ಲಿ ೬೦ಕ್ಕೂ ಹೆಚ್ಚು ಅರ್ಜಿಗಳನ್ನು ತಪ್ಪಾಗಿ ತುಂಬಲಾಗಿದ್ದು, ಇದನ್ನು ಹೇಗೆ ಸರಿಪಡಿಸುವುದು ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಜಿಲ್ಲಾಧಿಕಾರಿ, ನಾಗರಿಕರು ಆತಂಕಪಡುವ ಅಗತ್ಯವಿಲ್ಲ. ಅರ್ಜಿಗಳಲ್ಲಿ ಅನಿರೀಕ್ಷಿತವಾಗಿ ತಪ್ಪುಗಳಾಗಿದ್ದರೆ ಅಥವಾ ಆಕಸ್ಮಿಕವಾಗಿ ಕಳೆದುಹೋಗಿದ್ದರೆ, ಅದು ನಮ್ಮ ಗಮನಕ್ಕೆ ಬಂದ ತಕ್ಷಣ ಡಿಸಿ ಕಚೇರಿಯಿಂದ ಹೊಸ ಫಾರ್ಮ್ ನೀಡಿ, ಲೋಪದೋಷಗಳನ್ನು ಸರಿಪಡಿಸಲಾಗುವುದು. ಮನೆ ಮನೆಗೆ ಭೇಟಿ ನೀಡುವ ಬಿಎಲ್‌ಒಗಳಿಗೆ ಸಾರ್ವಜನಿಕರು ಹಾಗೂ ಮತದಾರರು ತಮ್ಮ ನಿಖರವಾದ ಮಾಹಿತಿ ಮತ್ತು ದಾಖಲೆಗಳನ್ನು ನೀಡಿ, ಈ ರಾಷ್ಟ್ರೀಯ ಮಹತ್ಕಾರ್ಯಕ್ಕೆ ಸಂಪೂರ್ಣ ಸಹಕಾರ ನೀಡಬೇಕೆಂದರು.

ಸಾಧಕ ಬಿಎಲ್‌ಒಗೆ ಸನ್ಮಾನ:

​ಇದೇ ಸಂದರ್ಭದಲ್ಲಿ ಮತದಾರರ ಪರಿಷ್ಕರಣೆ ಕಾರ್ಯದಲ್ಲಿ ಶೇ.೧೦೦ ಸಾಧನೆ ಮಾಡಿದ ಕಾಮಗೇತನಹಳ್ಳಿ ಹೊಸಹಟ್ಟಿ ಗ್ರಾಮದ ಬಿಎಲ್‌ಒ ನಾಗರತ್ನಮ್ಮ ಅವರನ್ನು ಜಿಲ್ಲಾಧಿಕಾರಿ ಸನ್ಮಾನಿಸಿ ಗೌರವಿಸಿದರು.

​ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಶಿವಕುಮಾರ್ ಶಿಲವಂತ, ಚುನಾವಣಾಧಿಕಾರಿ ಭಾಗ್ಯಶ್ರೀ, ಸಹಾಯಕ ಚುನಾವಣಾಧಿಕಾರಿ ಹಾಗೂ ತಹಸೀಲ್ದಾರ್ ಗುರುಬಸವರಾಜಪ್ಪ, ಚುನಾವಣಾ ಶಾಖೆಯ ಶಿರಸ್ತೇದಾರ ಚಂದ್ರಪ್ಪ, ಆರ್‌ಐ ಕೀರ್ತಿಂಜಯ ಸೇರಿದಂತೆ ತಾಲೂಕುಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

- - -

-09ಜೆ.ಜಿ.ಎಲ್.1:

ಜಗಳೂರು ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶೇ.೧೦೦ ಸಾಧನೆ ಮಾಡಿದ ಕಾಮಗೇತನಹಳ್ಳಿ ಹೊಸಹಟ್ಟಿ ಗ್ರಾಮದ ಬಿಎಲ್‌ಒ ನಾಗರತ್ನಮ್ಮ ಅವರಿಗೆ ಡಿಸಿ ಜಿ.ಎಂ. ಗಂಗಾಧರಸ್ವಾಮಿ ಸನ್ಮಾನಿಸಿದರು. ಎಡಿಸಿ ಶಿವಕುಮಾರ್ ಶಿಲವಂತ ಹಾಗೂ ಅಧಿಕಾರಿಗಳು ಇದ್ದರು.