ಪತ್ರಿಕೆಯನ್ನು ಕೊಂಡು ಓದುವ ಮೂಲಕ ಪತ್ರಿಕೆಯನ್ನು ಉಳಿಸುವ ಗುರುತರವಾದ ಜವಾಬ್ದಾರಿ ಸಾರ್ವಜನಿಕರ ಮೇಲಿದೆ.
ಹೊನ್ನಾವರದಲ್ಲಿ ಪತ್ರಕರ್ತರ ಸಂಘದ ಕ್ಯಾಲೆಂಡರ್ ಬಿಡುಗಡೆ
ಕನ್ನಡಪ್ರಭ ವಾರ್ತೆ ಹೊನ್ನಾವರಪತ್ರಿಕೆಯನ್ನು ಕೊಂಡು ಓದುವ ಮೂಲಕ ಪತ್ರಿಕೆಯನ್ನು ಉಳಿಸುವ ಗುರುತರವಾದ ಜವಾಬ್ದಾರಿ ಸಾರ್ವಜನಿಕರ ಮೇಲಿದೆ ಎಂದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ನರಸಿಂಹ ಅಡಿ ಹೇಳಿದರು.
ಪಟ್ಟಣದ ಸೋಶಿಯಲ್ ಕ್ಲಬ್ ಆವರಣದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ೨೦೨೬ನೇ ಸಾಲಿನ ಕ್ಯಾಲೆಂಡರ್ ಬಿಡುಗಡೆ ಹಾಗೂ ನೇತ್ರ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.ಸಮಾಜದ ಅಂಕು-ಡೊಂಕು ಬರೆಯುವ ಪತ್ರಕರ್ತರ ಸ್ಥಿತಿಯನ್ನು ಸಾರ್ವಜನಿಕರು ಅರಿತುಕೊಳ್ಳಬೇಕು. ಪತ್ರಿಕೆಯಲ್ಲಿ ಸುದ್ದಿ ಬಿತ್ತರವಾದಾಗ ಸಮಾಜ ಅದನ್ನು ಬೆಂಬಲಿಸುವ ಕಾರ್ಯವಾಗಬೇಕು ಎಂದರು.
ತಹಸೀಲ್ದಾರ್ ಪ್ರವೀಣ ಕರಾಂಡೆ ಕ್ಯಾಲೆಂಡರ್ ಬಿಡುಗಡೆಗೊಳಿಸಿದರು. ಪಪಂ ಮುಖ್ಯಾಧಿಕಾರಿ ಏಸು ಸುಬ್ಬಣ್ಣ ಬೆಂಗಳೂರು ಮಾತನಾಡಿ, ಇತ್ತೀಚಿನ ದಿನದಲ್ಲಿ ನಾವೆಲ್ಲರೂ ಮೊಬೈಲ್ ದಾಸರಾಗಿ ಪತ್ರಿಕೆ ಓದುವುದರಿಂದ ದೂರವಾಗುತ್ತಿದ್ದೇವೆ ಎಂದರು.ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯ ವಿಠ್ಠಲದಾಸ ಕಾಮತ್ ಮಾತನಾಡಿ, ಆರೋಗ್ಯದ ಕಡೆ ಪ್ರತಿಯೊಬ್ಬರೂ ವಿಶೇಷ ಕಾಳಜಿ ವಹಿಸಬೇಕಿದ್ದು, ಆ ನಿಟ್ಟಿನಲ್ಲಿ ಸಂಘಟನೆಯು ಮುನ್ನಡೆಯುತ್ತಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಉಪಾಧ್ಯಕ್ಷ ಮಾರುತಿ ನಾಯ್ಕ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ವರ್ಷವಿಡೀ ಹಲವು ಸಮಾಜಮುಖಿ ಕಾರ್ಯಕ್ರಮ ಆಯೋಜಿಸಲು ನಿರ್ಧರಿಸಲಾಗಿದೆ ಎಂದರು.ಅಧ್ಯಕ್ಷತೆ ವಹಿಸಿದ್ದ ತಾಲೂಕು ಸಂಘದ ಅಧ್ಯಕ್ಷ ವಿನಾಯಕ ಮೇಸ್ತ ಮಾತನಾಡಿ, ಪತ್ರಕರ್ತರಿಗೆ ಅನಾರೋಗ್ಯ ಸಮಸ್ಯೆ ಆದಾಗ ಸಂಘದಿಂದ ನೆರವಾಗಲು ಕ್ಷೇಮನಿಧಿ ಆರಂಭಿಸಲಾಗಿದೆ ಎಂದರು. ಜಿಲ್ಲಾ ಸಂಘದ ಸದಸ್ಯ ಸತೀಶ ತಾಂಡೇಲ ಉಪಸ್ಥಿತರಿದ್ದರು. ಸಂಘದ ಉಪಾಧ್ಯಕ್ಷ ದಿನೇಶ ಹೆಗಡೆ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ನಾಗರಾಜ ನಾಯ್ಕ ವಂದಿಸಿದರು. ಕಾರ್ಯದರ್ಶಿ ಪ್ರಸಾದ ಹೆಗಡೆ ಕಾರ್ಯಕ್ರಮ ನಿರ್ವಹಿಸಿದರು.
ಮಧ್ಯಾಹ್ನ ಕುಮಟಾದ ನಮಸ್ಕಾರ ಸಮಾಜ ಸೇವಾ ಸಂಸ್ಥೆ ಮತ್ತು ಬೆಳಕು ನೇತ್ರಾಲಯದ ಸಹಯೋಗದಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ ನಡೆಯಿತು.