ಕನ್ಹೇರಿ ಶ್ರೀಗಳು ಕ್ಷಮೆ ಕೇಳದೆಯೇಭಂಡತನ ಪ್ರದರ್ಶನ: ಎಂಬಿಪಾ

| Published : Oct 26 2025, 02:00 AM IST

ಸಾರಾಂಶ

ಕನ್ಹೇರಿ ಸ್ವಾಮೀಜಿ ಸುಮ್ಮನೆ ಕ್ಷಮೆ ಕೇಳಿ ಬಗೆಹರಿಸುವುದನ್ನು ಬಿಟ್ಟು ಭಂಡತನ ತೋರುತ್ತಿದ್ದಾರೆ. ಇದೆಲ್ಲ ಸುಮ್ಮನೆ ಪೌರುಷ ಹೇಳಿಕೊಳ್ಳಲು ಮಾಡಿದ್ದು. ಅವರು ಮಾತನಾಡಿದ ಶಬ್ದಗಳು ಖಂಡನೀಯವಾಗಿವೆ ಎಂದು ಸಚಿವ ಎಂ.ಬಿ.ಪಾಟೀಲ ಕಿಡಿಕಾರಿದ್ದಾರೆ.

ಕನ್ನಡಪ್ರಭ ವಾರ್ತೆ ವಿಜಯಪುರ

ಕನ್ಹೇರಿ ಸ್ವಾಮೀಜಿ ಸುಮ್ಮನೆ ಕ್ಷಮೆ ಕೇಳಿ ಬಗೆಹರಿಸುವುದನ್ನು ಬಿಟ್ಟು ಭಂಡತನ ತೋರುತ್ತಿದ್ದಾರೆ. ಇದೆಲ್ಲ ಸುಮ್ಮನೆ ಪೌರುಷ ಹೇಳಿಕೊಳ್ಳಲು ಮಾಡಿದ್ದು. ಅವರು ಮಾತನಾಡಿದ ಶಬ್ದಗಳು ಖಂಡನೀಯವಾಗಿವೆ ಎಂದು ಸಚಿವ ಎಂ.ಬಿ.ಪಾಟೀಲ ಕಿಡಿಕಾರಿದ್ದಾರೆ.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕನ್ಹೇರಿ ಶ್ರೀಗಳು ಆಡು ಭಾಷೆಯಲ್ಲಿ ಮಾತನಾಡಿದ್ದಾರೆ ಅಂತಾರೆ. ನನಗೂ ಆಡು ಭಾಷೆಯಲ್ಲಿ ಅನೇಕ ಶಬ್ದಗಳು ಬರುತ್ತವೆ. ನನ್ನ ಬಗ್ಗೆ ಏಕವಚನದಲ್ಲಿ ಮಾತನಾಡಿದ್ದು, ನಾನು ಅವರಿಗೆ ಏಕವಚನದಲ್ಲಿ ಮಾತನಾಡಿದ್ರೆ ಏನಾಗುತ್ತದೆ ಯೋಚಿಸಬೇಕು ಎಂದರು.

ಜಿಲ್ಲಾ ನಿರ್ಬಂಧದ ಹಿಂದೆ ನಾನಿಲ್ಲ. ಇದು ಜಿಲ್ಲಾಡಳಿತದ ಕೆಲಸವಾಗಿದ್ದು, ಜಿಲ್ಲಾಧಿಕಾರಿ, ಎಸ್ಪಿ ನಿರ್ಧಾರ ತೆಗೆದುಕೊಂಡಿದ್ದಾರೆ. ನಿರ್ಬಂಧ ಹೇರದೆ ಏನಾದ್ರೂ ಅನಾಹುತ ಆಗಿದ್ದರೆ ಜಿಲ್ಲಾಡಳಿತವನ್ನು ಪ್ರಶ್ನಿಸುತ್ತಿದ್ದರು. ನನಗೂ ಶ್ರೀಗಳು ಆಪ್ತರು. ಅವರು ಕ್ಷಮೆ ಕೇಳಲಿ. ಕ್ಷಮೆ ಕೇಳಿದ್ದರೆ ಅವರೇ ದೊಡ್ಡವರಾಗುತ್ತಿದ್ದರು. ಸಿದ್ಧೇಶ್ವರ ಶ್ರೀಗಳು ಆಡು ಭಾಷೆಯಲ್ಲೆ ಪ್ರವಚನ ಮಾಡುತ್ತಿದ್ದರು. ಅವರು ಎಂದಾದರೂ ಈ ರೀತಿ ಮಾತನಾಡಿದ್ದಾರಾ? ಶ್ರೀಗಳ ಆಡು ಭಾಷೆಯನ್ನು ಇವರು ಕಲಿಯಬೇಕು. ಅವರು ಸಿದ್ಧೇಶ್ವರ ಶ್ರೀಗಳ ಶಿಷ್ಯ, ನಾನು ಶಿಷ್ಯ ಎಂದು ಟಾಂಗ್ ನೀಡಿದರು.

ಹಿಂದೂಗಳನ್ನು ಒಡೆಯೋದರಲ್ಲಿ ಸಚಿವ ಎಂ.ಬಿ.ಪಾಟೀಲ ಅಗ್ರಸ್ಥಾನದಲ್ಲಿದ್ದಾರೆ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಈಶ್ವರಪ್ಪ ಹೀಗೆ ಮಾತನಾಡುತ್ತಾರೆ ಅಂತಲೇ ಅವರನ್ನು ಬಿಜೆಪಿಯಿಂದ ಹೊರಗೆ ಹಾಕಲಾಗಿದೆ ಎಂದು ಟೀಕಿಸಿದರು.