ಕನ್ನಡಪ್ರಭ ವಾರ್ತೆ ಸವದತ್ತಿ ವಿದ್ಯಾರ್ಥಿಗಳಿಗೆ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳು ಅತ್ಯಂತ ಸಹಕಾರಿಯಾಗಿವೆ. ಅದರಲ್ಲೂ ಚಿತ್ರಕಲಾ ಸ್ಪರ್ಧೆಗಳು ಮಕ್ಕಳ ಮಾನಸಿಕ ಬೆಳೆವಣಿಗೆಗೆ ಅತ್ಯುತ್ತ ಸಾಧನ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎ.ಎ.ಖಾಜಿ ಹೇಳಿದರು.

ಕನ್ನಡಪ್ರಭ ವಾರ್ತೆ ಸವದತ್ತಿ

ವಿದ್ಯಾರ್ಥಿಗಳಿಗೆ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳು ಅತ್ಯಂತ ಸಹಕಾರಿಯಾಗಿವೆ. ಅದರಲ್ಲೂ ಚಿತ್ರಕಲಾ ಸ್ಪರ್ಧೆಗಳು ಮಕ್ಕಳ ಮಾನಸಿಕ ಬೆಳೆವಣಿಗೆಗೆ ಅತ್ಯುತ್ತ ಸಾಧನ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎ.ಎ.ಖಾಜಿ ಹೇಳಿದರು.

ಪಟ್ಟಣದ ಗುರುಭವನದಲ್ಲಿ ಕನ್ನಡಪ್ರಭಾ ಹಾಗೂ ಏಷಿಯಾನೆಟ್‌ ಸುವರ್ಣ ನ್ಯೂಸ್, ಕರ್ನಾಟಕ ಚಿತ್ರಕಲಾ ಪರಿಷತ್, ಸಾರ್ವಜನಿಕ ಶಿಕ್ಷಣ ಇಲಾಖೆ, ಕರ್ನಾಟಕ ಅರಣ್ಯ ಇಲಾಖೆ ಮತ್ತು ಎಸ್.ಬಿ.ಸಿ ಬಾಳೋಜಿ ಪೌಂಢೇಶನ್ ಸಹಯೋಗದಲ್ಲಿ ಮಕ್ಕಳ ದಿನಾಚರಣೆ ಪ್ರಯುಕ್ತ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು. ಕನ್ನಡಪ್ರಭ ದಿನಪತ್ರಿಕೆ ಮಕ್ಕಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಹಮ್ಮಿಕೊಂಡಿದ್ದ ಚಿತ್ರಕಲಾ ಸ್ಪರ್ಧೆ ಶ್ಲಾಘನೀಯವಾಗಿದೆ. ಕೇವಲ ಮಾಧ್ಯಮ ಕ್ಷೇತ್ರದಲ್ಲಿ ಮಾತ್ರ ತಮ್ಮ ಪಾತ್ರವನ್ನು ಸೀಮಿತಗೊಳಿಸದೆ ಇಂದು ಶೈಕ್ಷಣಿಕ ಕ್ಷೇತ್ರದಲ್ಲೂ ಸ್ಪರ್ಧಾತ್ಮಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದು ಸಂತಸದ ವಿಷಯ, ಮಕ್ಕಳು ಆಸಕ್ತಿವಹಿಸಿ ಅರಣ್ಯ ಮತ್ತು ವನ್ಯ ಜೀವಿಗಳ ಚಿತ್ರಗಳನ್ನು ಬಿಡಿಸಿರುವುದನ್ನು ಕಂಡು ಖುಷಿಯಾಗಿದೆ. ಸಮಾಜದ ಅನೇಕ ಸಂಸ್ಥೆಗಳು ಇಂತಹ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳಲಿ ಎಂದು ಆಶಿಸಿದರು.

