ಅಜೀಜಅಹ್ಮದ ಬಳಗಾನೂರ
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿದೇಶದ ಹೆಮ್ಮೆಯ ತ್ರಿವರ್ಣ ಧ್ವಜ ತಯಾರಿಕೆಯಲ್ಲಿ ಮಹತ್ವದ ಪಾತ್ರ ವಹಿಸುವ ಖಾದಿ ಕ್ಷೇತ್ರವೇ ಇಂದು ಸರ್ಕಾರದ ಪ್ರೋತ್ಸಾಹಧನಕ್ಕಾಗಿ ಕಾದು ಸುಸ್ತಾಗಿದೆ. ರಾಜ್ಯ ಸರ್ಕಾರದಿಂದ ಬಿಡುಗಡೆಯಾಗಬೇಕಿರುವ ₹150 ಕೋಟಿಗೂ ಅಧಿಕ ಪ್ರೋತ್ಸಾಹಧನ ಬಾಕಿ ಉಳಿದಿರುವ ಪರಿಣಾಮ ಧಾರವಾಡ, ಬೆಳಗಾವಿ, ಬಾಗಲಕೋಟೆ, ಕೋಲಾರ ಸೇರಿದಂತೆ ರಾಜ್ಯದ 176 ಖಾದಿ ಉತ್ಪಾದನಾ ಕೇಂದ್ರಗಳು ಹಾಗೂ ಅವುಗಳನ್ನು ಅವಲಂಬಿಸಿರುವ 25 ಸಾವಿರಕ್ಕೂ ಹೆಚ್ಚು ನೇಕಾರರು ಮತ್ತು ಕಾರ್ಮಿಕರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ.
ಖಾದಿ ಉತ್ಪಾದಕರಿಗೆ ನೀಡಲಾಗುವ ಪ್ರೋತ್ಸಾಹಧನ ಕೇವಲ ಸಂಸ್ಥೆಗಳ ಆರ್ಥಿಕ ನೆರವಲ್ಲ. ನೂಲು ನೂಲುವವರು, ನೇಕಾರರು, ಕಂಡಿ ಸುತ್ತುವವರು, ಇತರ ಸಹಾಯಕರು ಸೇರಿದಂತೆ ಖಾದಿ ಉತ್ಪಾದನೆಯ ವಿವಿಧ ಹಂತಗಳಲ್ಲಿ ದುಡಿಯುವ ಸಾವಿರಾರು ಕಸುಬುದಾರರ ಆದಾಯಕ್ಕೂ ಇದು ಆಧಾರವಾಗಿದೆ. ಸರ್ಕಾರದಿಂದ ಸಮಯಕ್ಕೆ ಸರಿಯಾಗಿ ಹಣ ಬಿಡುಗಡೆ ಆಗದಿರುವುದು ಇಡೀ ಸರಪಳಿಯನ್ನೇ ಬಾಧಿಸುತ್ತಿದೆ.₹70 ಕೋಟಿಗೂ ಅಧಿಕ ಎಂಡಿಎ ಬಾಕಿ?:
ಖಾದಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮಾರುಕಟ್ಟೆ ಅಭಿವೃದ್ಧಿ ಸಹಾಯಧನ (ಎಂಡಿಎ) ರೂಪದಲ್ಲೇ ₹70 ಕೋಟಿಗೂ ಅಧಿಕ ಮೊತ್ತ ಬಾಕಿ ಉಳಿದಿದೆ. ಇದಕ್ಕೆ ಬಾಕಿ ಮೊತ್ತವೂ ಸೇರ್ಪಡೆಯಾಗಿ ಒಟ್ಟು ₹150 ಕೋಟಿಗೂ ಅಧಿಕ ಪ್ರೋತ್ಸಾಹಧನ ಬಾಕಿ ಉಳಿದಿದೆ. ಸರ್ಕಾರ ನಿಗದಿಪಡಿಸುವ ಉತ್ಪಾದನಾ ಗುರಿಯೊಳಗೆ ಖಾದಿ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿವೆ. ಆದರೆ, ಉತ್ಪಾದನೆ ಪೂರ್ಣಗೊಳಿಸಿದ ಬಳಿಕವೂ ಅದಕ್ಕೆ ಸಂಬಂಧಿಸಿದ ಪ್ರೋತ್ಸಾಹಧನ ಸಕಾಲದಲ್ಲಿ ಕೈ ಸೇರುತ್ತಿಲ್ಲ. ಬಿಡುಗಡೆಯಾಗುವ ಸೀಮಿತ ಅನುದಾನವನ್ನು ಹಲವು ಸಂಸ್ಥೆಗಳಿಗೆ ಹಂಚಿಕೆ ಮಾಡಬೇಕಾದ ಪರಿಸ್ಥಿತಿಯಿಂದ ಬಾಕಿ ಮೊತ್ತ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ.
