ಸಾರಾಂಶ
ಕನ್ನಡಪ್ರಭ ವಾರ್ತೆ ನಾಗಮಂಗಲ
ನಾಡಪ್ರಭು ಕೆಂಪೇಗೌಡರ ದೂರದೃಷ್ಟಿ, ಶ್ರಮ ಮತ್ತು ಪ್ರಾಮಾಣಿಕತೆಯಿಂದಾಗಿ ಬೆಂಗಳೂರು ನಗರ ಬಹು ಎತ್ತರಕ್ಕೆ ಬೆಳೆಯಲು ಸಾಧ್ಯವಾಯಿತು ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅಭಿಪ್ರಾಯಪಟ್ಟರು.ಪಟ್ಟಣದ ಶ್ರೀಸೌಮ್ಯಕೇಶವಸ್ವಾಮಿ ದೇವಾಲಯದ ಮುಂಭಾಗದಲ್ಲಿ ತಾಲೂಕು ರಾಷ್ಟ್ರಿಯ ಹಬ್ಬಗಳ ಆಚರಣಾ ಸಮಿತಿಯಿಂದ ಶುಕ್ರವಾರ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡರ 516ನೇ ಜಯಂತ್ಯುತ್ಸವದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬೆಂಗಳೂರು ನಿರ್ಮಾಣದ ಕೀರ್ತಿ ಕೆಂಪೇಗೌಡರಿಗೆ ಸಲ್ಲುತ್ತದೆ. ಕೆಂಪೇಗೌಡರ ಅಂದಿನ ಕನಸು ಮತ್ತು ದೂರದೃಷ್ಟಿಯಿಂದಾಗಿ ಬೆಂಗಳೂರು ಇಂದು ಅಂತಾರಾಷ್ಟ್ರಿಯ ಮಟ್ಟದಲ್ಲಿ ಗಮನ ಸೆಳೆಯುತ್ತಿದೆ. ಅವರು ಹಾಕಿಕೊಟ್ಟ ಅಡಿಪಾಯ, ಕೈಗೊಂಡ ಯೋಜನೆಗಳಿಂದಾಗಿ ಎಲ್ಲ ವರ್ಗದ ಜನರಿಗೆ ಬಹಳಷ್ಟು ಅನುಕೂಲವಾಗುತ್ತಿದೆ ಎಂದರು.ಆಡಳಿತ ನಡೆಸುತ್ತಿರುವ ಸರ್ಕಾರಗಳೇನಾದರೂ ಜನಸಾಮಾನ್ಯರಿಗೆ ವಿವಿಧ ಸೌಲಭ್ಯ ಒದಗಿಸುವ ಜೊತೆಗೆ ಅಭಿವೃದ್ಧಿ ಪಡಿಸುವತ್ತ ಸಾಗುತ್ತಿದೆ ಎಂದರೆ ಅದಕ್ಕೆ ನಾಡಪ್ರಭು ಕೆಂಪೇಗೌಡರು ಹಾಗೂ ನಾಲ್ವಡಿ ಕೃಷ್ಣರಾಜ ಒಡೆಯರ್ ಕಾರಣಕರ್ತರೆಂಬುದನ್ನು ಮರೆಯಬಾರದು ಎಂದರು.
ಭಾರತಕ್ಕೆ ತನ್ನದೇ ಆದ ಇತಿಹಾಸವಿದೆ. ನಾಡಪ್ರಭು ಕೆಂಪೇಗೌಡರಂತಹ ಮಹಿನೀಯರ ಜಯಂತ್ಯುತ್ಸವ ಆಚರಿಸುವುದರಿಂದ ಅವರ ಹೆಸರನ್ನು ಇತಿಹಾಸದಲ್ಲಿ ಶಾಶ್ವತವಾಗಿ ಉಳಿಸಬಹುದು. ಇಲ್ಲದಿದ್ದರೆ ಕ್ರಮೇಣ ಮರೆತುಹೋಗುತ್ತದೆ. ಕೆಂಪೇಗೌಡರನ್ನು ಶಾಶ್ವತವಾಗಿ ಸ್ಮರಿಸುವ ಸಲುವಾಗಿ ಕಾಂಗ್ರೆಸ್ ಸರ್ಕಾರ ನಾಡಪ್ರಭು ಕೆಂಪೇಗೌಡರಜಯಂತ್ಯುತ್ಸವ ಆಚರಣೆಗೆ ತಂದು ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರವನ್ನು ಅಸ್ತಿತ್ವಕ್ಕೆ ತರುವ ಜೊತೆಗೆ ಬೆಂಗಳೂರಿನ ಅಂತಾರಾಷ್ಟ್ರಿಯ ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರಿಡಲಾಗಿದೆ ಎಂದರು.
