ಮಾಗಡಿ: ಬಳ್ಳಾರಿ ಶೂಟ್ ಔಟ್ ಪ್ರಕರಣಕ್ಕೆ ಶಾಸಕ ಜನಾರ್ದನ ರೆಡ್ಡಿ ಕಾರಣ ಎಂದು ಶಾಸಕ ಎಚ್.ಸಿ.ಸಬಾಲಕೃಷ್ಣ ಆರೋಪಿಸಿದರು.
ಮಾಗಡಿ: ಬಳ್ಳಾರಿ ಶೂಟ್ ಔಟ್ ಪ್ರಕರಣಕ್ಕೆ ಶಾಸಕ ಜನಾರ್ದನ ರೆಡ್ಡಿ ಕಾರಣ ಎಂದು ಶಾಸಕ ಎಚ್.ಸಿ.ಸಬಾಲಕೃಷ್ಣ ಆರೋಪಿಸಿದರು.
ತಾಲೂಕಿನ ಬಾಚೇನಹಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಜನಾರ್ದನರೆಡ್ಡಿ ಬಳ್ಳಾರಿಯಲ್ಲಿಲ್ಲದಿದ್ದಾಗ ಅಲ್ಲಿನ ವಾತಾವರಣ ಶಾಂತಿಯುತವಾಗಿತ್ತು. ಈಗ ಅವರು ಬಂದಮೇಲೆ ಗಲಾಟೆಗಳು ಹೆಚ್ಚಾಗುತ್ತಿದೆ. ವಾಲ್ಮೀಕಿ ಕಾರ್ಯಕ್ರಮಕ್ಕೆ ಬ್ಯಾನರ್ ಕಟ್ಟುವುದು ಸಾಮಾನ್ಯ. ಎರಡು ದಿನ ಕಾರ್ಯಕರ್ತರು ಕುಣಿದು ಕುಪ್ಪಳಿಸಿ ಸುಮ್ಮನಾಗುತ್ತಿದ್ದರು. ನೀವು ಅಧಿಕಾರಕ್ಕೆ ಬಂದ ಮೇಲೆ ನಿಮ್ಮ ಕಾರ್ಯಕ್ರಮಗಳನ್ನು ತೋರಿಸಬಹುದಿತ್ತು. ಆದರೆ ಏಕಾಏಕಿ ಬ್ಯಾನರ್ ವಿಚಾರವಾಗಿ ದೊಣ್ಣೆ ಕಾರದಪುಡಿ ತಂದರೆ ಭಯದ ಪರಿಸ್ಥಿತಿ ನಿರ್ಮಾಣವಾಗಿ ಗನ್ ಮ್ಯಾನ್ ಗುಂಡು ಹಾರಿಸಿದ್ದಾರೆ. ಯಾರಾದರೂ ನಮ್ಮ ಪಕ್ಷದ ಕಾರ್ಯಕರ್ತರಿಗೆ ಗುಂಡು ಹಾರಿಸಲು ಸಾಧ್ಯವೇ? ಪ್ರಕರಣ ತನಿಖೆ ಹಂತದಲ್ಲಿದ್ದು ಆ ಕುರಿತು ಹೆಚ್ಚು ಮಾತನಾಡುವುದಿಲ್ಲ ಎಂದರು.ಉತ್ತಮರಿಗೆ ಸಿದ್ದಾರಾಮಯ್ಯ ಅಧಿಕಾರ ಬಿಟ್ಟಕೊಡಲಿ:
ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸಿದ್ದರಾಮಯ್ಯನವರೇ ಸಾಟಿ. ಕಾಂಗ್ರೆಸ್ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡಿದೆ. ಅವರು ಉತ್ತಮರಿಗೆ ನಾಯಕತ್ವ ಬಿಟ್ಟುಕೊಟ್ಟರೆ ಮುಂದಿನ 15 ವರ್ಷ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿರಲಿದೆ. ದಿ.ದೇವರಾಜು ಅರಸು ಅವರ ದಾಖಲೆಯನ್ನು ಸಿದ್ದರಾಮಯ್ಯನವರು ಸರಿಗಟ್ಟಿದ್ದು ನಾಯಕತ್ವ ಗುಣದಿಂದ ಉತ್ತಮ ಆಡಳಿತ ನೀಡಿದ್ದಾರೆ. 15 ಬಾರಿ ಬಜೆಟ್ ಮಂಡಿಸಿದ್ದು ಸಿದ್ದರಾಮಯ್ಯನವರ ಶಕ್ತಿ. ಜನಪ್ರಿಯ ಮುಖ್ಯಮಂತ್ರಿಗಳಾಗಿ ಬಡಪರ ಕಲ್ಯಾಣ ಕಾರ್ಯಕ್ರಮಗಳನ್ನು ಮಾಡಿದ್ದಾರೆ. ಅವರ ನಾಯಕತ್ವದಲ್ಲೇ ಒಳ್ಳೆಯವರಿಗೆ ಅಧಿಕಾರ ಕೊಟ್ಟಾಗ ಪಕ್ಷ ಮತ್ತಷ್ಟು ದಿನ ಅಧಿಕಾರದಲ್ಲಿರುತ್ತದೆ. ಅವರ ಮಾರ್ಗದರ್ಶನ ನಮ್ಮ ಪಕ್ಷಕ್ಕೆ ಅತ್ಯವಶ್ಯಕ. ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳಾಗಿ ಮುಂದುವರಿಯಬೇಕಾ? ಡಿ.ಕೆ.ಶಿವಕುಮಾರ್ ಅವರು ಮುಂದಿನ ಮುಖ್ಯಮಂತ್ರಿಗಳಾಗಬೇಕಾ? ಎಂಬ ನಿರ್ಧಾರವನ್ನು ಹೈಕಮಾಂಡ್ ತೀರ್ಮಾನಿಸಲಿದೆ ಎಂದು ಬಾಲಕೃಷ್ಣ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.ಚಿಕ್ಕ ಮಾಸ್ಕಲ್ ಬಳಿ ಸೇತುವೆ ನಿರ್ಮಾಣ:
ಚಿಕ್ಕ ಮಾಸ್ಕಲ್ ಬಳಿ ಸೇತುವೆ ನಿರ್ಮಾಣ ಹಲವು ಗ್ರಾಮಗಳಿಗೆ ಅನುಕೂಲವಾಗಲಿದೆ. ರೈತರು ಬೆಂಗಳೂರಿಗೆ ತರಕಾರಿ ಕೊಂಡೊಯ್ಯಲು 15 ಕಿಲೋಮೀಟರ್ ಬಳಸಿ ಹೋಗುತ್ತಿದ್ದರು. ಈಗ ವರದೇನಹಳ್ಳಿ ಹ್ಯಾಂಡ್ ಪೋಸ್ಟ್ ಮೂಲಕವೇ ಹೋಗಬಹುದು. ಈ ಭಾಗದ ಜನ ನನಗೆ ಹೆಚ್ಚು ಮತ ಹಾಕಿದ್ದು ಅವರ ಋಣ ತೀರಿಸಲು ₹ 20 ಕೋಟಿ ವೆಚ್ಚದಲ್ಲಿ ಶುದ್ಧ ನೀರು ಘಟಕ, ಚರಂಡಿ ನಿರ್ಮಾಣ, ಮರಳುಗೊಂಡಲ, ತೊರೆಪಾಳ್ಯ,, ಸೇವಾನಗರ, ಬಾಚೇನಟ್ಟಿ ಗ್ರಾಮಗಳಲ್ಲಿ ವಿವಿಧ ಕಾಮಗಾರಿಗಳಿಗೆ ಒತ್ತು ನೀಡುತ್ತೇನೆ ಎಂದರು.ಈ ವೇಳೆ ಕಾಂಗ್ರೆಸ್ ಹಿರಿಯ ಮುಖಂಡ ಪೂಜಾರಿ ಪಾಳ್ಯ ಕೃಷ್ಣಮೂರ್ತಿ, ಕಲ್ಕರೆ ಶಿವಣ್ಣ, ತಾ.ಪಂ.ಮಾಜಿ ಸದಸ್ಯ ಧನಂಜಯ ನಾಯಕ್, ಪ್ರಕಾಶ್, ಶಿವಬಿರಯ್ಯ, ರವಿ, ಮಾಂತೇಶ್, ಪ್ರವೀಣ್, ತಸಿಲ್ದಾರ್ ಶರತ್ ಕುಮಾರ್, ತಾ.ಪಂ. ಇಒ ಜೈಪಾಲ್, ವಲಯ ಅರಣ್ಯ ಅಧಿಕಾರಿ ಚೈತ್ರ ಇತರರಿದ್ದರು.