ಕೆಂಪೇಗೌಡ, ನಾಲ್ವಡಿಯವರ ಸಾಧನೆ, ದೂರದೃಷ್ಟಿ ಅಜರಾಮರ: ಸಚಿವ ಚಲುವರಾಯಸ್ವಾಮಿ

| Published : Jul 01 2024, 01:49 AM IST

ಕೆಂಪೇಗೌಡ, ನಾಲ್ವಡಿಯವರ ಸಾಧನೆ, ದೂರದೃಷ್ಟಿ ಅಜರಾಮರ: ಸಚಿವ ಚಲುವರಾಯಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ಬೆಂಗಳೂರು ವಿಶ್ವದಲ್ಲೇ ಅತ್ಯಂತ ಉತ್ತಮ ರಾಜಧಾನಿಯಾಗಿದೆ. ಕೆಂಪೇಗೌಡರು ನೀಡಿದ ಕೊಡುಗೆಯಿಂದ ಬೆಂಗಳೂರು ವಿಶ್ವದೆತ್ತರಕ್ಕೆ ಬೆಳೆದು ನಿಂತಿದೆ. ಬೆಂಗಳೂರನ್ನು ಸರ್ವಜನಾಂಗದ ಶಾಂತಿಯ ತೋಟವನ್ನಾಗಿಸಿದ್ದಾರೆ.

ಕನ್ನಡಪ್ರಭ ವಾರ್ತೆ ನಾಗಮಂಗಲ

ನಾಡಪ್ರಭು ಕೆಂಪೇಗೌಡರು ಹಾಗೂ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ತಮ್ಮ ಆಡಳಿತದಲ್ಲಿ ಮಾಡಿದ ಸಾಧನೆ ಮತ್ತು ದೂರದೃಷ್ಟಿಯನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.

ಪಟ್ಟಣದ ಪುರಸಭೆ ವಾಣಿಜ್ಯ ಸಂಕೀರ್ಣದ ಮುಂಭಾಗದಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಭಾನುವಾರ ಸಂಜೆ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡರ 515ನೇ ಜಯಂತ್ಯುತ್ಸವದಲ್ಲಿ ಮಾತನಾಡಿದರು.

ಮೈಸೂರು ನಿರ್ಮಾಣದ ಕೀರ್ತಿ ನಾಲ್ವಡಿ ಕೃಷ್ಣರಾಜ ಒಡೆಯರ್‌ಗೆ ಸಲ್ಲಿದರೆ, ಬೆಂಗಳೂರು ನಿರ್ಮಾಣದ ಕೀರ್ತಿ ಕೆಂಪೇಗೌಡರಿಗೆ ಸಲ್ಲುತ್ತದೆ. ಕೆಂಪೇಗೌಡರ ಅಂದಿನ ಕನಸು ಮತ್ತು ದೂರದೃಷ್ಟಿಯಿಂದಾಗಿ ಬೆಂಗಳೂರು ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುತ್ತಿದೆ ಎಂದರು.

ಕೆಂಪೇಗೌಡರು ಹಾಕಿಕೊಂಡಿದ್ದ ಅಡಿಪಾಯ, ಕೈಗೊಂಡಿದ್ದ ಯೋಜನೆಗಳಿಂದಾಗಿ ಎಲ್ಲ ವರ್ಗದ ಜನರಿಗೆ ಬಹಳಷ್ಟು ಅನುಕೂಲವಾಗುತ್ತಿದೆ. ಆಡಳಿತ ನಡೆಸುತ್ತಿರುವ ಸರ್ಕಾರಗಳೇನಾದರೂ ಜನಸಾಮಾನ್ಯರಿಗೆ ವಿವಿಧ ಸೌಲಭ್ಯ ಒದಗಿಸುವ ಜೊತೆಗೆ ಅಭಿವೃದ್ಧಿಪಡಿಸುವತ್ತ ಸಾಗುತ್ತಿದೆ ಎಂದರೆ ಅದಕ್ಕೆ ನಾಡಪ್ರಭು ಕೆಂಪೇಗೌಡರು ಹಾಗೂ ನಾಲ್ವಡಿ ಕೃಷ್ಣರಾಜ ಒಡೆಯರ್ ಕಾರಣೀಕರ್ತರೆಂಬುದನ್ನು ಮರೆಯಬಾರದು ಎಂದು ಹೇಳಿದರು.