ತಾಲೂಕಿನ ಮೈಲಾರಪಟ್ಟಣ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಎಂ.ಎನ್.ಮಂಜುನಾಥ್ ಪ್ರಧಾನ ಭಾಷಣ ಮಾಡಿ, ವಿಜಯನಗರ ಸಾಮ್ರಾಜ್ಯದಲ್ಲಿ ಏಕೈಕ ಪ್ರಾಮಾಣಿಕ ಪಾಳೇಗಾರರಾಗಿದ್ದ ನಾಡಪ್ರಭು ಕೆಂಪೇಗೌಡರು ಜನಿಸಿ 516ವರ್ಷ ಕಳೆದರೂ ಚಿರಸ್ಥಾಯಿಯಾಗಿ ಉಳಿದಿದ್ದಾರೆಂದರೆ ಅವರ ದೂರದೃಷ್ಟಿ ಮತ್ತು ಸಾಧನೆ ಎಷ್ಟಿರಬಹುದೆಂಬುದನ್ನು ಪ್ರತಿಯೊಬ್ಬರೂ ಅರ್ಥೈಸಿಕೊಳ್ಳಬೇಕು ಎಂದರು.ಇದೇ ವೇಳೆ ನಾಡಪ್ರಭು ಕೆಂಪೇಗೌಡರ ಕುರಿತು ಆಯೋಜಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಐದು ಮಂದಿ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಕೊಟ್ಟು ಗೌರವಿಸಲಾಯಿತು. ಪಟ್ಟಣದ ಟಿ.ಬಿ.ಬಡಾವಣೆಯ ಸುಭಾಷ್ ನಗರದ ನಿವಾಸಿಗಳಿಗೆ ಹಕ್ಕುಪತ್ರ ವಿತರಿಸಲಾಯಿತು.
ಇದಕ್ಕೂ ಮುನ್ನ ನಾಡಪ್ರಭು ಕೆಂಪೇಗೌಡರ ಭಾವಚಿತ್ರವನ್ನು ಅಲಂಕರಿಸಿದ ತೆರೆದ ವಾಹನದಲ್ಲಿರಿಸಿ ಪೂರ್ಣಕುಂಭ ಹಾಗೂ ಜಾನಪದ ಕಲಾತಂಡಗಳೊಂದಿಗೆ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಲಾಯಿತು.ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷ ಅಲಿ ಅನ್ಸರ್ ಪಾಷ, ಉಪಾಧ್ಯಕ್ಷೆ ವಸಂತಲಕ್ಷ್ಮಿ ಅಶೋಕ್, ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ್, ಬೆಳ್ಳೂರು ಪಪಂ ಅಧ್ಯಕ್ಷೆ ಲಕ್ಷ್ಮಮ್ಮ, ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಮೂಡ್ಲೀಗೌಡ, ಡಿವೈಎಸ್‌ಪಿ ಬಿ.ಚಲುವರಾಜು, ತಹಸೀಲ್ದಾರ್ ಜಿ.ಆದರ್ಶ, ತಾಪಂ ಇಒ ಸತೀಶ್, ಬಿಇಒ ಕೆ.ಯೋಗೇಶ್,
ಪುರಸಭೆ ಮುಖ್ಯಾಧಿಕಾರಿ ಶ್ರೀನಿವಾಸ್, ಸಿಡಿಪಿಒ ಕೃಷ್ಣಮೂರ್ತಿ, ಟಿಎಚ್‌ಒ ಡಾ.ನಾರಾಯಣ, ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಸಿ.ಎನ್.ಮಂಜುನಾಥ್, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜೆ.ವೈ.ಮಂಜುನಾಥ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಜೆ.ರಾಜೇಶ್, ಚಲುವರಾಯಸ್ವಾಮಿ ಪುತ್ರ ಸಚ್ಚೀನ್, ಮುಖಂಡರಾದ ಸುನಿಲ್ ಲಕ್ಷ್ಮೀಕಾಂತೇಗೌಡ, ಎಚ್.ಟಿ.ಕೃಷ್ಣೇಗೌಡ, ತಿಮ್ಮರಾಯಿಗೌಡ, ಆರ್.ಕೃಷ್ಣೇಗೌಡ, ಬಿ.ರಾಜೇಗೌಡ ಸೇರಿದಂತೆ ಹಲವರು ಇದ್ದರು.