ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುರಾಜ್ಯ ಸರ್ಕಾರವು ಜಯಪ್ರಕಾಶ ಹೆಗಡೆ ಆಯೋಗದ ವರದಿಯನ್ನು ತಮ್ಮ ರಾಜಕೀಯದ ದಾಳ ಉರುಳಿಸಲು ಬಳಸಿಕೊಳ್ಳಲು ಸಜ್ಜಾಗಿದೆ ಎಂದು ಬಿಜೆಪಿ ಹಿಂದುಳಿದ ವರ್ಗ ಮೋರ್ಚಾ ರಾಜ್ಯಾಧ್ಯಕ್ಷ ರಘು ಕೌಟಿಲ್ಯ ಆರೋಪಿಸಿದರು.ನಗರದ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಜಾತಿ ಗಣತಿ ನಿರ್ಧಾರವನ್ನು ರಾಜ್ಯ ಬಿಜೆಪಿ ತುಂಬು ಹೃದಯದಿಂದ ಅಭಿನಂದಿಸಿದೆ. ಕರ್ನಾಟಕದಲ್ಲಿ ದೇವರಾಜ ಅರಸು ಕಾಲದಲ್ಲಿ ಜಾತಿಗಣತಿ ನಡೆದಿತ್ತು. ಹಾವನೂರು ವರದಿ ಹಿಂದುಳಿದ ವರ್ಗ ಮೇಲಕ್ಕೆ ತರುವ ಯಾವ ಪ್ರಯತ್ನ ಮಾಡಿತು. ಅಹಿಂದವನ್ನು ಅಧಿಕಾರಕ್ಕೆ ಬರಲು ಸಿಎಂ ಸಿದ್ದರಾಮಯ್ಯ ಬಳಸಿಕೊಂಡರು. ಜಾತಿ ಗಣತಿ ವರದಿ ಅಂಗೀಕಾರವೂ ಆಗಿಲ್ಲ, ಬಿಡುಗಡೆಯೂ ಆಗಿಲ್ಲ. ಇಷ್ಟಕ್ಕೂ. ಸರ್ಕಾರಕ್ಕೆ ಜಾತಿ ಗಣತಿ ನಡೆಸುವ ಅಧಿಕಾರ ಇಲ್ಲ ಎಂದು ಹೇಳಿದರು.ರಾಜ್ಯದಲ್ಲಿ ಜಾತಿ ಗಣತಿಯನ್ನು ಪ್ರಾಮಾಣಿಕವಾಗಿ ಮಾಡಿಲ್ಲ. ಜಯಪ್ರಕಾಶ ಹೆಗಡೆ ಅಲೆಮಾರಿ ಅಸಂಘಟಿತ ಸಮುದಾಯಗಳಿಗೆ ಆದಾಯ ಮೀತಿಗೆ ಒಳಪಡುವ ಕೆನೆಪದರದ ಹೆಸರಿನಲ್ಲಿ ಅಲೆಮಾರಿ ಸಮುದಾಯಗಳಿಗೆ ನ್ಯಾಯ ದೊರಕಿಲ್ಲ. ವೈಯಕ್ತಿಕವಾಗಿ ಅವರಿಗೆ ಏನು ಬೇಕು ಆ ರೀತಿ ಬರೆಸಿಕೊಂಡಿದ್ದಾರೆ ಎಂದು ಅವರು ಆರೋಪಿಸಿದರು.ಜಯಪ್ರಕಾಶ್ ಹೆಗಡೆ ಆಯೋಗ ಮರು ವರ್ಗೀಕರಣ ಮಾಡಿ ಶಿಫಾರಸ್ಸು ಮಾಡಿರುವ ಹೊಸ ಮೀಸಲಾತಿ ಪಟ್ಟಿಯನ್ನು ಜಾರಿಗೊಳಿಸುವುದು ಸುಲಭವಲ್ಲ. ಏಕೆಂದರೆ ಸುಪ್ರೀಂ ಕೋರ್ಟ್ ತೀರ್ಪನ್ನು ಉಲ್ಲಂಘಿಸಿ ಇದನ್ನು ಜಾರಿಗೆ ತರಲಾಗದು, ಒಂದು ವೇಳೆ ಜಾರಿಗೆ ತರಬೇಕಾದರೆ ಸಂವಿಧಾನದ 9ನೇ ಪರಿಚ್ಛೇದಕ್ಕೆ ತಿದ್ದುಪಡಿ ತಂದು ಮೀಸಲಾತಿ ಹೆಚ್ಚಳಕ್ಕೆ ರಕ್ಷಣೆ ಒದಗಿಸಬೇಕು. ಆದರೆ ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸಿ ಇದನ್ನು ರಾಜಕೀಯ ದಾಳ ಮಾಡಿಕೊಳ್ಳಲು ಹೊರಡಿದ್ದಾರೆ. ಎಂದು ಅವರು ದೂರಿದರು.