ಪುರಾತನ ಭಾಷೆಗಳಲ್ಲಿ ಕನ್ನಡವೂ ಒಂದು

| Published : Nov 13 2025, 12:05 AM IST

ಸಾರಾಂಶ

ಕನ್ನಡ ಸರಳ ಸುಂದರ ಭಾಷೆಯಾಗಿದ್ದು, ಭಾರತದಲ್ಲಿ ಅತ್ಯಂತ ಪುರಾತನವಾದಂತಹ ಭಾಷೆಗಳಲ್ಲಿ ಕನ್ನಡ ಭಾಷೆಯೂ ಒಂದಾಗಿರುವುದು ಹೆಮ್ಮೆಯ ಸಂಗತಿ.

ಕನ್ನಡಪ್ರಭ ವಾರ್ತೆ ತಿಪಟೂರು

ಕನ್ನಡ ಸರಳ ಸುಂದರ ಭಾಷೆಯಾಗಿದ್ದು, ಭಾರತದಲ್ಲಿ ಅತ್ಯಂತ ಪುರಾತನವಾದಂತಹ ಭಾಷೆಗಳಲ್ಲಿ ಕನ್ನಡ ಭಾಷೆಯೂ ಒಂದಾಗಿರುವುದು ಹೆಮ್ಮೆಯ ಸಂಗತಿ. ಇಂತಹ ಭಾಷೆಯನ್ನು ಉಳಿಸಿ ಬೆಳೆಸಿ ಇಂದಿನ ಯುವಜನತೆಗೆ ಕನ್ನಡದ ಅಭಿಮಾನ ಬೆಳೆಸುವಂತಾಗಬೇಕೆಂದು ಎಂದು ನಿವೃತ್ತ ಮುಖ್ಯ ಶಿಕ್ಷಕರಾದ ಸುರೇಶ್ ತಿಳಿಸಿದರು.ನಗರದ ನಿವೃತ್ತ ನೌಕರರ ಸಂಘದ ವತಿಯಿಂದ ನಡೆದ ಮಾಸಿಕ ಸಭೆಯಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ, ಕನಕ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಾವಿರಾರು ವರ್ಷಗಳ ಪರಂಪರೆಯಿರುವ ಕನ್ನಡ ಭಾಷೆಗೆ ಅಳಿವಿಲ್ಲ, ಹಾನಿಯೂ ಇಲ್ಲ. ಮಾತೃ ಭಾಷೆಯ ಮೇಲೆ ಪ್ರಬುದ್ಧತೆ ಬೆಳೆಸಿಕೊಳ್ಳವ ಮೂಲಕ ಉಳಿಸಿ-ಬೆಳೆಸಿ ಪ್ರೀತಿಸುವ ಮನೋಗುಣವನ್ನು ಕನ್ನಡಿಗಾರದ ನಾವು ಬೆಳೆಸಿಕೊಳ್ಳಬೇಕು. ಎಂಟು ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದ ಕನ್ನಡ ಭಾಷೆ ಸುಂದರ ಹಾಗೂ ಶ್ರೀಮಂತವಾಗಿದೆ. ಹಲವಾರು ಮಹನೀಯರುಗಳು ಇದರ ಬೆಳವಣಿಗೆಗಾಗಿ ಶ್ರಮಿಸಿದ್ದು, ಅವರ ಆದರ್ಶಗಳು ನಮಗೆ ಶ್ರೀರಕ್ಷೆಯಿದ್ದಂತೆ. ಅನ್ಯ ಭಾಷಿಕರಿಗಿರುವ ಭಾಷಾಭಿಮಾನ ನಮ್ಮ ಕನ್ನಡಿಗರಲ್ಲೂ ಇಂದು ಮೂಡಬೇಕಾಗಿದೆ. ಕನ್ನಡ ರಾಜ್ಯೋತ್ಸವದ ದಿನದಂದು ಮಾತ್ರ ಕನ್ನಡ-ಕನ್ನಡ ಎನ್ನದೇ, ಈ ಕನ್ನಡಾಭಿಮಾನವನ್ನು ವರ್ಷವಿಡೀ ಆಚರಿಸಿ ಕಾಪಾಡಬೇಕೆಂದರು. ದಾಸ ಶ್ರೇಷ್ಠ ಕನಕದಾಸರ ಕುರಿತು ಸಂಘದ ಸದಸ್ಯ ಸಿದ್ದಲಿಂಗಪ್ಪ ಮಾತನಾಡಿ, ಸಮಾಜದ ಅಂಕುಡೊಂಕುಗಳನ್ನು ತಿದ್ದಿಕೊಳ್ಳಲು ಕನಕದಾಸರಂತಹ ಮಹಾಪುರುಷರ ತತ್ವಾದರ್ಶಗಳನ್ನು ಅಳವಡಿಸಿಕೊಂಡು ಉತ್ತಮ ಪ್ರಜೆಗಳಾಗಿ ದೇಶಸೇವೆಯಲ್ಲಿ ತೊಡಗಬೇಕು. ದಾಸ ಸಾಹಿತ್ಯ ಪರಂಪರೆಯಲ್ಲಿ ಶ್ರೇಷ್ಠರಾಗಿದ್ದ ಕನಕದಾಸರು, ಜನರಿಗೆ ಮಾನವೀಯ ಮೌಲ್ಯಗಳನ್ನು ತೋರಿಸುವ ಮೂಲಕ ಜಗತ್ತಿಗೆ ದಾರಿ ದೀಪವಾದವರು ಎಂದರು. ಏಕತಾ ದಿವಸದ ಬಗ್ಗೆ ನಿವೃತ್ತ ಪ್ರಾಂಶುಪಾಲ ಶಿವಗಂಗಪ್ಪ ಮಾತನಾಡಿ ಸರ್ದಾರ್ ಪಟೇಲರ ನಿರ್ದಾಕ್ಷಿಣ್ಯ ಕ್ರಮಗಳಿಂದಾಗಿ ಏಕ ಭಾರತ ರೂಪುಗೊಳ್ಳಲು ಸಾಧ್ಯವಾಯಿತು ಎಂದರು. ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಕೆ. ಎಂ. ರಾಜಣ್ಣ ಸಂಘದ ವಾರ್ಷಿಕೋತ್ಸವ ಸಮಾರಂಭದ ರೂಪುರೇಷೆಗಳ ಬಗ್ಗೆ ತಿಳಿಸಿದರು. ರಾಜ್ಯೋತ್ಸವ ಪ್ರಯುಕ್ತ ಸಂಸ್ಕಾರ ಭಾರತಿ ತಿಪಟೂರು ಮಹಿಳಾ ಸದಸ್ಯರು ಕನ್ನಡ ಗೀತ ಗಾಯನ ಮತ್ತು ವಂದೇ ಮಾತರಂಗೆ ೧೫೦ ವರ್ಷ ತುಂಬಿದ ನೆನಪಿಗಾಗಿ ವಂದೇ ಮಾತರಂ ಗೀತೆ ಹಾಡಿದರು. ಕಾರ್ಯಕ್ರಮದಲ್ಲಿ ಪ್ರಧಾನ ಕಾರ್ಯದರ್ಶಿ ಪಿ.ಆರ್. ಗುರುಸ್ವಾಮಿ, ಸದಸ್ಯರಾದ ಕಾತ್ಯಾಯಿನಿ, ಬಸವರಾಜು, ಡಿ. ಎಸ್.ಮರುಳಪ್ಪ, ಚಂದ್ರರಾಜೇ ಅರಸು, ಮಂಜಪ್ಪ, ಎಂ.ಆರ್. ಸೋಮಶೇಖರ್, ಬಾಲ ಪ್ರತಿಭೆ ಕು. ಲೇಖನ ನೊಣವಿನಕೆರೆ ಮತ್ತಿತರರಿದ್ದರು.