ಉಪ ವಲಯ ಅರಣ್ಯಾಧಿಕಾರಿ ಎಸ್.ಬಿ.ಪಾವಟೆ ಮಾತನಾಡಿ, ಚಿತ್ರಕಲೆಯ ಸ್ಪರ್ಧೆಯ ಜೊತೆಗೆ ಇಂದು ಮಕ್ಕಳಲ್ಲಿ ಪರಿಸರ ಮತ್ತು ಅರಣ್ಯ ಸಂಪತ್ತಿನ ಮಹತ್ವವನ್ನು ತಿಳಿಸುವ ಕನ್ನಡಪ್ರಭ ಮತ್ತು ಸುವರ್ಣ ನ್ಯೂಸ್‌ ಕಾರ್ಯ ಮಾದರಿಯಾಗಿ ಪರಿಣಮಿಸುತ್ತಿದೆ. ನಮ್ಮ ಭಾಗದ ಅರಣ್ಯಗಳಲ್ಲಿ ಸಾಕಷ್ಟು ವನ್ಯಜೀವಿಗಳು ವಾಸ ಮಾಡುತ್ತಿದ್ದು, ಅರಣ್ಯ ರಕ್ಷಣೆ ಜೊತೆಗೆ ವನ್ಯಜೀವಿಗಳ ರಕ್ಷಣೆಯೂ ಅಷ್ಟೇ ಮಹತ್ವ ಪಡೆದಿದೆ. ಕಾಡು ಉಳಿದರೆ ನಾಡು ಎಂಬ ನಾನ್ನುಡಿಯಂತೆ ನಮಗೆ ಉತ್ತಮ ಪರಿಸರ ಮತ್ತು ಆಮ್ಲಜನಕ ಬೇಕಾದಲ್ಲಿ ನಾವು ಸಸ್ಯ ಸಂರಕ್ಷಣೆಯನ್ನು ಮಾಡಲೇಬೇಕಿದೆ. ಇಂದಿನ ಕಾಂಕ್ರೀಟ್ ಕಟ್ಟಡಗಳ ಮಧ್ಯ ಹಸಿರು ಗಿಡಗಳು ಕಣ್ಮರೆಯಾಗುತ್ತಿರುವುದು ವಿಷಾದನೀಯ ಎಂದು ಕಳವಳ ವ್ಯಕ್ತಪಡಿಸಿದರು.

ಸಹಾಯಕ ಶಿಕ್ಷಣಾಧಿಕಾರಿ ಅರ್ಜುನ ಕಾಮಣ್ಣವರ ಮಾತನಾಡಿ, ಮಾಧ್ಯಮ ಸಂಸ್ಥೆಗಳ ನೇತೃತ್ವದಲ್ಲಿ ಶಿಕ್ಷಣ ಇಲಾಖೆ, ಅರಣ್ಯ ಇಲಾಖೆ ಹಾಗೂ ವಿವಿಧ ಸಂಘ ಸಂಸ್ಥೆಗಳು ಕೈಜೋಡಿಸಿ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಚಿತ್ರಕಲೆಯ ಮೂಲಕ ಪರಿಸರ ಜ್ಞಾನ ಮೂಡಿಸುತ್ತಿರುವ ಕಾರ್ಯ ಮೆಚ್ಚುಗೆಗೆ ಪಾತ್ರವಾಗಿದೆ. ಚಿತ್ರ ಕಲೆ ಸ್ಪರ್ಧೆಯು ಕೇವಲ ಪ್ರೋತ್ಸಾವಾಗಿರದೆ ಮಕ್ಕಳನ್ನು ಪರಿಸರದ ರಕ್ಷಣೆ ಕಡೆಗೆ ಕರೆದೊಯ್ಯುವ ಕಾರ್ಯ ಮಾಡುತ್ತಿರುವುದು ಖುಷಿಯ ವಿಷಯ ಎಂದರು.

ರಂಗ ಆರಾಧನಾ ಸಂಸ್ಕೃತಿಕ ಸಂಘಟನೆ ಅಧ್ಯಕ್ಷ ಶ್ರೀನಿವಾಸ ಗದಗ, ಸಿ.ಆರ್.ಪಿಗಳಾದ ರವಿ ನಲವಡೆ, ಎಚ್.ಎಲ್.ನದಾಫ, ರಾಮಚಂದ್ರಪ್ಪ, ಕನ್ನಡಪ್ರಭ ವರದಿಗಾರ ಹಾಗೂ ಎಸ್.ಬಿ.ಬಾಳೋಜಿ ಪೌಂಢೇಶನ್ ಕಾರ್ಯದರ್ಶಿ ಸುರೇಶ.ಭೀ.ಬಾಳೋಜಿ, ಶಿಕ್ಷಕ ಪ್ರಕಾಶ ಹೆಮ್ಮರಡಿ ಉಪಸ್ಥಿತರಿದ್ದರು. ಶಿವಾನಂದ ತಾರಿಹಾಳ ನಿರೂಪಿಸಿ, ವಂದಿಸಿದರು.

-----ಬಾಕ್ಸ್‌

ಸ್ಪರ್ಧೆಯಲ್ಲಿ 109 ವಿದ್ಯಾರ್ಥಿಗಳು ಭಾಗಿ

ಸ್ಪರ್ಧೆಯಲ್ಲಿ 109 ವಿದ್ಯಾರ್ಥಿಗಳು ಭಾಗಿ: ೮ನೇ ತರಗತಿಯ ೪೨, ೯ನೇ ತರಗತಿಯ ೩೭ ಹಾಗೂ ೧೦ನೇ ತರಗತಿಯ ೩೦ ವಿದ್ಯಾರ್ಥಿಗಳು ಸೇರಿ ಒಟ್ಟು ೧೦೯ ವಿದ್ಯಾಥಿಗಳು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.

