ಸಾರಾಂಶ
ಮೆರವಣಿಗೆಯಲ್ಲಿ ವಿಶೇಷ ಉಡುಗೆ-ತೊಡುಗೆಯಲ್ಲಿ ಕಾಣಿಸಿಕೊಂಡ ಮಹಿಳೆಯರು ಪರಸ್ಪರ ಶುಭಾಶಯ ಕೋರಿದರಲ್ಲದೇ, ಒಬ್ಬರಿಗೊಬ್ಬರು ಪ್ರೀತಿಯ ಅಪ್ಪುಗೆಯ ಮಧ್ಯೆ ಸೆಲ್ಫಿ ಪಡೆದುಕೊಂಡು ಸಂಭ್ರಮಿಸಿದರು.
ಹುಬ್ಬಳ್ಳಿ:
ಶ್ರೀ ಸೋಮವಂಶ ಶ್ರೀ ಸಹಸ್ರಾರ್ಜುನ ಮಹಾರಾಜರ ಜಯಂತಿ ಉತ್ಸವ ಅಂಗವಾಗಿ ಎಸ್ಎಸ್‌ಕೆ ಸಮಾಜದ ಕೇಂದ್ರ ಪಂಚ ಸಮಿತಿ ನೇತೃತ್ವದಲ್ಲಿ ಶುಕ್ರವಾರ ನಗರದಲ್ಲಿ ಭವ್ಯ ಮೆರವಣಿಗೆ ನಡೆಯಿತು.ಇಲ್ಲಿನ ತುಳಜಾಭವಾನಿ ದೇವಸ್ಥಾನದಿಂದ ಆರಂಭಗೊಂಡ ಭವ್ಯ ಮೆರವಣಿಗೆ ನಗರದ ಪ್ರಮುಖ ರಸ್ತೆಗಳಾದ ದಾಜಿಬಾನ್‌ಪೇಟ, ಸಂಗೊಳ್ಳಿ ರಾಯಣ್ಣ ವೃತ್ತ, ಮಹಾನಗರ ಪಾಲಿಕೆ, ಕೊಪ್ಪಿಕರ ರಸ್ತೆ, ದುರ್ಗದಬೈಲ್, ಬಟರ್ ಮಾರ್ಕೆಟ್ ಮಾರ್ಗವಾಗಿ ಮರಳಿ ತುಳಜಾಭವಾನಿ ದೇವಸ್ಥಾನಕ್ಕೆ ಬಂದು ಸಂಪನ್ನಗೊಂಡಿತು. ಚಂಡೆ ಮತ್ತು ಮದ್ದಳೆ, ದರ್ಬಾರ ಬ್ಯಾಂಡ್, ಡಿಜೆ, ಏಳೆಂಟು ಕುದುರೆಗಳು, ವಿವಿಧ ವೇಷಭೂಷಣದಲ್ಲಿ ಕಾಣಿಸಿಕೊಂಡ ಮಕ್ಕಳು, ಗೊಂಬೆ ತಂಡ ಸೇರಿ ವಿವಿಧ ಕಲಾತಂಡಗಳು ಮೆರವಣಿಗೆಗೆ ಮತ್ತಷ್ಟು ಮೆರಗು ನೀಡಿದವು.
ಇದಕ್ಕೂ ಪೂರ್ವದಲ್ಲಿ ತುಳಜಾಭವಾನಿ ದೇವಸ್ಥಾನದಲ್ಲಿ ಸಹಸ್ರಾರ್ಜುನ ಮಹಾರಾಜರ ಬೆಳ್ಳಿ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ ಮೆರವಣಿಗೆ ರಥದಲ್ಲಿ ಕುರಿಸಿದರು. ವಿಧ್ಯುಕ್ತವಾಗಿ ಸಮಾಜದ ಮುಖಂಡರು ಮೆರವಣಿಗೆಗೆ ಚಾಲನೆ ನೀಡಿದರು.ಮೆರವಣಿಗೆಯಲ್ಲಿ ವಿಶೇಷ ಉಡುಗೆ-ತೊಡುಗೆಯಲ್ಲಿ ಕಾಣಿಸಿಕೊಂಡ ಮಹಿಳೆಯರು ಪರಸ್ಪರ ಶುಭಾಶಯ ಕೋರಿದರಲ್ಲದೇ, ಒಬ್ಬರಿಗೊಬ್ಬರು ಪ್ರೀತಿಯ ಅಪ್ಪುಗೆಯ ಮಧ್ಯೆ ಸೆಲ್ಫಿ ಪಡೆದುಕೊಂಡು ಸಂಭ್ರಮಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಇದಕ್ಕೂ ಪೂರ್ವದಲ್ಲಿ ಸಮಾಜದ ಬಂಧುಗಳು ನಗರದಲ್ಲಿ ಬೈಕ್ ರ‍್ಯಾಲಿ ನಡೆಸಿದರು. ಈ ವೇಳೆ ಸಮಾಜದ ಸಾವಿರಾರು ಜನರು ಪಾಲ್ಗೊಂಡು ಮೆರಗು ತಂದರು. ವಿಶೇಷ ಪೂಜೆ, ಅಭಿಷೇಕ:
ಶ್ರೀಸಹಸ್ರಾರ್ಜುನ ಜಯಂತಿ ಉತ್ಸವ ಅಂಗವಾಗಿ ನಗರದ ದಾಜಿಬಾನ್ ಪೇಟೆಯಲ್ಲಿರುವ ಶ್ರೀತುಳಜಾಭವಾನಿ ದೇವಸ್ಥಾನದಲ್ಲಿ ಶುಕ್ರವಾರ ಬೆಳಗ್ಗೆ ಕಾಕಡಾರತಿ, ಶ್ರೀಸಹಸ್ರಾರ್ಜುನ ಮಹಾರಾಜರ ಬೆಳ್ಳಿಯ ಮೂರ್ತಿಗೆ ಅಭಿಷೇಕ, ತೊಟ್ಟಿಲೋತ್ಸವ, ಹೋಮ ಹವನ ಹಾಗೂ ಧ್ವಜಾರೋಹಣ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.