ನಗರಸಭೆ ವ್ಯಾಪ್ತಿಯಲ್ಲಿ 8 ಸಾವಿರ ಜನ ಸಂಖ್ಯೆಗೆ ತಲಾ ಒಂದು ಸಂಘ ।
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುನಗರ ಸಭೆ ವ್ಯಾಪ್ತಿಯಲ್ಲಿ ಸುಮಾರು 15 ಭಾರತ್ ಜೋಡೋ ಯುವಕ ಸಂಘ ಸ್ಥಾಪಿಸಲಾಗುವುದು ಎಂದು ನಗರ ಸಭೆ ಆಯುಕ್ತ ಬಿ.ಸಿ.ಬಸವರಾಜ್ ತಿಳಿಸಿದರು.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿಕಾರಿಗಳೊಂದಿಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಡೆಸಿದ ಸಭೆಯಲ್ಲಿ ಭಾರತ್ ಜೋಡೋ ಯುವಕ ಸಂಘ ರಚಿಸುವಂತೆ ಸೂಚಿಸಿದ್ದಾರೆ. ನಗರ ಸಭೆ ವ್ಯಾಪ್ತಿಯಲ್ಲಿ 8 ಸಾವಿರ ಜನ ಸಂಖ್ಯೆಗೆ ತಲಾ ಒಂದು ಸಂಘ ರಚಿಸಬೇಕಿದೆ. ಪರಿಶಿಷ್ಟ ಜಾತಿ, ಪಂಗಡ ಯುವಕರಿಗೆ ಸಂಘದಲ್ಲಿ ಆದ್ಯತೆ ನೀಡಬೇಕು. ಅದರಂತೆ ಚಿಕ್ಕಮಗಳೂರು ನಗರಸಭೆ ವ್ಯಾಪ್ತಿಯಲ್ಲೂ 16 ರಿಂದ 35 ವರ್ಷದೊಳಗಿನ 10 ಜನರ ಯುವಕ-ಯುವತಿಯರ ಸಂಘ ಸ್ಥಾಪಿಸಲಾಗುತ್ತದೆ ಎಂದರು,ಸಂಘ ನೋಂದಣಿ ಮಾಡಿಕೊಂಡು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಿದರೆ ಸರ್ಕಾರದಿಂದ ನೀಡಲಾಗುವ ₹೧೦ ಲಕ್ಷ ಅನುದಾನ ನೀಡಲಾ ಗುತ್ತದೆ. ಈ ಅನುದಾನದಲ್ಲಿ ಯುವಜನತೆ ಉದ್ಯೋಗ ಸೃಷ್ಟಿ ಮಾಡಿಕೊಳ್ಳಬಹುದು ಎಂದು ಮಾಹಿತಿ ನೀಡಿದರು.
---ಬಾಕ್ಸ್---
ಎಸ್‌ಐಆರ್ ಮುಗಿದ ಬಳಿಕ ಕಂದಾಯ ವಸೂಲಿ ಚುರುಕು
ನಗರ ಸಭೆ ಅಧಿಕಾರಿ ಸಿಬ್ಬಂದಿ ಎಸ್‌ಐಆರ್ ಸೇರಿದಂತೆ ಬೇರೆ ಬೇರೆ ಸರ್ಕಾರಿ ಕೆಲಸದಲ್ಲಿ ತೊಡಗಿಸಿಕೊಂಡಿರುವ ಹಿನ್ನೆಲೆಯಲ್ಲಿ ನಿಗದಿತ ಪ್ರಮಾಣದಲ್ಲಿ ಕಂದಾಯ ವಸೂಲಿ ಆಗಿಲ್ಲ. ಆ.18ಕ್ಕೆ ಎಸ್‌ಐಆರ್ ಪ್ರಕ್ರಿಯೆ ಪೂರ್ಣಗೊಳ್ಳುತ್ತಿದಂತೆ ಕಂದಾಯ ವಸೂಲಿ ಕಾರ್ಯಕ್ಕೆ ಚುರುಕು ನೀಡಲಾಗುವುದು. ಈಗಾಗಲೇ ತಂಡ ರಚನೆ ಕಾರ್ಯ ಆಗಿದೆ. ದರ ಜೊತೆಗೆ ಸಾರ್ವಜನಿಕರೇ ಮುಂದೆ ಬಂದು ನೀರು ಮತ್ತು ಆಸ್ತಿ ತೆರಿಗೆ ಪಾವತಿಸಲು ಮುಂದಾಗಬೇಕು. ಒಂದು ವೇಳೆ ಯಾರಾದರೂ ಕಂದಾಯ ಪಾವತಿ ಮಾಡದೆ ಇದ್ದಲ್ಲಿ ಅವರ ಮನೆಗಳಿಗೆ ನೀಡಿರುವ ಮೂಲ ಸೌಕರ್ಯಗಳನ್ನು ಸ್ಥಗಿತಗೊಳಿಸಲಾಗುವುದು. ಜೊತೆಗೆ ಜಪ್ತಿಯಂಥ ಕ್ರಮ ಕೈಗೊಳ್ಳಲು ಅವಕಾಶವಿದೆ ಎಂದು ಆಯುಕ್ತ ಬಸವರಾಜ್ ಎಚ್ಚರಿಕೆ ನೀಡಿದ್ದಾರೆ.