ಮೋದಿ ನೇತೃತ್ವದ ಸರ್ಕಾರ ರಚನೆ ಎಲ್ಲರ ಹೊಣೆ: ಹರತಾಳು ಹಾಲಪ್ಪ

| Published : Mar 28 2024, 12:45 AM IST

ಸಾರಾಂಶ

ಕಾರ್ಯಕರ್ತರು ವೈಮನಸ್ಸು ತೊರೆದು ಅಭ್ಯರ್ಥಿ ಕಾಗೇರಿ ಅವರ ಗೆಲುವಿಗಾಗಿ ಪರಿಶ್ರಮ ಪಡಬೇಕಿದೆ.

ಯಲ್ಲಾಪುರ: ದೇಶದ ಸವಾಂಗೀಣ ಅಭಿವೃದ್ಧಿಯ ಕುರಿತಾಗಿ ದೇಶವಾಸಿಗಳೆಲ್ಲರೂ ನಿರೀಕ್ಷಿಸಿದ್ದ ಕನಸುಗಳೆಲ್ಲವೂ ನನಸಾಗುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಎದುರಾಗುವ ಸಂಸತ್ ಚುನಾವಣೆಯಲ್ಲಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ರಚನೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಕೆನರಾ ಲೋಕಸಭಾ ಕ್ಷೇತ್ರದ ಉಸ್ತುವಾರಿ ಹರತಾಳು ಹಾಲಪ್ಪ ತಿಳಿಸಿದರು.

ಬುಧವಾರ ಪಟ್ಟಣದ ಎಪಿಎಂಸಿ ರೈತ ಸಭಾಭವನದಲ್ಲಿ ಆಯೋಜಿಸಿದ್ದ ಬಿಜೆಪಿ ಉತ್ತರಕನ್ನಡ ಲೋಕಸಭಾ ಕ್ಷೇತ್ರದ ೨೦೨೪ರ ಲೋಕಸಭಾ ಚುನಾವಣೆಯ ಸಿದ್ಧತಾ ಸಭೆ ಉದ್ಘಾಟಿಸಿ ಮಾತನಾಡಿದರು.

ನಮ್ಮ ಪಕ್ಷದ ಎಲ್ಲ ಕಾರ್ಯಕರ್ತರು ತತ್ವ ಸಿದ್ಧಾಂತಗಳಿಗನುಗುಣವಾಗಿ ಕಾರ್ಯನಿರ್ವಹಿಸುವ ವಿಶ್ವಾಸ ನಮ್ಮದಾಗಿದ್ದು, ಬೇರೊಬ್ಬರು ತಲೆತಗ್ಗಿಸುವಂತಹ ಕೆಲಸ ಮಾಡುವುದಿಲ್ಲ ಎಂಬ ನಂಬಿಕೆ ನಮ್ಮದು. ಕಾರ್ಯಕರ್ತರು ವೈಮನಸ್ಸು ತೊರೆದು ಅಭ್ಯರ್ಥಿ ಕಾಗೇರಿ ಅವರ ಗೆಲುವಿಗಾಗಿ ಪರಿಶ್ರಮ ಪಡಬೇಕಿದೆ ಎಂದರು.

