ವ್ಯಾಪಾರ ಎನ್ನುವುದು ಒಂದು ಕಲೆ, ಮಕ್ಕಳು ಕೇವಲ ಪಠ್ಯ ವಿಷಯಗಳನ್ನು ಅರಿತರೆ ಸಾಲದು. ಜೀವನಾನುಭವ, ಲಾಭ- ನಷ್ಟದ ಲೆಕ್ಕಾಚಾರ, ಸರಕುಗಳ ಮೌಲ್ಯ ಎಲ್ಲವನ್ನೂ ತಿಳಿಯಬೇಕು ಎನ್ನುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿದೆ .

ಬೀರೂರು: ಬನ್ನಿ ಸಾರ್.. ಬನ್ನಿ...ತೆಂಗಿನ ಕಾಯಿ 40 ರುಪಾಯಿ, ಗೋಲ್ಗಪ್ಪ ತಗೊಳ್ಳಿ..., ಕಡ್ಲೇಗಿಡ, ಚುರುಮುರಿ ಹತ್ತೇ ರುಪಾಯಿ.... ಹೀಗೆ ಮಕ್ಕಳು ಕೂಗುತ್ತಾ, ಗ್ರಾಹಕರನ್ನು ಕೈಬೀಸಿ ಕರೆಯುತ್ತಿದ್ದ ವಾರದ ಸಂತೆಯ ಈ ಆಕರ್ಷಕ ದೃಶ್ಯಾವಳಿ ಕಂಡು ಬಂದಿದ್ದು ಶನಿವಾರ ಬೀರೂರಿನ ಪಿಎಂಶ್ರೀ ಶಾಲಾ ಮೈದಾನದಲ್ಲಿ.

ಎಸ್ಡಿಎಂಸಿ ವತಿಯಿಂದ ಶಾಲಾ ಮಕ್ಕಳಿಗೆ ಹಣದ ಮೌಲ್ಯ ತಿಳಿಸುವ ಮತ್ತು ವ್ಯವಹಾರ ಜ್ಞಾನ ಬೆಳೆಸುವ ಸಲುವಾಗಿ ಆಯೋಜಿಸಿದ್ದ ಈ ‘ಮಕ್ಕಳ ಸಂತೆ’ ಯಲ್ಲಿ ಮಕ್ಕಳು ಉತ್ಸಾಹದಿಂದ ವ್ಯಾಪಾರ ನಡೆಸಿದರೆ, ಅಲ್ಲಿದ್ದ ಶಿಕ್ಷಕರು ಹಾಗೂ ಪೋಷಕರು ಮಕ್ಕಳ ವ್ಯವಹಾರಿಕ ಹಾಗೂ ಮಾರಾಟದ ಕೌಶಲವನ್ನು ಕುತೂಹಲದಿಂದ ವೀಕ್ಷಿಸಿ, ಕೆಲ ವಸ್ತುಗಳನ್ನು ಖರೀದಿಸಿ, ಮಕ್ಕಳನ್ನು ಹುರಿದುಂಬಿಸಿದರು.

ಕೆಲವು ಮಕ್ಕಳು ತರಕಾರಿ, ಸೊಪ್ಪು, ಹಣ್ಣುಗಳ ಮಾರಾಟಕ್ಕೆ ಇಳಿದರೆ, ಇನ್ನು ಕೆಲವರು ಸಿಹಿ ತಿಂಡಿ, ಚಿಪ್ಸ್, ಪಾನಿಪೂರಿ, ಚುರಮುರಿ ಮೊದಲಾದ ತಿನಿಸು ಮಾರಾಟ ಮಾಡಿದರು. ಕೆಲವರು ತೆಂಗಿನ ಕಾಯಿ, ಎಳನೀರು, ಕಡ್ಲೆಗಿಡ ಮಾರುತ್ತಿದ್ದರು. ದಿನಬಳಕೆ ಸಾಮಗ್ರಿ, ದಿನಸಿ, ಎಲೆಕ್ಟ್ರಾನಿಕ್ ಉಪಕರಣ, ಮತ್ತಿತರ ಸಾಮಗ್ರಿಗಳೂ ಮಕ್ಕಳ ಸಂತೆಯಲ್ಲಿ ಕಂಡುಬಂದವು. ಕೆಲವರಿಗೆ ಶಾಲೆಯ ವತಿಯಿಂದಲೇ ಟೇಬಲ್, ಕುರ್ಚಿ, ಶಾಮಿಯಾನ ಹಾಕಿ ವ್ಯಾಪಾರ ಮಾಡಲು ಅವಕಾಶ ಒದಗಿಸಲಾಗಿತ್ತು.

ಈ ವೇಳೆ ಮಾತನಾಡಿದ ಎಸ್ಡಿಎಂಸಿ ಅಧ್ಯಕ್ಷ ಬಿ.ಎನ್.ಪ್ರಸನ್ನಕುಮಾರ್, ವ್ಯಾಪಾರ ಎನ್ನುವುದು ಒಂದು ಕಲೆ, ಮಕ್ಕಳು ಕೇವಲ ಪಠ್ಯ ವಿಷಯಗಳನ್ನು ಅರಿತರೆ ಸಾಲದು. ಜೀವನಾನುಭವ, ಲಾಭ- ನಷ್ಟದ ಲೆಕ್ಕಾಚಾರ, ಸರಕುಗಳ ಮೌಲ್ಯ ಎಲ್ಲವನ್ನೂ ತಿಳಿಯಬೇಕು ಎನ್ನುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ಮುಖ್ಯಶಿಕ್ಷಕಿ ಅನಸೂಯಮ್ಮ, ದೈಹಿಕ ಶಿಕ್ಷಣ ಶಿಕ್ಷಕ ಚಂದ್ರಶೇಖರ್, ಶಿಕ್ಷಕರಾದ ಮರುಳಸಿದ್ದಪ್ಪ, ಶ್ರೀಕಾಂತ್, ಆನಂದಪ್ಪ, ಎಸ್ಡಿಎಂಸಿ ಸದಸ್ಯರಾದ ಶ್ರೀಧರ್, ರೋಹಿಣಿ, ಸೀಮಾ, ಆರಿಫ್, ಮಂಜುಳಾ ಉಪಸ್ಥಿತರಿದ್ದರು.