ಧಾರವಾಡ ಜಿಲ್ಲೆಯಲ್ಲಿ ಒಟ್ಟು 43 ಪರೀಕ್ಷಾ ಕೇಂದ್ರಗಳ ಚಟುವಟಿಕೆಗಳನ್ನು ನೇರ ಪ್ರಸಾರ ಮೂಲಕ ವೀಕ್ಷಿಸಲಾಗುತ್ತಿದೆ. ಮಂಗಳವಾರ ಇಂಗ್ಲಿಷ್ ವಿಷಯದ ಪರೀಕ್ಷೆ ಯಾವುದೇ ಗೊಂದಲವಿಲ್ಲದೆ ಸುಸೂತ್ರವಾಗಿ ನಡೆದಿದೆ ಎಂದು ಜಿಪಂ ಸಿಇಒ ಭುವನೇಶ ಪಾಟೀಲ ತಿಳಿಸಿದರು.

ಧಾರವಾಡ:

ದ್ವಿತೀಯ ಪಿಯುಸಿ ಪರೀಕ್ಷೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಪರೀಕ್ಷಾ ಕೇಂದ್ರಗಳಲ್ಲಿ ಪಾರದರ್ಶಕತೆ ಮತ್ತು ಶಿಸ್ತು ಕಾಪಾಡುವ ಉದ್ದೇಶದಿಂದ ಜಿಪಂ ಕಚೇರಿಯಲ್ಲಿ ವೆಬ್ ಕಾಸ್ಟಿಂಗ್ ವ್ಯವಸ್ಥೆ ಸ್ಥಾಪಿಸಲಾಗಿದೆ ಎಂದು ಜಿಪಂ ಸಿಇಒ ಭುವನೇಶ ಪಾಟೀಲ ಹೇಳಿದರು.

ಜಿಲ್ಲೆಯ ವಿವಿಧ ಕಾಲೇಜು ಹಾಗೂ ವೆಬ್ ಕಾಸ್ಟಿಂಗ್ ಕೇಂದ್ರಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಒಟ್ಟು 43 ಪರೀಕ್ಷಾ ಕೇಂದ್ರಗಳ ಚಟುವಟಿಕೆಗಳನ್ನು ನೇರ ಪ್ರಸಾರ ಮೂಲಕ ವೀಕ್ಷಿಸಲಾಗುತ್ತಿದೆ. ಮಂಗಳವಾರ ಇಂಗ್ಲಿಷ್ ವಿಷಯದ ಪರೀಕ್ಷೆ ಯಾವುದೇ ಗೊಂದಲವಿಲ್ಲದೆ ಸುಸೂತ್ರವಾಗಿ ನಡೆದಿದೆ. ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಮತ್ತು ನಿರ್ಭಯವಾಗಿ ಪರೀಕ್ಷೆ ಬರೆಯುವಂತೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿಸಿದರು. ಪರೀಕ್ಷಾ ಅಕ್ರಮಗಳು ನಡೆಯದಂತೆ ಮನ್ನೆಚ್ಚರಿಕೆ ವಹಿಸುವಂತೆ ಸೂಚಿಸಿದ್ದೇವೆ ಎಂದರು. ಪರೀಕ್ಷೆಗಳ ಕುರಿತಾಗಿ ನಿಯೋಜಿತ ಪರೀಕ್ಷಾ ಅಧಿಕಾರಿ, ಸಿಬ್ಬಂದಿಗಳೊಂದಿಗೆ ಚರ್ಚಿಸಿ, ಮಾಹಿತಿ ಪಡೆದುಕೊಂಡರು. ದ್ವಿತೀಯ ಪಿಯುಸಿ ಪರೀಕ್ಷೆಗಳ ಕುರಿತು ವೆಬ್ ಸ್ಕ್ರೀಮಿಂಗ್ ಕೇಂದ್ರಗಳಿಂದ ಭುವನೇಶ ಪಾಟೀಲ ದೂರವಾಣಿ ಕರೆ ಮಾಡಿ, ಪರೀಕ್ಷೆ ಆಯೋಜನೆ ಬಗ್ಗೆ ಹಾಗೂ ವಿದ್ಯಾರ್ಥಿಗಳ ಪ್ರತಿಕ್ರಿಯೆಗಳ ಬಗ್ಗೆ ಮಾಹಿತಿ ಪಡೆದುಕೊಂಡರು.

ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕಿ ಡಾ. ತೇಜಸ್ವಿನಿ ನಾರಾಯಣಕರ ಇದ್ದರು. ಮಂಗಳವಾರ ನಡೆದ ದ್ವಿತೀಯ ಪಿಯುಸಿ ಇಂಗ್ಲೀಷ್ ಪರೀಕ್ಷೆಗೆ ಒಟ್ಟು 25,215 ವಿದ್ಯಾರ್ಥಿಗಳು ನೋಂದಾಯಿಸಿದ್ದು, 24,784 ವಿದ್ಯಾಥಿಗಳು ಪರೀಕ್ಷೆಗೆ ಹಾಜರಾಗಿದ್ದರು. 431ವಿದ್ಯಾಥಿಗಳು ಪರೀಕ್ಷೆಗೆ ಗೈರಾಗಿದ್ದರು.