ಕನ್ನಡ ಐತಿಹಾಸಿಕ, ಸಾಹಿತ್ಯಿಕವಾಗಿ ಶ್ರೀಮಂತ ಭಾಷೆ: ರವಿ ಎಂ. ನಾಯ್ಕ

| Published : Dec 17 2024, 01:03 AM IST

ಕನ್ನಡ ಐತಿಹಾಸಿಕ, ಸಾಹಿತ್ಯಿಕವಾಗಿ ಶ್ರೀಮಂತ ಭಾಷೆ: ರವಿ ಎಂ. ನಾಯ್ಕ
Share this Article
  • FB
  • TW
  • Linkdin
  • Email

ಸಾರಾಂಶ

ಭಕ್ತಿ, ಜ್ಞಾನ, ದೇವರು ಇವುಗಳ ಬಗ್ಗೆ ವೈಚಾರಿಕವಾಗಿ ಆಲೋಚನೆ ಮಾಡಬೇಕು. ದೇವರು ಸತ್ಯ, ಧರ್ಮವೂ ಸತ್ಯ. ಆದರೆ ಅವುಗಳ ಹಿಂದಿರುವ ತಿಳಿವಳಿಕೆ ವೈಚಾರಿಕವಾಗಿ, ವೈಜ್ಞಾನಿಕ ಆಲೋಚನೆ ಮಾಡಬೇಕು.

ಹೊನ್ನಾವರ: ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಬೇಕು. ಅಲ್ಲದೇ ಕನ್ನಡ ಮಾಧ್ಯಮ ಎಂದರೆ ಕಡೆಗಣಿಸಬಾರದು. ಇದು ಬಹಳ ಪಾಂಡಿತ್ಯ ಇರುವ, ಇತಿಹಾಸದ ಹಿನ್ನೆಲೆ ಇರುವ ಭಾಷೆಯಾಗಿದೆ ಎಂದು ವಿಶ್ರಾಂತ ಜಿಲ್ಲಾ ನ್ಯಾಯಾಧೀಶ ರವಿ ಎಂ. ನಾಯ್ಕ ತಿಳಿಸಿದರು.

ತಾಲೂಕಿನ ಚಿಕ್ಕನಕೋಡ ದುರ್ಗಾಂಬಾ ದೇವಸ್ಥಾನದ 73ನೇ ವಾರ್ಷಿಕ ವರ್ಧಂತಿ ಉತ್ಸವದ ಪ್ರಯುಕ್ತ ಸನ್ಮಾನ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಸಾಹಿತ್ಯಿಕವಾಗಿಯೂ ಬಹಳ ಪ್ರಾಚೀನವಾದ ಭಾಷೆ. ಇಂಗ್ಲಿಷ್ ಭಾಷೆ ಅಥವಾ ಕಾನ್ವೆಂಟ್‌ಗೆ ಸೇರಿಸುವುದು ಒಂದು ಫ್ಯಾಷನ್ ಆಗಿದೆ. ಆದರೆ ಕನ್ನಡ ಶಾಲೆಗಳಲ್ಲಿಯೂ ಉತ್ತಮ ಶಿಕ್ಷಕ ವೃಂದವಿದೆ ಎಂದರು.

ವಿಶ್ರಾಂತ ಪ್ರಾಚಾರ್ಯ ವಿ.ಐ. ನಾಯ್ಕ ಮಾತನಾಡಿ, ಯಜ್ಞ- ಯಾಗ ಮಾಡುವುದರಿಂದ ಮನುಷ್ಯನಲ್ಲಿನ ಅಂತಃಶಕ್ತಿ ವೃದ್ಧಿಯಾಗುತ್ತದೆ. ಆರೋಗ್ಯಕರ ಪ್ರಯೋಜನದ ಜತೆಗೆ ಪರಿಸರವು ಶುದ್ಧವಾಗುತ್ತದೆ ಎಂದರು.

ಸಾಹಿತಿ ಸುಮುಖಾನಂದ ಜಲವಳ್ಳಿ ಮಾತನಾಡಿ, ಇಂದು ದೇವರು, ಧರ್ಮ ನಮ್ಮಲ್ಲಿ ಜ್ಞಾನ, ಪ್ರಜ್ಞೆ ಮೂಡಿಸುವ ಬದಲಾಗಿ ಇನ್ನಷ್ಟು ಮೌಢ್ಯಕ್ಕೆ ಕೊಂಡೊಯ್ಯುತ್ತಿದೆ. ನಾವು ಮಾತೃ ಮೂಲ ಸಂಸ್ಕೃತಿಯಿಂದ ಬಂದವರು. ಭಕ್ತಿ, ಜ್ಞಾನ, ದೇವರು ಇವುಗಳ ಬಗ್ಗೆ ವೈಚಾರಿಕವಾಗಿ ಆಲೋಚನೆ ಮಾಡಬೇಕು. ದೇವರು ಸತ್ಯ, ಧರ್ಮವೂ ಸತ್ಯ. ಆದರೆ ಅವುಗಳ ಹಿಂದಿರುವ ತಿಳಿವಳಿಕೆ ವೈಚಾರಿಕವಾಗಿ, ವೈಜ್ಞಾನಿಕ ಆಲೋಚನೆ ಮಾಡಬೇಕಾಗುತ್ತದೆ ಎಂದರು.

