ಇತ್ತಿಚೆಗೆ ಶಿಕ್ಷಣವಂತರೆ ಮೌಢ್ಯಕ್ಕೆ ಬಲಿಯಾಗುತ್ತಿದ್ದಾರೆ. ಮಕ್ಕಳು ವಿಜ್ಞಾನ ಮತ್ತು ತಂತ್ರಜ್ಞಾನದ ಬಗ್ಗೆ ತಿಳಿದುಕೊಳ್ಳಬೇಕು. ಪವಾಡ ನಂಬದೆ ಅದರ ಹಿಂದಿನ ವೈಜ್ಞಾನಿಕ ಸತ್ಯ ಅರಿತುಕೊಳ್ಳಿ

ಕುಕನೂರು: ತಾಲೂಕಿನ ಭಾನಾಪುರ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಮಹಿಳಾ ಧ್ವನಿ ಸಂಸ್ಥೆ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ, ಶಾಲೆಯ ಸೃಷ್ಠಿ ಇಕೋ ಕ್ಲಬ್ ವತಿಯಿಂದ ಪವಾಡಗಳ ರಹಸ್ಯ ಬಯಲು ಮತ್ತು ವಿಜ್ಞಾನ ರಸ ಪ್ರಶ್ನೆ ಕಾರ್ಯಕ್ರಮ ಜರುಗಿತು.

ಪವಾಡಗಳ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ನೀರಿನಿಂದ ಜ್ಯೋತಿ ಬೆಳಗಿಸಿ ಮತ್ತು ಸಸಿ ಹಚ್ಚುವ ಮೂಲಕ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾಧ್ಯಕ್ಷ ಸೋಮಶೇಖರ ಹರ್ತಿ ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಇತ್ತಿಚೆಗೆ ಶಿಕ್ಷಣವಂತರೆ ಮೌಢ್ಯಕ್ಕೆ ಬಲಿಯಾಗುತ್ತಿದ್ದಾರೆ. ಮಕ್ಕಳು ವಿಜ್ಞಾನ ಮತ್ತು ತಂತ್ರಜ್ಞಾನದ ಬಗ್ಗೆ ತಿಳಿದುಕೊಳ್ಳಬೇಕು. ಪವಾಡ ನಂಬದೆ ಅದರ ಹಿಂದಿನ ವೈಜ್ಞಾನಿಕ ಸತ್ಯ ಅರಿತುಕೊಳ್ಳಿ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮುಖ್ಯ ಶಿಕ್ಷಕ ನಾಗಪ್ಪ ಅಗಸಿಮುಂದಿನ ಮಾತನಾಡಿ, ಆಚರಣೆ ಮತ್ತು ಸಂಪ್ರದಾಯಗಳಲ್ಲಿ ಮೌಢ್ಯತೆ ಬೆರೆತು ಗೊಂದಲದ ವಾತಾವರಣ ಸೃಷ್ಠಿಸಿ ಜನರ ದಿಕ್ಕು ತಪ್ಪಿಸುವ ಕಾರ್ಯವಾಗುತ್ತಿದೆ. ವಿದ್ಯಾರ್ಥಿಗಳು ಪವಾಡಗಳ ಹಿಂದಿನ ಕೈ ಚಳಕ ಮತ್ತು ರಹಸ್ಯ ತಿಳಿದುಕೊಂಡು ಮೌಢ್ಯಾಚರಣೆಗಳಿಂದ ಮುಕ್ತರಾಗಿ ಎಂದರು.

ಸಂಪನ್ಮೂಲ ವ್ಯಕ್ತಿಗಳಾದ ಅಂಬರೀಶ ಕಮ್ಮಾರ, ರಘುನಾಥ ಸಂಗಳದ ವಿಜ್ಞಾನ ರಸಪ್ರಶ್ನೆ ಮತ್ತು ಪವಾಡಗಳ ರಹಸ್ಯ ಬಯಲು ಕಾರ್ಯಕ್ರಮಗಳನ್ನು ಪ್ರಾಯೋಗಿಕವಾಗಿ ಪ್ರಾತ್ಯಕ್ಷಿಕೆ ಮೂಲಕ ಮಕ್ಕಳಲ್ಲಿ ವಿಜ್ಞಾನ ಅರಿವು ಮೂಡಿಸಿದರು. ಬಿ.ಎನ್. ಹೊರಪೇಟಿ, ಮಹಿಳಾ ಧ್ವನಿ ಸಂಸ್ಥೆಯ ಸಂಸ್ಥಾಪಕಿ ಪ್ರಿಯದರ್ಶಿನಿ ಮುಂಡರಗಿಮಠ, ಎಸ್ ಡಿ ಎಂಸಿ ಹಾಗೂ ರಥ ಶಿಲ್ಪಿಡಾ. ಯಲ್ಲಪ್ಪ ಬಡಿಗೇರ, ವಿಜ್ಞಾನ ಶಿಕ್ಷಕಿ ಲಕ್ಷ್ಮೀ ತಮ್ಮನಗೌಡರ, ಉದಯಕುಮಾರ ತಳವಾರ, ದೈಶಿ ಸಂಘದ ಅಧ್ಯಕ್ಷ ಶಿವಾನಂದ ಹೊಸಮನಿ, ಶಿಕ್ಷಕರಾದ ವೀಣಾ ಕುಲಕರ್ಣಿ, ಕಾಶಿ ವಿಶ್ವನಾಥ, ಶಿದ್ಲಿಂಗೇಶ ಹಾಗೂ ಶಾಲಾ ಸಿಬ್ಬಂದಿಗಳು ಮತ್ತು ಪ್ರಶಿಕ್ಷಣಾರ್ಥಿಗಳು ವಿದ್ಯಾರ್ಥಿಗಳಿದ್ದರು.