ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ಸಾಮಾಜಿಕ ಕಳಕಳಿಯೊಂದಿಗೆ ಕೊಡಗಿನ ಸಾಹಿತ್ಯ ಕ್ಷೇತ್ರಕ್ಕೆ ಗಮನಾರ್ಹ ಕೊಡುಗೆ ನೀಡುತ್ತಿರುವ ಕೊಡವ ಮಕ್ಕಡ ಕೂಟ ಸಂಘಟನೆ ನ.24ರಂದು ದಾಖಲೆಯ 100ನೇ ಪುಸ್ತಕ ಲೋಕಾರ್ಪಣೆ ಮಾಡುತ್ತಿದೆ ಎಂದು ಕೂಟದ ಪ್ರಧಾನ ಕಾರ್ಯದರ್ಶಿ ಹಾಗೂ ‘100ನೇ ಮೊಟ್ಟ್’ ಪುಸ್ತಕದ ಸಂಪಾದಕ ಪುತ್ತರೀರ ಕರುಣ್ ಕಾಳಯ್ಯ ತಿಳಿಸಿದ್ದಾರೆ.ಪತ್ರಿಕಾ ಪ್ರಕಟಣೆ ನೀಡಿರುವ ಅವರು ‘100ನೇ ಮೊಟ್ಟ್’ ಪುಸ್ತಕದೊಂದಿಗೆ ಕೊಡವ ಮಕ್ಕಡ ಕೂಟದ 101ನೇ ಪುಸ್ತಕ ಬರಹಗಾರ್ತಿ ತೆನ್ನೀರ ಟೀನಾ ಚಂಗಪ್ಪ ಬರದಿರುವ ‘ಮನಸ್‌ರ ಮರೆಲ್’, 102ನೇ ಪುಸ್ತಕ ಪೇರಿಯಂಡ ಯಶೋಧ ರಚಿಸಿರುವ ‘ಮನಸ್‌ರ ಜರಿ’, 103ನೇ ಕರವಂಡ ಸೀಮಾ ಗಣಪತಿ ಬರೆದಿರುವ ‘ಮನಸ್‌ರ ತಕ್ಕ್’ ಹಾಗೂ 104ನೇ ಪುಸ್ತಕವಾಗಿ ಐಚಂಡ ರಶ್ಮಿ ಮೇದಪ್ಪ ರಚಿಸಿರುವ ಕೊಡವಡ ನಮ್ಮೆನಾಳ್ (ನಾಟಕ ರೂಪತ್‌ಲ್) ಕೂಡ ಬಿಡುಗಡೆಯಾಗಲಿದೆ ಎಂದು ತಿಳಿಸಿದ್ದಾರೆ.
‘100ನೇ ಮೊಟ್ಟ್’ ಕೊಡವ ಮಕ್ಕಡ ಕೂಟದ ಮಹತ್ವಾಕಾಂಕ್ಷೆಯ ಪುಸ್ತಕವಾಗಿದ್ದು, ಕೊಡವ, ಕನ್ನಡ ಮತ್ತು ಇಂಗ್ಲೀಷ್ ಭಾಷೆಯಲ್ಲಿ 45 ಕ್ಕೂ ಹೆಚ್ಚು ಲೇಖನಗಳಿವೆ. ಕೊಡಗಿನ ಸಂಸ್ಕೃತಿ, ಆಚಾರ, ವಿಚಾರ, ಸಂಪ್ರದಾಯ, ದೇವನೆಲೆ, ಐನ್‌ಮನೆ, ಮಂದ್, ಪ್ರಕೃತಿ, ಕೊಡವ ಪದ್ಧತಿ ಸೇರಿದಂತೆ ಅನೇಕ ವಿಚಾರಗಳು ಒಳಗೊಂಡಿವೆ. ಕಥೆ, ಕವನ ಮತ್ತು ಹಾಸ್ಯ ಬರಹಗಳು ಕೂಡ ಇವೆ. ಹಿರಿಯ ಸಾಹಿತಿ ಬಾಚರಣಿಯಂಡ ಅಪ್ಪಣ್ಣ, ರಾಣು ಅಪ್ಪಣ್ಣ, ನಾಗೇಶ್ ಕಾಲೂರು, ಹಿರಿಯ ಪತ್ರಕರ್ತ ಬಿ.