ಮಕ್ಕಳಿಗೆ ವಿದ್ಯೆ ಜತೆಗೆ ವಿನಯ ಬಹಳ ಮುಖ್ಯ

| Published : Aug 02 2024, 12:56 AM IST

ಸಾರಾಂಶ

ಖಾಸಗಿ ಶಾಲೆಗಳನ್ನು ಮೀರಿಸುವಂತಹ ಸಾಧನೆ ಮಾಡಿದ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳ ಸಾಧನೆ ಅನನ್ಯವಾದದು

ಶಿರಹಟ್ಟಿ: ಮಕ್ಕಳಿಗೆ ವಿದ್ಯೆ ಜತೆಗೆ ವಿನಯ ಬಹಳ ಮುಖ್ಯ. ಶಿಕ್ಷಣದ ಜತೆಗೆ ಸಂಸ್ಕಾರ ಅಗತ್ಯವಾಗಿದ್ದು, ನೀತಿವಂತರಾಗಿ ಬದುಕನ್ನು ರೂಪಿಸಿಕೊಳ್ಳಬೇಕೆಂದು ಶಾಸಕ ಡಾ.ಚಂದ್ರು ಲಮಾಣಿ ಹೇಳಿದರು.

ಅವರು ಪಟ್ಟಣದ ಸಿ.ಸಿ. ನೂರಶೆಟ್ಟರ ಸರ್ಕಾರಿ ಪ್ರೌಢಶಾಲೆಯಲ್ಲಿ ಗುರುವಾರ ತಮ್ಮ ಜನ್ಮದಿನದ ನಿಮಿತ್ತ ಶಾಲಾ ಮಕ್ಕಳಿಗೆ ನೋಟಬುಕ್ ಹಾಗೂ ಪೆನ್ ವಿತರಣೆ ಮಾಡಿ ಮಾತನಾಡಿದರು.

ಕಡಿಮೆ ಅಂಕಗಳು ಬಂದರೆ ಅನಗತ್ಯವಾಗಿ ಆತಂಕಕ್ಕೆ ಒಳಗಾಗಬಾರದು. ಒತ್ತಡ ಮತ್ತು ತೊಂದರೆ ತಗೆದುಕೊಳ್ಳಬಾರದು. ಆಸಕ್ತಿಗನುಗುಣವಾಗಿ ಅಭ್ಯಸಿಸುವದು ಸೂಕ್ತ, ಶಿಕ್ಷಕರು ಮಾಡುವ ಮಾರ್ಗದರ್ಶನದೊಂದಿಗೆ ಮುನ್ನೆಡೆಯಿರಿ. ರಾಜ್ಯ ಹಾಗೂ ಕೇಂದ್ರ ಸರ್ಕಾರ ಮಕ್ಕಳ ಶೈಕ್ಷಣಿಕ ಗುಣಮಟ್ಟಕ್ಕಾಗಿ ಹಲವಾರು ಯೋಜನೆಗಳ ಮೂಲಕ ಸಾಕಷ್ಟು ರು.ಗಳನ್ನು ವ್ಯಯ ಮಾಡುತ್ತಿದೆ. ಅದರ ಸದುಪಯೋಗ ಪಡೆದುಕೊಳ್ಳಬೇಕು. ಖಾಸಗಿ ಶಾಲೆಗಳನ್ನು ಮೀರಿಸುವಂತಹ ಸಾಧನೆ ಮಾಡಿದ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳ ಸಾಧನೆ ಅನನ್ಯವಾದದು ಎಂದರು.

ಎಸ್‌ಡಿಎಂಸಿ ಅಧ್ಯಕ್ಷ ನಾಗರಾಜ ಲಕ್ಕುಂಡಿ ಮಾತನಾಡಿ, ಜನ್ಮದಿನಗಳಿಗೆ ವೃಥಾ ಹಣ ವ್ಯಯ ಮಾಡದೇ ಸಾಮಾಜಿಕ ಕಾರ್ಯಗಳನ್ನು ಮಾಡುವದರ ಮೂಲಕ ಜನ್ಮದಿನ ಆಚರಣೆ ಮಾಡಿದರೆ ಒಳಿತು. ಆ ನಿಟ್ಟಿನಲ್ಲಿ ಮಕ್ಕಳಿಗೆ ನೋಟಬುಕ್ ಹಾಗೂ ಪೆನ್ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮಕ್ಕಳು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ತಿಳಿಸಿದರು.

ಶಿರಹಟ್ಟಿ ಮೀಸಲು ಮತಕ್ಷೇತ್ರ ತೀವ್ರವಾಗಿ ಹಿಂದುಳಿದಿದ್ದು, ಅದರ ಸಮಗ್ರ ಅಭಿವೃದ್ಧಿಗೆ ಶಾಸಕರು ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದಾರೆ. ಮುಖ್ಯವಾಗಿ ವಿಧಾನಸಭೆಯಲ್ಲಿ ನಮ್ಮ ಜ್ವಲಂತ ಸಮಸ್ಯೆಗಳ ಬಗ್ಗೆ ಸರ್ಕಾರ ಗಮನಕ್ಕೆ ತಂದು ಸಭಾಧ್ಯಕ್ಷರ ಗಮನ ಸೆಳೆಯುತ್ತಿದ್ದು, ಸಂತೋಷಕರ ಸಂಗತಿ ಎಂದರು.

ಆಸ್ಪತ್ರೆಯಲ್ಲಿ ಹಾಲು ಹಣ್ಣು ವಿತರಣೆ:

ಪಟ್ಟಣದ ತಾಲೂಕು ಆರೋಗ್ಯ ಕೇಂದ್ರದಲ್ಲಿ ಶಾಸಕ ಡಾ.ಚಂದ್ರು ಲಮಾಣಿ ಜನ್ಮ ದಿನದಂಗವಾಗಿ ರೋಗಿಗಳಿಗೆ ಹಾಲು ಹಣ್ಣು ವಿತರಣೆ ಮಾಡಲಾಯಿತು.

ನಗರ ಮಹಿಳಾ ಮೋರ್ಚಾದ ಅಧ್ಯಕ್ಷೆ ನಂದಾ ಪಲ್ಲೇದ, ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಫಕೀರೇಶ ರಟ್ಟಿಹಳ್ಳಿ, ಮುಖಂಡರಾದ ಜಾನು ಲಮಾಣಿ, ಅಕ್ಬರ ಯಾದಗಿರಿ, ಗೂಳಪ್ಪ ಕರಿಗಾರ, ಬಸವರಾಜ ತುಳಿ, ಮಹೇಶ ಕಲ್ಲಪ್ಪನವರ, ಎಚ್.ಎಂ.ದೇವಗಿರಿ, ತಿಪ್ಪಣ್ಣ ಲಮಾಣಿ, ಸಂದೇಶ ಗಾಣಿಗೇರ, ಶಾಲೆಯ ಮುಖ್ಯ ಶಿಕ್ಷಕ ಗಣೇಶ ಈರಕ್ಕನವರ ಮತ್ತಿತರರು ಇದ್ದರು.