ಸಾರಾಂಶ
ರೈತರು ಕೃಷಿ ಚಟುವಟಿಕೆ ಜತೆಗೆ ತಾವು ಎದುರಿಸುತ್ತಿರುವ ಸವಾಲು ಹಾಗೂ ನೋವು-ನಲಿವುಗಳನ್ನು ನಗರ ಪ್ರದೇಶಗಳ ಜನರಿಗೆ ತಿಳಿಯುವಂತೆ ಮಾಡಬೇಕು. ಕೃಷಿ ಪ್ರವಾಸೋದ್ಯಮ ಉತ್ತೇಜನಕ್ಕೆ ರೈತರೇ ಕ್ರಮ ವಹಿಸಬೇಕು.
ಕೊಪ್ಪಳ:
ರೈತರು ಕೃಷಿ ಚಟುವಟಿಕೆ ಜತೆಗೆ ತಾವು ಎದುರಿಸುತ್ತಿರುವ ಸವಾಲು ಹಾಗೂ ನೋವು-ನಲಿವುಗಳನ್ನು ನಗರ ಪ್ರದೇಶಗಳ ಜನರಿಗೆ ತಿಳಿಯುವಂತೆ ಮಾಡಬೇಕು. ಕೃಷಿ ಪ್ರವಾಸೋದ್ಯಮ ಉತ್ತೇಜನಕ್ಕೆ ರೈತರೇ ಕ್ರಮ ವಹಿಸಬೇಕು ಎಂದು ಮಾಗಡಿ ಸಮೀಪದ ಚಿಗುರು ಇಕೋ ಸ್ಪೇಸ್ ಸಂಸ್ಥಾಪಕ ನಿರ್ದೇಶಕ ಶ್ರೀವತ್ಸ ಹೇಳಿದರು.ತಾಲೂಕಿನ ಆಚಾರ ತಿಮ್ಮಾಪುರದಲ್ಲಿರುವ ರೈತ ಶ್ರೀಪಾದ ಮುರಡಿ ಅವರ ಶ್ರೀ ಫಾರ್ಮ್‌ನಲ್ಲಿ ಕೊಪ್ಪಳ ಸಾವಯವ ಕೃಷಿಕರ ಬಳಗದ ವತಿಯಿಂದ ನಡೆದ ‘ಮಣ್ಣಿನೊಂದಿಗೆ ಮಾತುಕತೆ’ ಕಾರ್ಯಕ್ರಮದ 25ನೇ ಆವೃತ್ತಿಯಲ್ಲಿ ಕೃಷಿ ಪ್ರವಾಸೋದ್ಯಮದ ಆಯಾಮಗಳು ಕುರಿತು ಮಾತನಾಡಿದ ಅವರು, ಪ್ರಸ್ತುತ ದಿನಗಳಲ್ಲಿ ಕೃಷಿ ಕವಲು ದಾರಿಯಲ್ಲಿದೆ. ನಾವು ಮಾರುಕಟ್ಟೆ ಬಗ್ಗೆ ಮಾತ್ರ ನೋಡದೇ ಕೃಷಿ ಕ್ಷೇತ್ರದ ಉಳಿವಿನ ಬಗ್ಗೆಯೂ ಜಾಗೃತಿ ವಹಿಸಬೇಕಿದೆ ಎಂದರು.
ದೇಸಿ ಬೀಜಗಳ ಸಂರಕ್ಷಕ ಶಂಕರಿ ಲಂಗಟಿ ಮಾತನಾಡಿ, ದೇಶಿ ಬೀಜಗಳು ನಶಿಸಿ ಹೋಗುತ್ತಿದ್ದು, ಇವುಗಳನ್ನು ಉಳಿಸಿಕೊಳ್ಳಲು ಎಲ್ಲರೂ ಶ್ರಮವಹಿಸಬೇಕಿದೆ. ದೇಶಿ ಬೀಜಗಳು ಮತ್ತೆ ಸಿಗಲಾರದ ಸಂಪತ್ತು ಆಗಿವೆ. ಕೀಟ ನಿರ್ವಹಣೆ, ಉತ್ತಮ ಆರೋಗ್ಯ ಮತ್ತು ರೋಗ ನಿರೋಧಕ ಶಕ್ತಿಗೆ ಪೂರಕವಾಗಿವೆ. ಬೀಜಗಳ ರಕ್ಷಣೆ ಜತೆಗೆ ಸ್ವಯಂ ಮಾರುಕಟ್ಟೆಗೂ ಆದ್ಯತೆ ಕೊಡಬೇಕಿದೆ ಎಂದು ಸಲಹೆ ನೀಡಿದರು.ಇದೇ ವೇಳೆ ದೇಸಿ ತಳಿ ಸಂರಕ್ಷಕ ಹಂಚಾಳಪ್ಪ ಸ್ಮರಣಾರ್ಥ ಸ್ಥಾಪಿಸಲಾದ ಜವಾರಿ ಬೀಜ ಬ್ಯಾಂಕ್ ಉದ್ಘಾಟನೆ, ಮಾತುಕತೆ ಆತಿಥೇಯ ರೈತರ ಪರಿಚಯ ಕೈಪಿಡಿ, ಕೃಷಿ ವಿಜ್ಞಾನಿ ಬದರಿಪ್ರಸಾದ್ ಪಿ.ಆರ್. ಅವರ ಕೃಷಿಕನ ಕಾಶ್ಮೀರ ಕೃತಿ ಬಿಡುಗಡೆ, ಸಾವಯವ ಗೊಬ್ಬರ ತಯಾರಿಕೆ ಪ್ರಾತ್ಯಕ್ಷಿಕೆ ಮತ್ತು ಸೌರಶಕ್ತಿ, ಜಲ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸಲಾಯಿತು.
ಕೃಷಿಕರ ಬಳಗದ ಪ್ರಮುಖರಾದ ಆನಂದತೀರ್ಥ ಪ್ಯಾಟಿ, ಶ್ರೀಪಾದ ಮುರಡಿ, ಬದರಿಪ್ರಸಾದ್, ಶಂಕರರೆಡ್ಡಿ, ಉದಯ ರಾಯರಡ್ಡಿ, ಮಲ್ಲಪ್ಪ ಕುಂಬಾರ, ದೇವರಾಜ ಮೇಟಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.