ಕಬಿನಿ ಸಮಸ್ಯೆ ಕೃತಕ: ಜಿಲ್ಲಾಡಳಿತ ತನಿಖೆ ನಡೆಸುತ್ತಾ?

| Published : Mar 28 2024, 12:45 AM IST

ಸಾರಾಂಶ

ಕಬಿನಿ ಕುಡಿವ ನೀರಿನ ಹಾಹಾಕಾರಕ್ಕೆ ಕೆಲವರು ಕೃತಕ ಸಮಸ್ಯೆಯೇ ಕಾರಣ ಎಂದು ಸ್ವತಃ ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಅವರೇ ಹೇಳಿರುವ ಕಾರಣ ಜಿಲ್ಲಾಡಳಿತ ಎಚ್ಚೆತ್ತು ತನಿಖೆ ನಡೆಸುವುದೇ ಎಂಬ ಪ್ರಶ್ನೆ ಎದುರಾಗಿದೆ.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆಕಬಿನಿ ಕುಡಿವ ನೀರಿನ ಹಾಹಾಕಾರಕ್ಕೆ ಕೆಲವರು ಕೃತಕ ಸಮಸ್ಯೆಯೇ ಕಾರಣ ಎಂದು ಸ್ವತಃ ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಅವರೇ ಹೇಳಿರುವ ಕಾರಣ ಜಿಲ್ಲಾಡಳಿತ ಎಚ್ಚೆತ್ತು ತನಿಖೆ ನಡೆಸುವುದೇ ಎಂಬ ಪ್ರಶ್ನೆ ಎದುರಾಗಿದೆ.ಗುಂಡ್ಲುಪೇಟೆ ಪಟ್ಟಣ ಸೇರಿದಂತೆ ತಾಲೂಕಿನ ೧೫ ಹಳ್ಳಿಗಳಿಗೆ ಕಬಿನಿ ನೀರಿನ ಸಂಪರ್ಕವಿದ್ದು, ಕಬಿನಿ ನೀರಿನ ಸರಬರಾಜು ಮಾಡುವ ಡಿಜಿಟಲ್‌ನ ನಾಲ್ಕು ಸ್ಟಾರ್ಟರ್‌ ಕೆಟ್ಟ ನೆಪದಲ್ಲಿ ಗುಂಡ್ಲುಪೇಟೆಗೆ ಸರಿ ಸುಮಾರು ೫೦ ದಿನಗಳಿಂದ ಕಬಿನಿ ನೀರು ಜನರಿಗೆ ಇಲ್ಲದಂತಾಗಿದೆ. ಕಬಿನಿ ನೀರಿನ ಸಮಸ್ಯೆ ಹಾಗೂ ಹಾಹಾಕಾರ ಎದ್ದಿರುವ ಬಗ್ಗೆ ಕನ್ನಡಪ್ರಭ ನಿರಂತರ ವರದಿ ಪ್ರಕಟಿಸುತ್ತಲೇ ಜಿಲ್ಲಾಡಳಿತದ ಗಮನ ಸೆಳೆದಿದ್ದರೂ ಜಿಲ್ಲಾಡಳಿತ ಗುಂಡ್ಲುಪೇಟೆಗೆ ಕುಡಿಯುವ ನೀರಿನ ವಿಚಾರದಲ್ಲಿ ತುಟಿ ಬಿಚ್ಚಿಲ್ಲ. ಡಿಜಿಟಲ್‌ ಸ್ಟಾರ್ಟರ್‌ ರಿಪೇರಿಗೆ ೪೦ ದಿನಗಳು ಬೇಕಾ? ಶಾಪ್ಟ್‌ ಸ್ಟಾರ್ಟರ್‌ ಖರೀದಿಗೆ ಟೆಂಡರ್‌ ಓಪನ್‌ ಆಗಿ ವಾರ ಕಳೆದರೂ ಇನ್ನೂ ಹೊಸ ಸ್ಟಾರ್ಟರ್‌ ಬಂದಿಲ್ಲ ಹಾಗೂ ಡಿಜಿಟಲ್‌ ಸ್ಟಾರ್ಟರ್ಗಳು ರಿಪೇರಿ ಆಗುವುದಿಲ್ಲ ಎಂದು ಪುರಸಭೆ ಕೈ ಚೆಲ್ಲಿ ಕುಳಿತಿದೆ.ಕಬಿನಿ ನೀರಿನ ಡಿಜಿಟಲ್‌ ಸ್ಟಾರ್ಟರ್‌ ಗಳ ದುರಸ್ಥಿ ಮಾಡಿಸಿದ್ದ ಗುತ್ತಿಗೆದಾರರಿಗೆ ಪುರಸಭೆ ಹಣ ಕೊಟ್ಟಿಲ್ಲ. ಕೇಳಿದರೆ ಕಮೀಷನ್‌ ವಿಚಾರದಲ್ಲಿ ಗುತ್ತಿಗೆದಾರ ಹಾಗೂ ಪುರಸಭೆ ಮುಖ್ಯಾಧಿಕಾರಿ ನಡುವೆ ಮುಸುಕಿನ ಗುದ್ದಾಟ ಕೂಡ ನಡೆದಿದೆ ಎಂದು ಕನ್ನಡಪ್ರಭ ವರದಿ ಪ್ರಕಟಿಸಿತ್ತು. ಕನ್ನಡಪ್ರಭ ವರದಿಯ ಬೆನ್ನಲ್ಲೆ ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಕಬಿನಿ ಕುಡಿಯುವ ನೀರಿನ ವಿಚಾರದಲ್ಲಿ ಗುಂಡ್ಲುಪೇಟೆ ಹಾಗೂ ೧೫ ಹಳ್ಳಿಗೆ ಕಬಿನಿ ನೀರಿನ ಸಮಸ್ಯೆ ವಿಚಾರದಲ್ಲಿ ಕೃತಕ ಸಮಸ್ಯೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಡಿಜಿಟಲ್‌ ಸ್ಟಾರ್ಟರ್‌ ಗಳು ತಾನಾಗಿಯೇ ರಿಪೇರಿಗೆ ಬರುತ್ತಿವೆಯೋ ಅಥವಾ ಕೃತಕವಾಗಿ ಕೆಡಿಸುತ್ತಿದ್ದರೋ ಎಂಬ ಅನುಮಾನಕ್ಕೆ ಶಾಸಕರ ಹೇಳಿಕೆಯಿಂದ ಮತ್ತಷ್ಟು ಪುಷ್ಠಿ ಬಂದಿರುವ ಕಾರಣ ಜಿಲ್ಲಾಡಳಿತ ಸುಖಾ ಸುಮ್ಮನೇ ಆಗಾಗ್ಗೆ ರಿಪೇರಿಗೆ ಬರುವ ಬಗ್ಗೆ ಹಾಗೂ ಸ್ಟಾರ್ಟರ್‌ ಕೆಡುವ ಬಗ್ಗೆ ತನಿಖೆ ನಡೆಸಿ ಸಾರ್ವಜನಿಕರಿಗೆ ಸತ್ಯಾಂಶ ತಿಳಿಸಲಿ ಎಂಬುದು ಕನ್ನಡಪ್ರಭದ ಕಳಕಳಿ.ಕಬಿನಿ ನೀರು ಬಂದು ೫೦ ದಿನವಾಯ್ತು!:ಗುಂಡ್ಲುಪೇಟೆ: ಕಬಿನಿ ನೀರು ಗುಂಡ್ಲುಪೇಟೆಗೆ ಬಂದು ಸರಿ ಸುಮಾರು ೫೦ ದಿನಗಳಾಗುತ್ತಿವೆ. ೫೦ ದಿನಗಳಿಂದಲೂ ಸ್ಟಾರ್ಟರ್‌ ರಿಪೇರಿ ನೆಪ ಹೇಳುವ ಪುರಸಭೆ ಸ್ಪಷ್ಟವಾಗಿ ಜನತೆಗೆ ಮಾಹಿತಿಯನ್ನೇ ನೀಡುತ್ತಿಲ್ಲ?ಸ್ಟಾರ್ಟರ್‌ ರಿಪೇರಿಯಾದರೆ ಒಂದು ಸ್ಟಾರ್ಟರ್‌ ಆಗಬಹುದು. ಆದರಿಲ್ಲಿ ನಾಲ್ಕು ಸ್ಟಾರ್ಟರ್‌ ಒಂದೇ ವೇಳೆಗೆ ರಿಪೇರಿಗೆ ಬಂದಿವೆಯಂತೆ? ಇಂಥ ಆಧುನಿಕ ಯುಗದಲ್ಲಿ ಡಿಜಿಟಲ್‌ ಸ್ಟಾರ್ಟರ್‌ ರಿಪೇರಿಗೆ ಇಷ್ಟು ಬೇಕಾ ಎಂಬ ಸಾರ್ವಜನಿಕರ ಪ್ರಶ್ನೆಗೆ ಪುರಸಭೆ ಕಳೆದ ೫೦ ದಿನಗಳಿಂದ ಒಂದೂ ಸ್ಪಷ್ಟನೆ ನೀಡೇ ಇಲ್ಲ! ಮಾತೆತ್ತಿದ್ದರೆ ಸ್ಟಾರ್ಟರ್‌ ರಿಪೇರಿ ಆಗಿಲ್ಲ. ರಿಪೇರಿಗೆ ಕಳುಹಿಸಲಾಗಿದೆ. ರಿಪೇರಿ ಆಯ್ತು ಮತ್ತೆ ರಿಪೇರಿ ಆಯ್ತು ನಾಳೆ ಬರುತ್ತೇ ಎನ್ನುವ ಸಿದ್ಧ ಉತ್ತರ ಪುರಸಭೆ ಅಧಿಕಾರಿಗಳಿಂದ ಬರುತ್ತಿದೆ. ಈಗಿನ ಮಾಹಿತಿ ಪ್ರಕಾರ ನಾಲ್ಕು ಡಿಜಿಟಲ್‌ ಸ್ಟಾರ್ಟರ್‌ ಗಳನ್ನು ರಿಪೇರಿಗೆ ಬೆಂಗಳೂರಿಗೆ ತೆಗೆದುಕೊಂಡು ಹೋದರೂ ಅಲ್ಲಿಯೂ ರಿಪೇರಿ ಆಗಿಲ್ಲ. ರಿಪೇರಿಯೇ ಆಗಲ್ಲ ಎಂದು ಗುತ್ತಿಗೆದಾರ ಹೇಳಿದ್ದಾರೆ. ಹೊಸ ಸ್ಟಾರ್ಟರ್‌ ಖರೀದಿಗೆ ಟೆಂಡರ್‌ ಕೂಡ ಆಗಿದೆ. ಕಳೆದ ಮಾ.೧೫ ರಂದು ಟೆಂಡರ್‌ ಓಪನ್‌ ಆಗಿದೆ. ಗುತ್ತಿಗೆದಾರನಿಗೆ ವರ್ಕ್‌ ಆರ್ಡರ್‌ ಕೂಡ ನೀಡಿದೆ ಆದರೂ ಇಂದಿನ ತನಕ ಹೊಸ ಸ್ಟಾರ್ಟರ್‌ ಬಂದಿಲ್ಲ.