ಆದಿಚುಂಚನಗಿರಿ ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ ಮಾತನಾಡಿ, ಬೆಂಗಳೂರು ವಿಶ್ವದಲ್ಲೇ ಅತ್ಯಂತ ಉತ್ತಮ ರಾಜಧಾನಿಯಾಗಿದೆ. ಕೆಂಪೇಗೌಡರು ನೀಡಿದ ಕೊಡುಗೆಯಿಂದ ಬೆಂಗಳೂರು ವಿಶ್ವದೆತ್ತರಕ್ಕೆ ಬೆಳೆದು ನಿಂತಿದೆ. ಬೆಂಗಳೂರನ್ನು ಸರ್ವಜನಾಂಗದ ಶಾಂತಿಯ ತೋಟವನ್ನಾಗಿಸಿದ್ದಾರೆ ಎಂದು ತಿಳಿಸಿದರು.

ಕೆಂಪೇಗೌಡರ ಜೀವನ ಚರಿತ್ರೆ ಕುರಿತು ಶಿಕ್ಷಕ ಹಾಗೂ ಸಾಹಿತಿ ತಿಮ್ಮರಾಯಿಗೌಡ ವಿಶೇಷ ಉಪನ್ಯಾಸ ನೀಡಿದರು. ತಹಸೀಲ್ದಾರ್ ಆರ್.ನಯೀಂಉನ್ನೀಸಾ ಪ್ರಾಸ್ತಾವಿಕ ನುಡಿ ನುಡಿದರು. ಇದಕ್ಕೂ ಮುನ್ನ ಪಟ್ಟಣದ ಶ್ರೀ ಸೌಮ್ಯಕೇಶವಸ್ವಾಮಿ ದೇವಸ್ಥಾನದ ಮುಂಭಾಗದಿಂದ ವಿವಿಧ ಜಾನಪದ ಕಲಾತಂಡಗಳು ಹಾಗೂ ಪೂರ್ಣಕುಂಭ ಸ್ವಾಗತದೊಂದಿಗೆ ಸರ್ವಾಲಂಕೃತ ನಾಡಪ್ರಭು ಕೆಂಪೇಗೌಡರ ಭಾವಚಿತ್ರವನ್ನು ಅದ್ದೂರಿಯಾಗಿ ಮೆರವಣಿಗೆ ನಡೆಸಲಾಯಿತು.

ಸಮಾರಂಭದಲ್ಲಿ ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಸಿ.ಎನ್.ಮಂಜುನಾಥ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಜೆ.ರಾಜೇಶ್, ರಾಜ್ಯ ಒಕ್ಕಲಿಗರ ಸಂಘದ ಮಾಜಿ ನಿರ್ದೇಶಕ ಎಚ್.ಟಿ.ಕೃಷ್ಣೇಗೌಡ, ಡಿವೈಎಸ್ಪಿ ಎ.ಆರ್.ಅಮಿತ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ರಾಜಮೂರ್ತಿ, ತಾಪಂ ಇಒ ಚಂದ್ರಮೌಳಿ, ಆರಕ್ಷಕ ವೃತ್ತ ನಿರೀಕ್ಷಕ ನಿರಂಜನ್, ಕ್ಷೇತ್ರ ಶಿಕ್ಷಣಾಧಿಕಾರಿ ಯೋಗೇಶ್, ಸಿಡಿಪಿಒ ಕೃಷ್ಣಮೂರ್ತಿ, ಟಿಎಪಿಸಿಎಂಎಸ್ ಅಧ್ಯಕ್ಷ ಹಾಲ್ತಿ ಗಿರೀಶ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಎನ್.ಕೆ.ವಸಂತಮಣಿ, ಮುಖಂಡರಾದ ಸುನಿಲ್‌ ಲಕ್ಷ್ಮೀಕಾಂತ್, ಆರ್.ಕೃಷ್ಣೇಗೌಡ, ಕೊಣನೂರು ಹನುಮಂತು, ಪುಟ್ಟಮ್ಮ ಮಾಯಣ್ಣಗೌಡ, ಗೀತಾ ದಾಸೇಗೌಡ, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ತಾಲೂಕು ಒಕ್ಕಲಿಗರ ಸಂಘದ ಪದಾಧಿಕಾರಿಗಳು ಸೇರಿ ನೂರಾರು ಮಂದಿ ಇದ್ದರು.