ವಿವಿಧ ಕ್ಷೇತ್ರದದಲ್ಲಿ ಸೇವೆ ಸಲ್ಲಿಸಿದ ದಾಮೋದರ ನಾಯ್ಕ, ಸುಪ್ರಿತಾ ಆಚಾರ್ಯ, ಗೋವಿಂದ ನಾಯ್ಕ, ಭಾಸ್ಕರ ನಾಯ್ಕ, ಲಕ್ಷ್ಮಣ ನಾಯ್ಕ, ಗಣಪ ನಾಯ್ಕ ಅವರನ್ನು ಸನ್ಮಾನಿಸಲಾಯಿತು. ಶೈಕ್ಷಣಿಕವಾಗಿ ಸಾಧನೆಗೈದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ನಡೆಯಿತು.

ಚಿಕ್ಕನಕೋಡ ಗ್ರಾಪಂ ಅಧ್ಯಕ್ಷೆ ಶ್ಯಾಮಲಾ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಪಿಡಬ್ಲ್ಯುಡಿ ಕುಮಟಾ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಎಂ.ಪಿ. ನಾಯ್ಕ, ಉದ್ಯಮಿಗಳಾದ ಎಂ.ಆರ್. ನಾಯ್ಕ, ಚಿಕ್ಕನಕೊಡ ಗ್ರಾಪಂ ಸದಸ್ಯ ವಿಘ್ನೇಶ್ವರ ಹೆಗಡೆ, ರಾಜು ನಾಯ್ಕ, ನಾಗೇಶ ಪುಟ್ಟು ನಾಯ್ಕ ಉಪಸ್ಥಿತರಿದ್ದರು. ಆರಾಧ್ಯ ನಾಯ್ಕ ಪ್ರಾರ್ಥಿಸಿದರು. ರಕ್ಷಾ ನಾಯ್ಕ ಸ್ವಾಗತಿಸಿದರು. ಪಾಂಡುರಂಗ ನಾಯ್ಕ ವಂದಿಸಿದರು. ದಯಾನಂದ ನಾಯ್ಕ, ಪವಿತ್ರಾ ನಾಯ್ಕ ನಿರ್ವಹಿಸಿದರು.

ಧಾರ್ಮಿಕ ಕಾರ್ಯಕ್ರಮ: ಡಿ. 13ರಂದು ಬೆಳಗ್ಗೆ ದೇವತಾ ಪ್ರಾರ್ಥನೆ, ಗಣಪತಿ ಪೂಜಾ, ಪುಣ್ಯಾಹ, ಬ್ರಹ್ಮಕುರ್ಚಾಹವನ, ಗಣಹವನ, ಅಧಿವಾಸ ಹೋಮ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಜರುಗಿದವು. ಡಿ. 14ರಂದು ಬೆಳಗ್ಗೆ ಶಾಂತಿ ಹೋಮ, ಕಲಶಾಭಿಷೇಕ, ಸಾಮೂಹಿಕ ಸತ್ಯನಾರಾಯಣ ವ್ರತ, ನವಚಂಡಿಹೋಮ, ಪೂರ್ಣಾಹುತಿ, ಮಹಾಮಂಗಳಾರತಿ, ಮಹಾಪ್ರಸಾದ ವಿತರಣೆ ನೆರವೇರಿಸಲಾಯಿತು.

ಶ್ರೀ ದುರ್ಗಾಂಬಾ ಟ್ರಸ್ಟ್‌ನ ಪ್ರಮುಖರಾದ ಆರ್.ಪಿ. ನಾಯ್ಕ ಮುಂದಾಳತ್ವದಲ್ಲಿ ಕಾರ್ಯಕ್ರಮ ಆಯೋಜನೆಯಾಗಿತ್ತು. ಸಾವಿರಾರು ಸಂಖ್ಯೆಯ ಭಕ್ತರು ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ಕೃತಾರ್ತರಾದರು. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಚಂದ್ರಹಾಸ ಚರಿತ್ರೆ ಯಕ್ಷಗಾನ ಪ್ರದರ್ಶನಗೊಂಡಿತು.