ಕುಮಟಾ ಶಾಸಕ ದಿನಕರ ಶೆಟ್ಟಿ ಮಾತನಾಡಿ, ದೇಶದ ಸಮಗ್ರ ಒಳಿತಿಗಾಗಿ. ಮತ್ತೊಮ್ಮೆ ಮೋದಿ ನಾಯಕತ್ವದ ಬಿಜೆಪಿ ಸರ್ಕಾರ ರಚನೆ ನಮ್ಮ ಛಲ ಮತ್ತು ಗುರಿಯಾಗಿದೆ. ಈ ನಿಟ್ಟಿನಲ್ಲಿ ಗೆಲ್ಲುವ ವರೆಗೆ ಹೋರಾಟ ಮಾಡಲಾಗುವುದು. ಪಕ್ಷದ ನಿಷ್ಠಾವಂತ ಸರಳ, ಸಜ್ಜನಿಕೆಯ ಅಭ್ಯರ್ಥಿ ಕಾಗೇರಿಯವರ ಗೆಲುವು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಕಾಂಗ್ರೆಸ್ ಕೇವಲ ಸುಳ್ಳು ಪ್ರಚಾರ ಮತ್ತು ಪೊಳ್ಳು ಭರವಸೆಗಳಿಂದ ಮತದಾರರನ್ನು ದಿಕ್ಕು ತಪ್ಪಿಸುವ ಕಾರ್ಯ ಮಾಡುತ್ತಿದೆ. ಕೇಂದ್ರದ ಬಿಜೆಪಿ ಸರ್ಕಾರ ಅನುಷ್ಠಾನಗೊಳಿಸಿದ ಅನೇಕ ಉಪಯುಕ್ತ ಯೋಜನೆಗಳ ಬಗ್ಗೆ ಪ್ರಚಾರವನ್ನೇ ಮಾಡುತ್ತಿಲ್ಲ ಎಂದರು.

ವಿಧಾನಪರಿಷತ್ ಸದಸ್ಯ ಶಾಂತಾರಾಮ ಸಿದ್ಧಿ ಮಾತನಾಡಿ, ಪಕ್ಷದ ತತ್ವ ಸಿದ್ಧಾಂತಗಳನ್ನು ನಂಬಿರುವ ನಾವು ಸರ್ವಸ್ಪರ್ಶಿ ಸರ್ವವ್ಯಾಪಿ ಎನಿಸಿಕೊಳ್ಳುವ ಮಾದರಿಯಲ್ಲಿ ಕಾರ್ಯ ನಿರ್ವಹಿಸಿ ಗೆಲುವು ಸಾಧಿಸುವ ಗುರಿ ಹೊಂದಿದ್ದೇವೆ ಎಂದರು.

ಬಿಜೆಪಿ ರಾಜ್ಯ ಮಾಧ್ಯಮ ವಕ್ತಾರ ಹರಿಪ್ರಕಾಶ ಕೋಣೆಮನೆ ಮಾತನಾಡಿ, ಚುನಾವಣೆ ಎಂಬ ಮಾರುಕಟ್ಟೆಯಲ್ಲಿ ನಮಗೆ ಬೇಕೆನಿಸಿದ ಉತ್ಪನ್ನ ಪಡೆಯುವುದು ನಮ್ಮ ವಿವೇಚನೆಗೆ ಬಿಟ್ಟ ವಿಚಾರವಾಗಿದೆ. ಪ್ರಾಮಾಣಿಕ, ಸಜ್ಜನ ರಾಜಕಾರಣಿ ಕಾಗೇರಿ ಅವರು ಬಹುಮತ ಪಡೆದು ವಿಜಯ ಸಾಧಿಸುವುದು ಖಚಿತ ಎಂದರು.

ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಕಪ್ಪುಚುಕ್ಕೆ ಹೊಂದಿರದ ನನ್ನ ಸುಧೀರ್ಘ ರಾಜಕೀಯ ಜೀವನದಲ್ಲಿ ಇಂದಿನ ಸಭೆ ಮಹತ್ವದ್ದಾಗಿದ್ದು, ಆತ್ಮವಿಶ್ವಾಸವನ್ನು ಇಮ್ಮಡಿಗೊಳಿಸಿದೆ. ಮೌಲ್ಯ ಕುಸಿತದ ಇಂದಿನ ದಿನಗಳಲ್ಲಿ ಪ್ರಜಾಪ್ರಭುತ್ವದ ಸಂರಕ್ಷಣೆಗಾಗಿ ಕಮಲದ ಗೆಲುವು ಅನಿವಾರ್ಯವಾಗಿದ್ದು, ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ನಾನು ಕಾರ್ಯಕರ್ತರು ಮತ್ತು ಮತದಾರರಿಟ್ಟ ಭರವಸೆಗಳಿಗೆ ಚ್ಯುತಿ ತರುವುದಿಲ್ಲ ಎಂದರು. ತುಷ್ಟೀಕರಣದ ಮೂಲಕ ಓಲೈಕೆ ರಾಜಕಾರಣ ಮಾಡುತ್ತಿರುವ ಕಾಂಗ್ರೆಸ್ ಹತಾಶ ಸ್ಥಿತಿ ತಲುಪಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧ್ಯಕ್ಷ ಎನ್.ಎಸ್. ಹೆಗ್ಡೆ ಮಾತನಾಡಿ, ಈ ಚುನಾವಣೆಯ ಗೆಲುವಿಗಾಗಿ ಪಕ್ಷದ ಕಾರ್ಯಕರ್ತರು ಪ್ರತಿ ಹಂತದಲ್ಲಿಯೂ ವಿವಿಧ ಅಭಿಯಾನದ ಮೂಲಕ ಮತದಾರರಿಗೆ ನೈಜ ಪರಿಸ್ಥಿತಿಯ ಬಗ್ಗೆ ಮನವರಿಕೆಯ ಮಾಹಿತಿ ನೀಡುವ ಕೆಲಸ ಮಾಡುತ್ತಾರೆ ಎಂದರು.

ಖಾನಾಪುರ ಶಾಸಕ ವಿಠಲ ಹಲಗೇಕರ್, ಜೆಡಿಎಸ್‌ನ ರಮೇಶ ನಾಯ್ಕ ಮಾಜಿ ಶಾಸಕರಾದ ಸುನಿಲ ನಾಯಕ ಭಟ್ಕಳ. ಮಾಲತೇಶ ದೊಡ್ಡ ಗೌಡ ಕಿತ್ತೂರು ಸುನಿಲ ಹೆಗಡೆ, ಹಳಿಯಾಳ ಅರವಿಂದ ಪಾಟೀಲ ಖಾನಾಪುರ ಮಾತನಾಡಿದರು. ಮಾಜಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ ಪ್ರಮುಖರಾದ ಎಂ.ಜಿ. ನಾಯ್ಕ, ಪ್ರಶಾಂತ ನಾಯಕ, ಈಶ್ವರ ನಾಯ್ಕ, ಪ್ರಮೋದ ಹೆಗಡೆ, ಶಿವಾನಂದ ನಾಯಕ ಮತ್ತಿತರರು ವೇದಿಕೆಯಲ್ಲಿದ್ದರು.

ಕ್ಷೇತ್ರದ ವಿವಿಧ ಪ್ರದೇಶದ ವಿವಿಧ ತರದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಸುಜಯ ಹೆಗಡೆ ಹಾಡಿದ ಒಂದೇ ಮಾತರಂ ಗೀತೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ಕ್ಷೇತ್ರದ ಸಂಚಾಲಕ ಗೋವಿಂದ ನಾಯ್ಕ ಸ್ವಾಗತಿಸಿದರು. ರಾಘವೇಂದ್ರ ಹೆಗಡೆ ನಿರ್ವಹಿಸಿದರು. ಮಂಡಲಾಧ್ಯಕ್ಷ ಪ್ರಸಾದ ಹೆಗಡೆ ವಂದಿಸಿದರು. ಸಭಾ ಕಾರ್ಯಕ್ರಮಕ್ಕೂ ಮುನ್ನ ವೇದಿಕೆಯಲ್ಲಿದ್ದ ಗಣ್ಯರು ಭಾರತಮಾತೆ, ಪಕ್ಷದ ಸಂಸ್ಥಾಪಕರಾದ ಶ್ಯಾಮ್ ಪ್ರಸಾದ್ ಮುಖರ್ಜಿ ಮತ್ತು ದೀನದಯಾಳ ಉಪಾಧ್ಯಾಯರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.