ಕಿಸ್ಕಿಂದೆಯಿಂದ ಮಂತ್ರಾಲಯದ ವರೆಗೆ ಹಮ್ಮಿಕೊಂಡಿರುವ 3ನೇ ಹಂತದ ನಿರ್ಮಲ ತುಂಗಭದ್ರಾ ಅಭಿಯಾನ ಪಾದಯಾತ್ರೆಗೆ ಕೈ ಜೋಡಿಸಿ ಎಂದು ಗುರುಬಸವ ಮಠಾಧಿಪತಿ ಬಸವಭೂಷಣ ಸ್ವಾಮೀಜಿ ತಿಳಿಸಿದ್ದಾರೆ.
ಸಿರುಗುಪ್ಪ: ನವದೆಹಲಿಯ ರಾಷ್ಟ್ರೀಯ ಸ್ವಾಭಿಮಾನ ಆಂದೋಲನ ಹಾಗೂ ಶಿವಮೊಗ್ಗದ ಪರ್ಯಾವರಣ ಟ್ರಸ್ಟ್, ರಾಜ್ಯ ನಿರ್ಮಲ ತುಂಗಭದ್ರಾ ಅಭಿಯಾನ ಸಮಿತಿಯಿಂದ ಕಿಸ್ಕಿಂದೆಯಿಂದ ಮಂತ್ರಾಲಯದ ವರೆಗೆ ಹಮ್ಮಿಕೊಂಡಿರುವ 3ನೇ ಹಂತದ ನಿರ್ಮಲ ತುಂಗಭದ್ರಾ ಅಭಿಯಾನ ಪಾದಯಾತ್ರೆಗೆ ಕೈ ಜೋಡಿಸಿ ಎಂದು ಗುರುಬಸವ ಮಠಾಧಿಪತಿ ಬಸವಭೂಷಣ ಸ್ವಾಮೀಜಿ ಹೇಳಿದರು.
ನಗರದ ಅಮೃತೇಶ್ವರ ದೇವಸ್ಥಾನದ ಬಯಲು ರಂಗಮಂದಿರದಲ್ಲಿ ಗುರುವಾರ ಸಂಜೆ ಹಮ್ಮಿಕೊಂಡ 3ನೇ ಹಂತದ ನಿರ್ಮಲ ತುಂಗಭದ್ರಾ ಅಭಿಯಾನ ಕುರಿತ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.ತುಂಗಭದ್ರಾ ನದಿ ಸ್ವಚ್ಛತೆ ಕುರಿತು ಜನಜಾಗೃತಿ ಮೂಡಿಸಲು ಡಿ. 27ರಿಂದ ಈ ಅಭಿಯಾನ ಆರಂಭವಾಗಲಿದೆ. ಕಲುಷಿತ ನೀರು ನೇರವಾಗಿ ನದಿಗೆ ಸೇರುತ್ತಿದೆ. ಇಂತಹ ಸಮಸ್ಯೆಯನ್ನು ಸರ್ಕಾರ ಮತ್ತು ಸಾರ್ವಜನಿಕರ ಗಮನಕ್ಕೆ ತರುವುದು ಅಭಿಯಾನದ ಉದ್ದೇಶವಾಗಿದೆ. ನದಿಗೆ ಕಲುಷಿತ ನೀರು ಸೇರುತ್ತಿದ್ದು, ಜಲಚರಗಳ ಮೇಲೆ ಪರಿಣಾಮ ಬೀರುತ್ತಿದೆ ಎಂದು ಆರೋಪಿಸಿದರು.
ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು ಮತ್ತು ಮಾನವನ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ನದಿ ಮಾಲಿನ್ಯವನ್ನು ನಿಲ್ಲಿಸಬೇಕು. ಡಿ. 29ರಂದು ಬೆಳಗ್ಗೆ 9ಕ್ಕೆ ಸಿರುಗುಪ್ಪ ನಗರಕ್ಕೆ ಈ ಅಭಿಯಾನ ತಲುಪಲಿದೆ. ನಂತರ ವಿದ್ಯಾರ್ಥಿಗಳಿಗೆ ಹಾಗೂ ರೈತರಿಗೆ, ಸಾರ್ವಜನಿಕರಿಗೆ ಜಾಗೃತಿ ಸಭೆ ನಡೆಸಲಾಗುವುದು. ಎಲ್ಲರೂ ಭಾಗವಹಿಸುವಂತೆ ತಿಳಿಸಿದರು.ರಾಷ್ಟ್ರೀಯ ಸ್ವಾಭಿಮಾನ ಆಂದೋಲನ ದಕ್ಷಿಣ ಭಾಗದ ಸಂಚಾಲಕ ಮಾಧವನ್, ಮಾಜಿ ಶಾಸಕ ಚಂದ್ರಶೇಖರಸ್ವಾಮಿ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಚೊಕ್ಕ ಬಸವನಗೌಡ, ವಾಲ್ಮೀಕಿ ವಿದ್ಯಾಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಬಿ.ಎಂ. ಸತೀಶ, ನೇಹರಂಗ ಸಂಸ್ಥೆಯ ಅಧ್ಯಕ್ಷ ಆರ್. ಸದಾಶಿವ, ಅಕ್ಕಿಗಿರಿಣಿ ಮಾಲೀಕರ ಸಂಘದ ಅಧ್ಯಕ್ಷ ಬಸವಲಿಂಗಪ್ಪ, ಡಾ. ಮಧುಸೂದನ ಕಾರಿಗನೂರು, ಕೆ. ಬಸವಲಿಂಗಪ್ಪ, ವಕೀಲ ಮಲ್ಲಿಕಾರ್ಜುನ ಸ್ವಾಮಿ, ಚಾಗಿ ಸುಬ್ಬಯ್ಯ ಭಾಗವಹಿಸಿದ್ದರು.