ಬೆಲೆ ಏರಿಕೆ, ಜಾತಿ ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡಲಾಗುತ್ತಿದೆ. ಮೀಸಲಾತಿ ಯಾವುದೇ ರೀತಿಯ ಹಿಂದುಳಿದವರಿಗೆ ನ್ಯಾಯ ಸಿಕ್ಕಿಲ್ಲ. ಹಿಂದುಳಿದವರಿಗೆ ಮುಖ್ಯಮಂತ್ರಿಗಳು ಏನು ಕಾರ್ಯಕ್ರಮ ಕೊಟ್ಟಿದ್ದಾರೆ? ಅತೀ ಹಿಂದುಳಿದ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಸಿಕ್ಕಿಲ್ಲ. ಶಿಕ್ಷಣದಿಂದ ವಂಚಿತವಾಗಿವೆ ಎಂದು ಅವರು ಟೀಕಿದರು.ಶಾಸಕ ಟಿ.ಎಸ್. ಶ್ರೀವತ್ಸ ಮಾತನಾಡಿ, ಮಂಗಳೂರಿನಲ್ಲಿ ನಡೆದ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಬರ್ಬರ ಹತ್ಯೆ ಖಂಡಿಸುತ್ತೇನೆ. ರೌಡಿ ಶೀಟರ್ ಎಂದು ಮಂಗಳೂರು ಪೊಲೀಸ್ ಆಯುಕ್ತರು ಹೇಳಿದ್ದಾರೆ. ಪ್ರಕರಣ ನ್ಯಾಯಾಲಯದಲ್ಲಿ ಇತ್ಯರ್ಥವಾಗದೆ ಇರುವಾಗ ಇಂತಹ ಹೇಳಿಕೆ ಖಂಡನೀಯ. ಈ ಸರ್ಕಾರದಲ್ಲಿ ನಾವು ಏನೇ ಮಾಡಿದರೂ ತಪ್ಪಿಸಿಕೊಳ್ಳಬಹುದು ಎಂಬ ನಂಬಿಕೆಯಿಂದ ಹೀಗೆ ಮಾಡುತ್ತಿದ್ದಾರೆ. ನೆನ್ನೆ ರಾತ್ರಿ ಆರು ಜನರ ಗುಂಪು ಹಲ್ಲೆ ನಡೆಸಿದೆ. ಪ್ರಮುಖ ವೃತ್ತದಲ್ಲಿ ಬರ್ಭರವಾಗಿ ಹತ್ಯೆ ಮಾಡಲಾಗಿದೆ ಎಂದರು.ಕಾಶ್ಮೀರದಲ್ಲಿ ಪ್ರವಾಸಿಗರನ್ನು ಹತ್ಯೆಗೈದ ಉಗ್ರರಿಗಾಗಿ ತಲಾಷ್ ನಡೆಸಲಾಗುತ್ತಿದೆ. ಉಗ್ರಗಾಮಿಗಳ ಮನೆಯನ್ನು ನೆಲಸಮಗೊಳಿಸುವ ಜೊತೆಗೆ ಉಗ್ರಗಾಮಿಗಳನ್ನು ಹತ್ಯೆ ಮಾಡಬೇಕು. ಇದನ್ನು ವಿರೋಧಿಸಿ ನಡೆಸುವುದರ ಮೇಲೂ ನಿಗಾ ಇರಿಸಬೇಕು. ದೇಶ ದ್ರೋಹಿ ಪಾಕ್ ಪರ ಕೂಗುವವರಿಗೂ ಕಠಿಣ ಶಿಕ್ಷೆ ಆಗಬೇಕು. ಕಾಶ್ಮೀರದ ಗೈಡ್ ಮಾಡಿದ ವೀಡಿಯೋ ವನ್ನು ತಾಳೆ ಹಾಕಿ ನೋಡಬೇಕು ಎಂದರು.ಸಚಿವ ಸಂತೋಷ್ ಲಾಡ್ ಹೇಳಿಕೆಯಿಂದ ದೇಶದ ಮರ್ಯಾದೆ ಹಾಳಾಗುತ್ತಿದೆ ಎಂದು ಆರೋಪಿಸಿದರು.ನಗರ ಬಿಜೆಪಿ ಅಧ್ಯಕ್ಷ ಎಲ್. ನಾಗೇಂದ್ರ, ಪ್ರಧಾನ ಕಾರ್ಯದರ್ಶಿ ರಘು, ಮಾಧ್ಯಮ ಸಂಚಾಲಕ ಮಹೇಶ್ ರಾಜ್ ಅರಸ್ ಮೊದಲಾದವರು ಇದ್ದರು.