ಕಾರ್ಕಳ: ಆತ್ಮನಿರ್ಭರ ಭಾರತ ಸಂಕಲ್ಪಅಭಿಯಾನ, ಕಾರ್ಯಾಗಾರ

| Published : Oct 10 2025, 01:02 AM IST

ಸಾರಾಂಶ

ಕಾರ್ಕಳ ಶಾಸಕರ ವಿಕಾಸ ಕಚೇರಿಯಲ್ಲಿ ಆತ್ಮ ನಿರ್ಭರ ಭಾರತ ಸಂಕಲ್ಪ ಅಭಿಯಾನ ಮತ್ತು ಕಾರ್ಯಾಗಾರ ನಡೆಯಿತು.

ಕಾರ್ಕಳ: ಆತ್ಮ ನಿರ್ಭರ ಭಾರತ ಸಂಕಲ್ಪ ಅಭಿಯಾನ ಮತ್ತು ಕಾರ್ಯಗಾರ ಕಾರ್ಕಳ ಶಾಸಕರ ವಿಕಾಸ ಕಚೇರಿಯಲ್ಲಿ ನಡೆಯಿತು. ಕ್ಷೇತ್ರಾಧ್ಯಕ್ಷ ನವೀನ್ ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಹಾಗೂ ಆತ್ಮನಿರ್ಭರ ಭಾರತದ ಅಭಿಯಾನದ ಜಿಲ್ಲಾ ವಕ್ತಾರ ಶ್ರೀಕಾಂತ್ ನಾಯಕ್ ಈ ಅಭಿಯಾನದ ಕಾರ್ಯಯೋಜನೆಗಳ ಮಾಹಿತಿ ನೀಡಿದರು.ಈ ಅಭಿಯಾನದ ಮಂಡಲ ಸಂಚಾಲಕ ಅನಂತಕೃಷ್ಣ ಶೆಣೈ ಸ್ವಾಗತಿಸಿದರು. ರವೀಂದ್ರ ಕುಮಾರ್ ಪ್ರಸ್ತಾವಿಕ ಮಾತುಗಳನ್ನಾಡಿ ಆತ್ಮ ನಿರ್ಭರ ಭಾರತ ಯೋಜನೆಯ ಉದ್ದೇಶ ಹಾಗೂ ಅದರ ಅಗತ್ಯತೆಯ ಬಗ್ಗೆ ವಿವರಿಸಿದರು. ಕಾರ್ಕಳ ಬಿಜೆಪಿ ಮಂಡಲಾಧ್ಯಕ್ಷ ನವೀನ್ ನಾಯಕ್ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ಬಂದರೂ ದೇಶ ಇನ್ನೂ ಸಂಪೂರ್ಣ ಸ್ವಾವಲಂಬಿಯಾಗಿಲ್ಲ, ನಾವೆಲ್ಲರೂ ಸ್ವದೇಶಿ ವಸ್ತುಗಳ ಬಳಕೆಗೆ ಒತ್ತು ನೀಡಬೇಕು, ನಮ್ಮ ಸ್ಥಳೀಯ ಕೈಗಾರಿಕೆ, ವ್ಯಾಪಾರ ಉದ್ಯಮಗಳಿಗೆ ನಾವು ಹೆಚ್ಚಿನ ಬೆಂಬಲ ನೀಡಬೇಕು ಹಾಗೂ ಈ ಬಗ್ಗೆ ಜನ ಸಾಮಾನ್ಯರಲ್ಲಿ ಅರಿವು ಮೂಡಿಸುವ ಕೆಲಸ ಮಾಡಬೇಕಾಗಿದೆ ಎಂದರು.

ವಿದೇಶಿ ವಸ್ತುಗಳ ಮೋಹ ಬಿಟ್ಟು ಸ್ವದೇಶೀ ವಸ್ತುಗಳ ಬಗ್ಗೆ ಆಸಕ್ತಿ ಹೆಚ್ಚಿಸಿಕೊಳ್ಳಬೇಕು. ಮುಂದೆ ಈ ಅಭಿಯಾನದಡಿಯಲ್ಲಿ ಕಾರ್ಕಳ ಕ್ಷೇತ್ರಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ನಮ್ಮ ಪ್ರಧಾನಿಯವರ ಆಶಯದಂತೆ ಆತ್ಮನಿರ್ಭರ ಭಾರತ ಸಂಕಲ್ಪ ಅಭಿಯಾನವನ್ನು ಯಶಸ್ವಿಗೊಳಿಸಲು ಕಾರ್ಕಳ ಬಿಜೆಪಿ ಸಕಲ ರೀತಿಯಲ್ಲಿ ಸಜ್ಜಾಗಿದೆ ಎಂದರು. ಕಾರ್ಯದರ್ಶಿ ಪ್ರವೀಣ್ ಸಾಲಿಯಾನ್ ಆತ್ಮನಿರ್ಭರ ಭಾರತ್ ಸಂಕಲ್ಪದ ಪ್ರತಿಜ್ಞಾ ವಿಧಿ ಭೋಧಿಸಿದರು, ಪ್ರಧಾನ ಕಾರ್ಯದರ್ಶಿ ಬೋಳ ಸತೀಶ್ ಪೂಜಾರಿ ವಂದಿಸಿದರು, ಕಾರ್ಯದರ್ಶಿ ಹರ್ಷವರ್ಧನ್ ನಿಟ್ಟೆ ನಿರೂಪಿಸಿದರು. ಕಾರ್ಯಾಗಾರದಲ್ಲಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ಜಯರಾಮ್ ಸಾಲಿಯಾನ್, ಮಾಲಿನಿ ಜೆ ಶೆಟ್ಟಿ, ಸುರೇಶ ಶೆಟ್ಟಿ ಶಿವಪುರ , ರಮೇಶ್ ಶೆಟ್ಟಿ ಶಿವಪುರ, ಮಂಡಲ ಪದಾಧಿಕಾರಿಗಳು, ವಿವಿಧ ಮಹಾ ಶಕ್ತಿ ಕೇಂದ್ರಗಳ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಶಕ್ತಿ ಕೇಂದ್ರಗಳ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ಮತ್ತು ವಿವಿಧ ಮೋರ್ಚಾಗಳ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಬೂತ್ ಪದಾಧಿಕಾರಿಗಳು ಉಪಸ್ಥಿತರಿದ್ದರು.