ಇಂದಿನಿಂದ ಕಬ್ಳಿ ಬಸವೇಶ್ವರ ಸ್ವಾಮಿ ಜಾತ್ರೋತ್ಸವ

| Published : Nov 09 2024, 01:03 AM IST

ಸಾರಾಂಶ

ಸುತ್ತಮುತ್ತಲಿನ ಗ್ರಾಮ ಹಾಗೂ ದೂರದ ಪಟ್ಟಣಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ತಮ್ಮ ಜಾನುವಾರುಗಳೊಂದಿಗೆ ಕ್ಷೇತ್ರಕ್ಕೆ ಆಗಮಿಸಿ ಶ್ರೀ ಬಸವೇಶ್ವರ ಸ್ವಾಮಿ ಮಹೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ. ಪ್ರತಿದಿನ ಧಾರ್ಮಿಕ ಹಾಗೂ ಸಾಂಸ್ಕೃತ ಕಾರ್ಯಕ್ರಮಗಳು ಜರುಗಲಿವೆ. ದಿಚುಂಚನಗಿರಿ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿ ಹಾಗೂ ಹಾಸನ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿಯವರು ನ.9ರಂದು ಸಾಂಪ್ರದಾಯಿಕ ಧ್ವಜಾರೋಹಣದೊಂದಿಗೆ ಜಾತ್ರೆಗೆ ಚಾಲನೆ ನೀಡಲಿದ್ದಾರೆ. ಕಬ್ಬಳಿ ಶಾಖಾ ಮಠದ ಶಿವಪುತ್ರನಾಥ ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ ಪೂಜಾ ಕೈಂಕರ್ಯ ನಡೆಯಲಿದೆ.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ತಾಲೂಕಿನ ಶ್ರೀ ಕ್ಷೇತ್ರ ಕಬ್ಳಿ ಬಸವೇಶ್ವರ ಸ್ವಾಮಿ ಬೃಹತ್ ಜಾತ್ರಾ ಮಹೋತ್ಸವವು ನ.9 ರಿಂದ 13ರವರೆಗೆ ನಡೆಯಲಿದೆ. ಆದಿಚುಂಚನಗಿರಿ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿ ಹಾಗೂ ಹಾಸನ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿಯವರು ನ.9ರಂದು ಸಾಂಪ್ರದಾಯಿಕ ಧ್ವಜಾರೋಹಣದೊಂದಿಗೆ ಜಾತ್ರೆಗೆ ಚಾಲನೆ ನೀಡಲಿದ್ದಾರೆ.

ಸುತ್ತಮುತ್ತಲಿನ ಗ್ರಾಮ ಹಾಗೂ ದೂರದ ಪಟ್ಟಣಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ತಮ್ಮ ಜಾನುವಾರುಗಳೊಂದಿಗೆ ಕ್ಷೇತ್ರಕ್ಕೆ ಆಗಮಿಸಿ ಶ್ರೀ ಬಸವೇಶ್ವರ ಸ್ವಾಮಿ ಮಹೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ. ಪ್ರತಿದಿನ ಧಾರ್ಮಿಕ ಹಾಗೂ ಸಾಂಸ್ಕೃತ ಕಾರ್ಯಕ್ರಮಗಳು ಜರುಗಲಿವೆ. ಕಬ್ಬಳಿ ಶಾಖಾ ಮಠದ ಶಿವಪುತ್ರನಾಥ ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ ಬಸವೇಶ್ವರ ಸ್ವಾಮಿಗೆ ಪುಷ್ಪಾಲಂಕಾರ ಜೊತೆಗೆ ಪಂಚಾಭಿಷೇಕ ಆಭರಣ ಅಲಂಕಾರ ಹಾಗೂ ಪೂಜಾ ಕೈಂಕರ್ಯ ನಡೆಯಲಿದೆ.

ಪಂಚಲಿಂಗ ಕ್ಷೇತ್ರ ಕಬ್ಬಳಿಯು ಶ್ರೀ ಕಲ್ಲೇಶ್ವರ ಮಲ್ಲೇಶ್ವರ ಸೋಮೇಶ್ವರ ಬೈರೇಶ್ವರ ಹಾಗೂ ಬಸವೇಶ್ವರ ಎಂಬ ಪಂಚಲಿಂಗಗಳಿಂದ ಕೂಡಿರುವ ಪುಣ್ಯಕ್ಷೇತ್ರ ಬಸವೇಶ್ವರ ಸ್ವಾಮಿ ಸನ್ನಿಧಿಯಲ್ಲಿ ಹಲವು ವರ್ಷಗಳಿಂದ ಜಾತ್ರಾ ಮಹೋತ್ಸವ ಅದ್ಧೂರಿಯಾಗಿ ನಡೆಯುತ್ತಾ ಬಂದಿದೆ.

ಶನಿವಾರ ಬೆಳಗ್ಗೆ ಮಂಡಳಿ ಕನಹಳ್ಳಿ ಗ್ರಾಮಸ್ಥರಿಂದ ದೇವಾಲಯಕ್ಕೆ ಹೂವಿನ ಚಪ್ಪರ ಗೋಪೂಜೆ, ಪುಣ್ಯಾಹ ರುದ್ರಾಭಿಷೇಕದ ಬಳಿಕ ಶ್ರೀಗಳಿಂದ ಧರ್ಮದ ಧ್ವಜಾರೋಹಣ ನೆರವೇರಲಿದೆ. ಸಂಜೆ ಶ್ರೀ ಬಸವೇಶ್ವರ ಸ್ವಾಮಿ ಆಂಗ್ಲ ಮಾಧ್ಯಮ ಶಾಲೆಯಿಂದ ವಾರ್ಷಿಕೋತ್ಸವ ನ.10ರ ಭಾನುವಾರ ವಿಶೇಷ ಪೂಜಾ ಕಾರ್ಯಕ್ರಮ ಮತ್ತು ಸಂಜೆ ರಾಷ್ಟ್ರಕವಿ ಕುವೆಂಪು ರಚಿತ ಬೊಮ್ಮನಹಳ್ಳಿ ಕಿಂದರಿಜೋಗಿ ನಾಟಕ ಪ್ರದರ್ಶನ, ನ.11ರ ಸೋಮವಾರ ಬಸವೇಶ್ವರ ಸ್ವಾಮಿ ಸರ್ಪೋತ್ಸವ, ಶ್ರೀ ಚೌಡೇಶ್ವರಿದೇವಿ ಉತ್ಸವ, ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಪುತ್ತಳಿಕೆ ಮತ್ತು ನಿರ್ಮಲಾನಂದನಾಥ ಸ್ವಾಮೀಜಿ ಅವರ ಮುತ್ತಿನ ಪಲ್ಲಕ್ಕಿ ಉತ್ಸವ, ಪುಷ್ಕರಣಿಯಲ್ಲಿ ಚುಂಚಶ್ರೀಗಳ ತೆಪ್ಪೋತ್ಸವ ಹಾಗು ಧಾರ್ಮಿಕ ಸಭೆ ಜರುಗಲಿದೆ.ನ.12ರ ಮಂಗಳವಾರ ಸಂಜೆ ನಾಡಿನ ಸುಪ್ರಸಿದ್ಧ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗು ನ.13ರ ಬುಧವಾರ ಬೆಳಿಗ್ಗೆ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಆಯೋಜಿಸಲಾಗಿದೆ. ಬೆಂಗಳೂರಿನ ಪ್ರದೀಪಾ ವೆಂಕಟೇಶ್ ಪ್ರಸಾದ್ ಅವರ ಕುಟುಂಬ ನಡೆಸಿ ಕೊಡಲಿದೆ. ಗಂಗಾಪೂಜೆ ಬಳಿಕ ಧರ್ಮಧ್ವಜ ಅವರೋಹಣದ ಮೂಲಕ ಜಾತ್ರಾ ಮಹೋತ್ಸವ ಸಂಪನ್ನಗೊಳ್ಳಲಿದೆ. ತೆಪ್ಪೋತ್ಸವ: ಕಬ್ಬಳಿ ಜಾತ್ರಾ ಮಹೋತ್ಸವದ ಆಕರ್ಷಣೆ ತೆಪ್ಪೋತ್ಸವ. ನ.11ರ ಸೋಮವಾರ ಸಂಜೆ ಮುತ್ತಿನ ಪಲ್ಲಕ್ಕಿ ಉತ್ಸವದ ಬಳಿಕ ದೇವಾಲಯದ ಆವರಣದಲ್ಲಿರುವ ಕಲ್ಯಾಣಿಯಲ್ಲಿ ತೆಪ್ಪೋತ್ಸವ ನಡೆಯಲಿದೆ. ವಿದ್ಯುತ್ ಹಾಗು ವಿವಿಧ ಬಗೆಯ ಪುಷ್ಪಗಳಿಂದ ಅಲಂಕೃತ ತೆಪ್ಪದಲ್ಲಿ ಬಾಲಗಂಗಾಧರ ಸ್ವಾಮೀಜಿ ಅವರ ಪ್ರತಿಮೆ ಹಾಗು ಚೌಡೇಶ್ವರಿದೇವಿಯನ್ನು ಪ್ರತಿಷ್ಟಾಪಿಸಲಿದ್ದು, ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರು ರತ್ನ ಸಿಂಹಾಸನ ಅಲಂಕರಿಸಿದ ಬಳಿಕ ಶ್ರೀ ಶಂಭುನಾಥ ಸ್ವಾಮೀಜಿ ತೆಪ್ಪೋತ್ಸವಕ್ಕೆ ಚಾಲನೆ ನೀಡಲಿದ್ದಾರೆ.ಸಿಪ್ಪೆ ತೆಂಗಿನ ಕಾಯಿ ವ್ಯಾಪಾರ: ಈ ಭಾಗದ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪ್ರತೀ ಸೋಮವಾರ ಇಲ್ಲಿ ಸಿಪ್ಪೆ ತೆಂಗಿನಕಾಯಿ ಸಂತೆ ನಡೆಯುತ್ತದೆ. ಇಲ್ಲಿ ವ್ಯಾಪಾರವಾಗದಿದ್ದ ಕಾಯಿಗಳನ್ನು ರೈತರು ಇಲ್ಲಿಯೇ ಬಿಟ್ಟು ಹೋಗಿ ಮತ್ತೆ ಮುಂದಿನ ವಾರ ಅಥವಾ ಯಾವಾಗ ಬೇಕಾದರೂ ಬಂದು ವ್ಯಾಪಾರ ನಡೆಸಬಹುದು. ಅಲ್ಲಿಯವರೆಗೂ ಕಾಯಿಗಳನ್ನು ಯಾರೂ ಮುಟ್ಟುವುದಿಲ್ಲ. ಇಲ್ಲಿ ಬಸವೇಶ್ವರ ಕಾಯುತ್ತಿದ್ದಾನೆಂಬ ನಂಬಿಕೆ ಹಲವು ವರ್ಷಗಳಿಂದ ಇದೆ.