ಸಿ.ದಿನೇಶ್ ಸೇರಿದಂತೆ ಅನೇಕ ಹಿರಿಯ ಹಾಗೂ ಕಿರಿಯ ಬರಹಗಾರರ ರಚನೆಗಳು ‘100ನೇ ಮೊಟ್ಟ್’ ಪುಸ್ತಕದಲ್ಲಿ ಅಡಕವಾಗಿದೆ.ಕೊಡಗಿನ ಇತಿಹಾಸದಲ್ಲೇ ಸಂಘಟನೆಯೊಂದು ಒಬ್ಬರದ್ದೇ ಅಧ್ಯಕ್ಷತೆಯಲ್ಲಿ 100 ಪುಸ್ತಕಗಳನ್ನು ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆಯಾಗಿ ನೀಡಿರುವುದು ಇದೇ ಮೊದಲಾಗಿದೆ. ಬೊಳ್ಳಜಿರ ಬಿ.ಅಯ್ಯಪ್ಪ ಅವರ ಅಧ್ಯಕ್ಷತೆಯ ‘ಕೊಡವ ಮಕ್ಕಡ ಕೂಟ’ ಸಂಘಟನೆ ಯಾವುದೇ ಸರ್ಕಾರಿ ಅನುದಾನವನ್ನು ಅವಲಂಬಿಸದೆ ಸ್ವಾವಲಂಬಿಯಾಗಿ ಪುಸ್ತಕಗಳನ್ನು ಬಿಡುಗಡೆ ಮಾಡಿ ಬರಹಗಾರರಿಗೆ ಪ್ರೋತ್ಸಾಹ ನೀಡುತ್ತಿದೆ. ಉತ್ಸಾಹಿ ಬರಹಗಾರರ ಸಾಹಿತ್ಯ ಕ್ಷೇತ್ರದ ಆಸಕ್ತಿಗೆ ಮತ್ತಷ್ಟು ಸ್ಫೂರ್ತಿ ತುಂಬಲು ಕೂಟ ಸಾಹಿತ್ಯಪರ ಕಾರ್ಯಕ್ರಮಗಳನ್ನು ಇನ್ನು ಮುಂದೆಯೂ ಹಮ್ಮಿಕೊಳ್ಳಲಿದೆ ಎಂದು ಕರುಣ್ ಕಾಳಯ್ಯ ತಿಳಿಸಿದ್ದಾರೆ.
24ರಂದು ಬಿಡುಗಡೆ:ಭಾನುವಾರ ಬೆಳಗ್ಗೆ 10.3ಕ್ಕೆ ನಗರದ ಪತ್ರಿಕಾ ಭವನದಲ್ಲಿ ಬೊಳ್ಳಜಿರ ಬಿ.ಅಯ್ಯಪ್ಪ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭವನ್ನು ಹಿರಿಯ ಸಾಹಿತಿ ಬಾಚರಣಿಯಂಡ ಅಪ್ಪಣ್ಣ ಉದ್ಘಾಟಿಸಿ ‘100ನೇ ಮೊಟ್ಟ್’ ಪುಸ್ತಕ ಬಿಡುಗಡೆ ಮಾಡಲಿದ್ದಾರೆ.
ಸಮಾಜ ಸೇವಕಿ ಹಾಗೂ ಸಾಮಾಜಿಕ ಉದ್ಯಮಿ ಕುಪ್ಪಂಡ ಛಾಯಾ ನಂಜಪ್ಪ, ಅತಿಥಿಗಳಾಗಿ ಬರಹಗಾರರಾದ ತೆನ್ನೀರ ಟೀನಾ ಚಂಗಪ್ಪ, ಪೇರಿಯಂಡ ಯಶೋಧ, ಕರವಂಡ ಸೀಮಾ ಗಣಪತಿ ಹಾಗೂ ಐಚಂಡ ರಶ್ಮಿ ಮೇದಪ್ಪ ಪಾಲ್ಗೊಳ್ಳಲಿದ್ದಾರೆ ಎಂದು ಕರುಣ್ ಕಾಳಯ್ಯ ಮಾಹಿತಿ ನೀಡಿದ್ದಾರೆ.