ಎಸ್.ಬಿ.ಬಾಳೋಜಿ ಫೌಂಡೇಶನ್‌ನಿಂದ ಚಿತ್ರಕಲಾ ಸ್ಪರ್ಧೆಯ ಸಂಪೂರ್ಣ ಪ್ರಾಯೋಜಕತ್ವ ವಹಿಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳ ಚಿತ್ರಕಲಾ ಸ್ಪರ್ಧೆಗೆ ಅಗತ್ಯ ಸಾಮಗ್ರಿಗಳ ಪೂರೈಕೆಯ ಜೊತೆಗೆ ನೆನಪಿನ ಕಾಣಿಕೆ, ಪ್ರಶಸ್ತಿ ಪತ್ರ ಹಾಗೂ ಅತಿಥಿಗಳಿಗೆ ವಿಶೇಷ ಕಾಣಿಕೆಗಳನ್ನು ನೀಡಿ ಸ್ಪರ್ಧೆಗೆ ಮೆರಗು ತಂದರು. ಅರಣ್ಯ ಇಲಾಖೆಯಿಂದ ಮಕ್ಕಳಿಗೆ ಮತ್ತು ಅತಿಥಿಗಳಿಗೆ ಸಸಿ ವಿತರಣೆ ಮಾಡಲಾಯಿತು.

ನಿರ್ಣಾಯಕರಾಗಿ ಚಿತ್ರಕಲಾ ಶಿಕ್ಷಕರಾದ ಎಸ್.ವೈ.ಗುರಿಕಾರ, ಅನೀಲ ಕರಾಳೆ, ಎನ್.ಎಮ್.ಸಾಬಣ್ಣವರ, ಸಿದ್ದೇಶ ಸಂಗೊಳ್ಳಿ, ಶಿವಾನಂದ ಮಟ್ಟಿ, ಎಮ್.ವಿ.ಬೆಟಸೂರಮಠ, ಎಸ್.ಎಸ್.ಅಂಗಡಿ ಭಾಗವಹಿಸಿದ್ದರು. ಈ ಮೂಲಕ ಚಿತ್ರಕಲಾ ಸ್ಪರ್ಧೆಯ ಪ್ರಕ್ರಿಯೆಯಲ್ಲಿ ಸಂಪೂರ್ಣ ಸಹಕಾರ ನೀಡಿದರು.

---------ಬಾಕ್ಸ್‌

ಸ್ಪರ್ಧೆಯ ವಿಜೇತರು ಯಾರು..?

೮ನೇ ತರಗತಿಯ ವಿದ್ಯಾರ್ಥಿಗಳಿಗೆ ನಡೆದ ಚಿತ್ರಕಲಾ ಸ್ಪರ್ಧೆಯಲ್ಲಿ ಕುಮಾರೇಶ್ವರ ಆಂಗ್ಲ ಮಾಧ್ಯಮ ಶಾಲೆಯ ರಾಮಕೃಷ್ಣ ಮೌನೇಶ ಬಡಿಗೇರ- ಪ್ರಥಮ, ಮೌಲಾನಾ ಅಜಾದ ಮಾಡೆಲ್ ಶಾಲೆಯ ಪೃಥ್ವಿ ಅಲ್ಲಯ್ಯನವರ- ದ್ವಿತೀಯ, ಎಸ್.ಜಿ ಶಿಂತ್ರಿ ಆಂಗ್ಲ ಮಾಧ್ಯಮ ಶಾಲೆಯ ತೇಜಶ್ವಿನಿ ಕಲಾಲ - ತೃತೀಯ ಸ್ಥಾನ ಪಡೆದರು.

೯ನೇ ತರಗತಿ ವಿಭಾಗದಲ್ಲಿ ಐ.ಪಿ.ಡಿ ಉರ್ದು ಹೈಸ್ಕೂಲಿನ ವಿದ್ಯಾರ್ಥಿಗಳಾದ ಅಲ್ಫಾರಾ ಬಡೋನಿ - ಪ್ರಥಮ, ಸಮ್ರಿನ್ ಲಕ್ಷ್ಮೇಶ್ವರ - ದ್ವಿತೀಯ, ವಿ.ಆರ್.ಸಿ ಹೈಸ್ಕೂಲ್‌ನ ಗಾಯತ್ರಿ ಮಲ್ಲಾಡ ತೃತೀಯ ಸ್ಥಾನ ಪಡೆದರು.

೧೦ನೇ ತರಗತಿ ವಿಭಾಗದಲ್ಲಿ ಸಿ.ಎಮ್.ಮಾಮನಿ ಕನ್ನಡ ಮಾಧ್ಯಮ ಪ್ರೌಢಶಾಲೆಯ ಅಭಿಷೇಕ ದತ್ತಾ - ಪ್ರಥಮ, ಜಿ.ಜಿ.ಚೋಪ್ರಾ ಪ್ರೌಢಶಾಲೆಯ ಬೈರಪ್ಪ ಹೊನಗೇಕರ -ದ್ವಿತೀಯ, ಕೆ.ಎಲ್.ಇ ಆಂಗ್ಲ ಮಾಧ್ಯಮ ಶಾಲೆಯ ಶ್ರೇಯಾ.ಎ - ತೃತಿಯ ಸ್ಥಾನ ಪಡೆದರು.