ಆದಿಚುಂಚನಗಿರಿ ಮಠ ನಿರ್ವಹಣೆ: 1998ರಲ್ಲಿ ಗ್ರಾಮಸ್ಥರು ಶ್ರೀ ಕ್ಷೇತ್ರ ಕಬ್ಬಳಿಯ ಸಂಪೂರ್ಣ ಒಡೆತನ ವನ್ನು ಆದಿಚುಂಚನಗಿರಿ ಮಹಾಸಂಸ್ಥಾನ ಮಠಕ್ಕೆ ವಹಿಸಿದರು. ಅಂದಿನಿಂದ ಗ್ರಾಮಸ್ಥರೊಡಗೂಡಿ ದಿನನಿತ್ಯದ ಪೂಜಾ ಕೈಂಕರ್ಯ, ಕಾರ್ತಿಕ ಮಾಸದಲ್ಲಿ ಜಾತ್ರಾ ಮಹೋತ್ಸವ ಹಾಗು ಧನುರ್ಮಾಸದ ಜವಾಬ್ದಾರಿ, ಪ್ರತಿನಿತ್ಯ ದಾಸೋಹ ವ್ಯವಸ್ಥೆ, ಪುರಾತನ ದೇವಾಲಯಗಳ ಜೀರ್ಣೋದ್ಧಾರ, ಸಮುದಾಯ ಭವನ, ಕಲ್ಯಾಣಿ, ಶಿಕ್ಷಣ ಹೀಗೆ ಹಲವು ಅಭಿವೃದ್ದಿ ಕಾರ್ಯಗಳನ್ನು ನಡೆಸಿಕೊಂಡು ಬಂದಿರುವುದು ವಿಶೇಷ.ಶ್ರೀ ಕ್ಷೇತ್ರವನ್ನು ವಹಿಸಿಕೊಂಡ ನಂತರ ಗ್ರಾಮದಲ್ಲಿರುವ ಬಹುತೇಕ ದೇವಾಲಯಗಳನ್ನು ಜೀರ್ಣೋದ್ಧಾರಗೊಳಿಸಿರುವ ಆದಿಚುಂಚನಗಿರಿ ಮಠವು ಪ್ರಸಕ್ತ ವರ್ಷ ಭಕ್ತರ ಸಹಕಾರದೊಂದಿಗೆ ಸುಮಾರು 100ಕೋಟಿ ರು. ವೆಚ್ಚದಲ್ಲಿ ಕ್ಷೇತ್ರಪಾಲಕ ಶ್ರೀ ಬಸವೇಶ್ವರಸ್ವಾಮಿಯ ದೇಗುಲ ಜೀರ್ಣೋದ್ಧಾರ ಕಾರ್ಯ ಕೈಗೊಂಡಿದ್ದು ಪ್ರಗತಿಯಲ್ಲಿದೆ.

