ಭಾರತದಲ್ಲಿ ಇರುವಷ್ಟು ಜಾತಿ, ಧರ್ಮ, ದೇವರುಗಳು ಇಡೀ ಪ್ರಪಂಚದ ಯಾವುದೇ ದೇಶದಲ್ಲಿಲ್ಲ. ಆದಾಗ್ಯೂ ದೇಶ ತನ್ನ ಸಂವಿಧಾನದಡಿ ಏಕತೆಯಿಂದ ಮುನ್ನಡೆಯುತ್ತಿದೆ ಎಂದು ಶಾಸಕ ಡಿ.ಜಿ.ಶಾಂತನಗೌಡ ಹೇಳಿದ್ದಾರೆ.
- ಮಡಿವಾಳ ಮಾಚಿದೇವ ಜಯಂತಿ ಕಾರ್ಯಕ್ರಮದಲ್ಲಿ ಶಾಸಕ ಡಿ.ಜಿ.ಶಾಂತನಗೌಡ
- - -ಕನ್ನಡಪ್ರಭ ವಾರ್ತೆ ಹೊನ್ನಾಳಿ
ಭಾರತದಲ್ಲಿ ಇರುವಷ್ಟು ಜಾತಿ, ಧರ್ಮ, ದೇವರುಗಳು ಇಡೀ ಪ್ರಪಂಚದ ಯಾವುದೇ ದೇಶದಲ್ಲಿಲ್ಲ. ಆದಾಗ್ಯೂ ದೇಶ ತನ್ನ ಸಂವಿಧಾನದಡಿ ಏಕತೆಯಿಂದ ಮುನ್ನಡೆಯುತ್ತಿದೆ ಎಂದು ಶಾಸಕ ಡಿ.ಜಿ.ಶಾಂತನಗೌಡ ಹೇಳಿದರು.ಭಾನುವಾರ ತಾಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿ ಮತ್ತು ಮಡಿವಾಳ ಸಮಾಜ ವತಿಯಿಂದ ಹಮ್ಮಿಕೊಂಡಿದ್ದ ಶ್ರೀ ಮಡಿವಾಳ ಮಾಚಿದೇವ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾಚಿದೇವರ ಭಾವಚಿತ್ರಕ್ಕೆ ಪುಪ್ಪಾರ್ಚನೆ ಮೂಲಕ ಗೌರವ ಸಮರ್ಪಿಸಿ ಅವರು ಮಾತನಾಡಿದರು.
ದೇಶದಲ್ಲಿಯೇ ನಮ್ಮ ಕರ್ನಾಟಕ ಎಲ್ಲ ವಿಚಾರಗಳಲ್ಲೂ ಸುರಕ್ಷಿತ ಮತ್ತು ಸಾಂಸ್ಕೃತಿಕ ಹಿರಿಮೆ ಹೊಂದಿದ ರಾಜ್ಯವಾಗಿದೆ. 12ನೇ ಶತಮಾನದಲ್ಲಿಯೇ ಬಸವಣ್ಣನವರು ಅನುಭವ ಮಂಟಪದ ಮೂಲಕ ಆಡಳಿತದ ಬಗ್ಗೆ ಪರಿಕಲ್ಪನೆಯನ್ನು ಸಮಾಜಕ್ಕೆ ನೀಡಿದ್ದಾರೆ. ಮಡಿವಾಳ ಸಮಾಜವೂ ಸೇರಿದಂತೆ ಯಾವುದೇ ಹಿಂದುಳಿದ ಸಮಾಜಗಳು ಸರ್ಕಾರದ ಶೈಕ್ಷಣಿಕ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು ಮುಂದೆ ಬರಬೇಕು. ರಾಜ್ಯ ಸರ್ಕಾರ ಕೂಡ ವಿಶೇಷ ಸೌಲಭ್ಯದ ವ್ಯವಸ್ಥೆಗಳನ್ನು ಎಲ್ಲ ಜಾತಿ ಜನಾಂಗದವರಿಗೆ ಕಲ್ಪಿಸಿದೆ ಎಂದರು.ಹಾವೇರಿಯಲ್ಲಿ ಫೆ.13ರಂದು ಕಾರ್ಯಕ್ರಮ:
