ಜೈನ ಸಮುದಾಯಕ್ಕೆ ಸರ್ಕಾರ ಹಲವಾರು ಯೋಜನೆಗಳನ್ನು ರೂಪಿಸಿದೆ. ಆದರೆ ಜೈನ ಸಮುದಾಯದವರು ಹೆಚ್ಚಿನ ಸೌಲಭ್ಯಗಳನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಜೈನ ಸಮುದಾಯದವರೇ ಮೊದಲಿಗರಾಗಿದ್ದಾರೆ. ಆದರೂ ಈ ಸಮುದಾಯದಲ್ಲೂ ಆರ್ಥಿಕವಾಗಿ ಹಿಂದುಳಿದವರೂ ಇದ್ದಾರೆ. ಅವರು ಸರ್ಕಾರದ ಸೌಲಭ್ಯವನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ ಮುಂದಾಗಬೇಕು ಎಂದು ಅಲ್ಪಸಂಖ್ಯಾತ ಅಭಿವೃದ್ಧಿ ಇಲಾಖೆ ಜಿಲ್ಲಾ ಅಧಿಕಾರಿ ಮಧುಶ್ರೀ ಸಲಹೆ ನೀಡಿದರು.

ಶ್ರೀ ಜ್ವಾಲಾಮಾಲಿನಿ ಮಹಿಳಾ ಸಮಾಜ, ಶ್ರೀಅನಂತನಾಥಸ್ವಾಮಿ ದಿಗಂಬರ ಜೈನ ಸಮಾಜ ಮತ್ತು ಯುವ ಮಂಡಳಿ ಇವರ ವತಿಯಿಂದ ನಗರದ ಮಹಾವೀರ ಭವನದಲ್ಲಿ ನಡೆದ ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಜೈನ ಸಮುದಾಯಕ್ಕೆ ಸರ್ಕಾರ ಹಲವಾರು ಯೋಜನೆಗಳನ್ನು ರೂಪಿಸಿದೆ. ಆದರೆ ಜೈನ ಸಮುದಾಯದವರು ಹೆಚ್ಚಿನ ಸೌಲಭ್ಯಗಳನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದು ಸಲಹೆ ನೀಡಿದರು.

ಜೈನ ಸಮುದಾಯದವರು ಸರಳ ಮತ್ತು ಸಾಮೂಹಿಕ ವಿವಾಹ ಮಾಡಿಕೊಳ್ಳುವ ಜೋಡಿಗಳಿಗೆ ೫೦ ಸಾವಿರ ರು. ಪ್ರೋತ್ಸಾಹ ದನ ನೀಡುತ್ತಿದೆ. ಇದನು ಸದ್ಬಳಕೆ ಮಾಡಿಕೊಳ್ಳಬೇಕು. ಜೊತೆಗೆ ಒಂದನೇ ತರಗತಿಯಿಂದ ಪಿಎಚ್‌.ಡಿ ವರೆಗಿನ ವಿದ್ಯಾಭ್ಯಾಸ ಮಾಡುವುದಕ್ಕೆ ವಿದ್ಯಾರ್ಥಿ ವೇತನ ಹಾಗೂ ವಿದೇಶಗಳಿಗೆ ತೆರಳಿ ಅಧ್ಯಯನ ಮಾಡಲು ಸಹಾಯಧನ ನೀಡುತ್ತಿದೆ ಎಂದು ವಿವರಿಸಿದರು.

ಬಸದಿಗಳ ಜೀರ್ಣೋದ್ಧಾರ, ಸಮುದಾಯ ಭವನಗಳ ನಿರ್ಮಾಣ, ಪುನಶ್ಚೇತನಕ್ಕೂ ಸಹ ಸರ್ಕಾರ ಅನುದಾನ ನೀಡುತ್ತಿದೆ. ೧೫ ಅಂಶದ ಎಲ್ಲಾ ಕಾರ್ಯಕ್ರಮಗಳನ್ನು ಜೈನ ಸಮುದಾಯ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಕನ್ನಡ ಸಾಹಿತ್ಯಕ್ಕೆ ಜೈನ ಸಮುದಾಯದಕೊಡುಗೆ ಅಪಾರವಾಗಿದೆ. ಸಾಹಿತ್ಯ ಕ್ಷೇತ್ರದ ತ್ರಿವಳಿ ರತ್ನಗಳಾದ ರನ್ನ, ಪೊನ್ನ, ಪಂಪ ಇವರ ಕೊಡುಗೆಗಳು ಸಹ ಅಮೂಲ್ಯವಾದದ್ದು. ಜೈನ ಧರ್ಮದಲ್ಲಿ ತುಂಬಾ ಕಟ್ಟುಪಾಡುಗಳನ್ನು ಕಾಣಬಹುದಾಗಿದೆ. ಜೈನ ಮುನಿಗಳು ಬಂದಾಗ ಅವರಿಗೆ ಆಹಾರ ನೀಡಲು ಪೈಪೋಟಿ ಇರುವುದನ್ನು ಸಹ ಕಂಡಿದ್ದೇನೆ. ಈಗಿನ ಕಾಲದಲ್ಲೂ ಹಿರಿಯರು ಹಾಕಿಕೊಟ್ಟ ಕಟ್ಟುಪಾಡುಗಳನ್ನು ಮುಂದುವರಿಸುತ್ತಿರುವುದು ಶ್ಲಾಘನೀಯ ಎಂದರು.

ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ಅಧ್ಯಕ್ಷೆ ಪದ್ಮ ಅಧ್ಯಕ್ಷ ವಹಿಸಿದ್ದರು. ಜ್ವಾಲಮಾಲಿನಿ ಮಹಿಳಾ ಸಮಾಜದ ಅಧ್ಯಕ್ಷೆ ಪೂರ್ಣಿಮಾ, ಉಪಾಧ್ಯಕ್ಷ ಡಾ.ನೀರಜಾ, ಕಾರ್ಯದರ್ಶಿ ವರ್ಷ, ಸದಸ್ಯೆ ಪದ್ಮಶ್ರೀ, ಯಶೋಧ, ಜಯಂತಿ, ಶ್ರೀಧರ್, ವಿನಯ್ ಇತರರು ಸಮಾರಂಭದಲ್ಲಿ ಭಾಗವಹಿಸಿದ್ದರು.