ಬದುಕಿಗೂ ಬರೆ:
ಪ್ರೋತ್ಸಾಹಧನದ ವಿಳಂಬದಿಂದ ಖಾದಿ ಸಂಸ್ಥೆಗಳಿಗೆ ಕಚ್ಚಾ ವಸ್ತು ಖರೀದಿ, ಕಾರ್ಮಿಕರ ವೇತನ, ಉತ್ಪಾದನಾ ವೆಚ್ಚ ಹಾಗೂ ಮಾರುಕಟ್ಟೆ ನಿರ್ವಹಣೆ ಸೇರಿದಂತೆ ಹಲವು ಹಂತಗಳಲ್ಲಿ ಹಣಕಾಸಿನ ಒತ್ತಡ ಎದುರಾಗಿದೆ. ಇದರ ನೇರ ಪರಿಣಾಮ ನೇಕಾರರು ಮತ್ತು ಇತರ ಕಸುಬುದಾರರ ಆದಾಯದ ಮೇಲೂ ಬೀರುತ್ತಿದೆ.ಖಾದಿ ಕ್ಷೇತ್ರ ಗ್ರಾಮೀಣ ಉದ್ಯೋಗದ ಪ್ರಮುಖ ಆಧಾರವಾಗಿದ್ದು, ಒಂದು ಉತ್ಪಾದನಾ ಕೇಂದ್ರದ ಚಟುವಟಿಕೆ ಕುಂಠಿತವಾದರೂ ಅದರೊಂದಿಗೆ ಸಂಪರ್ಕ ಹೊಂದಿರುವ ಹಲವು ಕುಟುಂಬಗಳ ಜೀವನೋಪಾಯಕ್ಕೆ ಹೊಡೆತ ಬೀಳುತ್ತದೆ. ಹೀಗಾಗಿ ಬಾಕಿ ಹಣ ಬಿಡುಗಡೆ ಕೇವಲ ಖಾದಿ ಸಂಸ್ಥೆಗಳ ಬೇಡಿಕೆಯಲ್ಲ, 25 ಸಾವಿರಕ್ಕೂ ಅಧಿಕ ಕಾರ್ಮಿಕ ಕುಟುಂಬಗಳ ಬದುಕಿನ ಪ್ರಶ್ನೆಯಾಗಿದೆ.
ಬಾಕ್ಸ್...ಧ್ವಜ ತಯಾರಿಸುವ ಕೈಗಳಿಗೆ ಸಂಕಷ್ಟ
ಹುಬ್ಬಳ್ಳಿಯ ಬೆಂಗೇರಿ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘವು ದೇಶದ ಪ್ರಮುಖ ರಾಷ್ಟ್ರಧ್ವಜ ತಯಾರಿಕಾ ಕೇಂದ್ರಗಳಲ್ಲಿ ಒಂದಾಗಿದೆ. ಇಲ್ಲಿನ ಮಹಿಳಾ ಕಾರ್ಮಿಕರು ತಯಾರಿಸುವ ಖಾದಿ ರಾಷ್ಟ್ರಧ್ವಜಗಳು ಸಂಸತ್ ಭವನ, ರಾಷ್ಟ್ರಪತಿ ಭವನ ಹಾಗೂ ವಿದೇಶಗಳಲ್ಲಿರುವ ಭಾರತೀಯ ರಾಯಭಾರಿ ಕಚೇರಿಗಳಲ್ಲಿಯೂ ಬಳಕೆಯಾಗುತ್ತವೆ. ಆದರೆ, ರಾಷ್ಟ್ರಧ್ವಜ ತಯಾರಿಸುವ ಇದೇ ಕ್ಷೇತ್ರ ಇಂದು ಹಣಕಾಸಿನ ಕೊರತೆಯಿಂದ ಸಂಕಷ್ಟದಲ್ಲಿದೆ. ಈ ಮಧ್ಯೆ ಪಾಲಿಸ್ಟರ್ ಸೇರಿದಂತೆ ಖಾದಿಯೇತರ ಧ್ವಜಗಳ ಬಳಕೆಗೆ ಅವಕಾಶ ದೊರೆತಿರುವುದರಿಂದ ಖಾದಿ ಧ್ವಜಗಳ ಮಾರಾಟಕ್ಕೂ ಹೊಡೆತ ಬಿದ್ದಿದೆ.----ಕೋಟ್...ಸ್ಪಂದನೆ ಸಿಕ್ಕಿಲ್ಲ
ಬಾಕಿ ಉಳಿದ ಸಹಾಯಧನ, ಪ್ರೋತ್ಸಾಹಧನ ಬಿಡುಗಡೆಗೊಳಿಸಲು ಸರ್ಕಾರಕ್ಕೆ ಹಲವು ಬಾರಿ ಪತ್ರ ಬರೆಯಲಾಗಿದೆ. ಈವರೆಗೆ ಸ್ಪಂದನೆ ದೊರೆತಿಲ್ಲ. ಶೀಘ್ರದಲ್ಲೇ ಮತ್ತೊಮ್ಮೆ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಸಮಸ್ಯೆ ಕುರಿತು ಮನವರಿಕೆ ಮಾಡಲಾಗುವುದು.- ಶಿವಾನಂದ ಮಠಪತಿ, ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘದ ಕಾರ್ಯದರ್ಶಿ.