ಫೆ.13ರಂದು ಹಾವೇರಿಯಲ್ಲಿ ಕಾಂಗ್ರೆಸ್ ಸರ್ಕಾರ ಜನತೆಗೆ ಸರ್ಕಾರದ ಸೌಲಭ್ಯಗಳನ್ನು ಮುಟ್ಟಿಸುವ ಬೃಹತ್ ಕಾರ್ಯಕ್ರಮ ಹಮ್ಮಿಕೊಂಡಿದೆ. ಸುಮಾರು 1.26 ಲಕ್ಷ ಜನರಿಗೆ ಹಕ್ಕುಪತ್ರ, ನಿವೇಶನ ಪಟ್ಟಾ ವಿತರಣೆಯಂತಹ ಕಾರ್ಯಕ್ರಮ ಹಮ್ಮಿಕೊಂಡಿದೆ. ಈ ಉದ್ದೇಶದಡಿ ಹೊನ್ನಾಳಿ ಕ್ಷೇತ್ರದಲ್ಲಿ ಹಕ್ಕುಪತ್ರದ 1268 ಪ್ರಕರಣಗಳು ಕಂದಾಯ ಇಲಾಖೆಯಿಂದ ಅನುಮೋದಿತವಾಗಿವೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿದ್ದ ಮಡಿವಾಳ ಸಮಾಜ ಅಧ್ಯಕ್ಷ ಎಂ.ಆರ್. ಮಹಾಂತೇಶ್ ಅವರು ತಮ್ಮ ಸಮಾಜದ ಚಟುವಟಿಕೆಗಳಿಗಾಗಿ ಒಂದು ನಿವೇಶನ ಮಂಜೂರು ಮಾಡಿಕೊಡಬೇಕೆಂದು ಶಾಸಕರಿಗೆ ಮನವಿ ಸಲ್ಲಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು ಮೊದಲು ಈ ಬಗ್ಗೆ ಅರ್ಜಿಯನ್ನು ಪುರಸಭೆಗೆ ಸಲ್ಲಿಸುವಂತೆ ಸಲಹೆ ನೀಡಿದರು.
ನಿವೃತ್ತ ಉಪನ್ಯಾಸಕ ಡಾ.ಚಂದ್ರಪ್ಪ ಅವರು ಮಡಿವಾಳ ಮಾಚಿದೇವರ ಜೀವನ ಮತ್ತು ಸಾಧನೆಗಳ ಕುರಿತು ಉಪನ್ಯಾಸ ನೀಡಿದರು. ಶಾಸಕರು ಸೇರಿದಂತೆ ಸಮಾಜದ ಪ್ರಮುಖರನ್ನು ಸನ್ಮಾನಿಸಲಾಯಿತು.ಶಿಕ್ಷಣ ಇಲಾಖೆ ಸಂಯೋಜಕ ಅರುಣ್ ಕುಮಾರ್ ಮಾತನಾಡಿದರು. ಸಮಾಜದ ಅನೇಕ ಮುಖಂಡರು, ಕಂದಾಯ ಇಲಾಖೆ ಶಿರಸ್ತೇದಾರ ಮಂಜುನಾಥ್, ರವಿಕುಮಾರ್, ಆಶೋಕ ಇತರರು ಇದ್ದರು.
- - -(ಕೋಟ್) ಹೊನ್ನಾಳಿ, ನ್ಯಾಮತಿ ತಾಲೂಕುಗಳಲ್ಲಿ ಒಟ್ಟು 26 ಹಾಸ್ಟೆಲ್‌ಗಳ ಪೈಕಿ 13 ಹಾಸ್ಟೆಲ್‌ಗಳು ಹಿಂದುಳಿದ ವರ್ಗಗಳಿಗೆ ಸೇರಿವೆ. ಜೊತೆಗೆ 7 ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಿವೆ. ಇಂತಹ ಸೌಲಭ್ಯಗಳನ್ನು ಬಳಸಿ ಶೈಕ್ಷಣಿಕವಾಗಿ ಮುಂದೆ ಬಂದರೆ ಸಮಾಜ ಅಭಿವೃದ್ಧಿ ತಾನಾಗಿಯೇ ಹೊಂದುತ್ತದೆ.
- ಡಿ.ಜಿ.ಶಾಂತನಗೌಡ, ಶಾಸಕ, ಹೊನ್ನಾಳಿ ಕ್ಷೇತ್ರ.- - -
-1ಎಚ್.ಎಲ್.ಐ1:ಹೊನ್ನಾಳಿ ತಾಲೂಕು ಕಚೇರಿ ಸಭಾಂಗಣದಲ್ಲಿ ಭಾನುವಾರ ಶ್ರೀ ಮಡಿವಾಳ ಮಾಚಿದೇವ ಜಯಂತಿ ಕಾರ್ಯಕ್ರಮದಲ್ಲಿ ಶಾಸಕ ಡಿ.ಜಿ.ಶಾಂತನಗೌಡ ಮಾತನಾಡಿದರು.