ಕ್ಷೇತ್ರಕ್ಕೆ ಹೇಮಾವತಿ ನೀರು: ಶ್ರೀ ಕ್ಷೇತ್ರ ಕಬ್ಬಳಿ ವ್ಯಾಪ್ತಿಯ ಕೆರೆ-ಕಟ್ಟೆಗಳು ಹಾಗು ಕಲ್ಯಾಣಿ ತುಂಬಿಸುವುದು ಚುಂಚಶ್ರೀಗಳ ಬಹುದಿನದ ಕನಸಾಗಿತ್ತು. ಹಲವು ವರ್ಷಗಳಿಂದ ನೀರಿಲ್ಲದೆ ಜಾತ್ರೆ ಹಾಗು ಮಠದ ನಿರ್ವಹಣೆ ಕಷ್ಟವಾಗಿತ್ತು. ಜೊತೆಗೆ ಜನ-ಜಾನುವಾರುಗಳ ಕುಡಿಯುವ ನೀರಿಗೆ ಇನ್ನಿಲ್ಲದ ಹಾಹಾಕಾರ ಎದುರಾಗಿತ್ತು. ಸದ್ಯ ಜಿಲ್ಲೆಯ ಹೃದಯ ಭಾಗದ ಮೂಲಕ ತುಮಕೂರು ಜಿಲ್ಲೆಗೆ ಹಾದುಹೋಗುತ್ತಿರುವ ಹೇಮಾವತಿ ನೀರನ್ನು ಹೊಂಗೆಲಕ್ಷ್ಮೀ ಕ್ಷೇತ್ರದ ಬಳಿಯಿಂದ ಏತನೀರಾವರಿ ಯೋಜನೆಯಡಿ 240 ಎಚ್‌ಪಿ ಸಾಮರ್ಥ್ಯದ 2 ಮೋಟಾರ್ ಪಂಪ್‌ಸೆಟ್ ವ್ಯವಸ್ಥೆಯೊಂದಿಗೆ ಶ್ರೀಕ್ಷೇತ್ರಕ್ಕೆ ನೀರು ತರಲಾಗಿದೆ. ಕಲ್ಯಾಣಿ ತುಂಬಿದ್ದು ಕೆರೆ-ಕಟ್ಟೆಗಳಿಗೆ ನೀರು ಹರಿಯುತ್ತಿದೆ.