ನಾಳೆ ಕೆ.ಆರ್.ಪೇಟೆ ಪುರಸಭೆ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ: ಕಾಂಗ್ರೆಸ್‌ನಿಂದ ವ್ಹಿಪ್ ಜಾರಿ

| Published : Sep 01 2024, 01:58 AM IST

ನಾಳೆ ಕೆ.ಆರ್.ಪೇಟೆ ಪುರಸಭೆ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ: ಕಾಂಗ್ರೆಸ್‌ನಿಂದ ವ್ಹಿಪ್ ಜಾರಿ
Share this Article
  • FB
  • TW
  • Linkdin
  • Email

ಸಾರಾಂಶ

ಕೆ.ಆರ್.ಪೇಟೆ ಪುರಸಭೆ ಅಧ್ಯಕ್ಷ ಸ್ಥಾನದ ಚುನಾವಣೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದ್ದು, ಸೆ.2ರಂದು ಉಪಾಧ್ಯಕ್ಷ ಸ್ಥಾನದ ಚುನಾವಣೆ ನಿಗಧಿಯಂತೆ ನಡೆಯಲಿದೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಪುರಸಭೆ ಅಧ್ಯಕ್ಷ ಸ್ಥಾನದ ಚುನಾವಣೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದ್ದು, ಸೆ.2ರಂದು ಉಪಾಧ್ಯಕ್ಷ ಸ್ಥಾನದ ಚುನಾವಣೆ ನಿಗಧಿಯಂತೆ ನಡೆಯಲಿದೆ.

ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಮಹಿಳೆಗೆ ನಿಗಧಿಯಾಗಿದೆ. ಪುರಸಭೆಯಲ್ಲಿ ಜೆಡಿಎಸ್ 3, ಜೆಡಿಎಸ್‌ನಿಂದ ಗೆದ್ದು ಮಾಜಿ ಸಚಿವ ಕೆ.ಸಿ.ನಾರಾಯಣಗೌಡರ ಬಣಕ್ಕೆ ಸೇರಿದ 8, ಕಾಂಗ್ರೆಸ್‌ನಿಂದ 10, ಬಿಜೆಪಿ ಹಾಗೂ ಪಕ್ಷೇತರ ತಲಾ ಒರ್ವ ಸದಸ್ಯ ಸೇರಿ 23 ಮಂದಿ ಚುನಾಯಿತ ಸದಸ್ಯರಿದ್ದಾರೆ.

ಕಾಂಗ್ರೆಸ್ ಸದಸ್ಯ ಕೆ.ಸಿ.ಮಂಜುನಾಥ್ ಅಧ್ಯಕ್ಷ ಸ್ಥಾನಕ್ಕೆ ಪ್ರಬಲ ಆಕಾಂಕ್ಷಿಯಾಗಿದ್ದು, ಸಾಮಾನ್ಯ ಮಹಿಳೆಗೆ ಮೀಸಲಾಗಿರುವುದನ್ನು ಪ್ರಶ್ನಿಸಿ ರಾಜ್ಯ ಹೈಕೋರ್ಟ್ ಮೊರೆ ಹೋಗಿದ್ದರು. ಕೆ.ಸಿ.ಮಂಜುನಾಥ್ ಅರ್ಜಿಯನ್ನು ಪುರಸ್ಕರಿಸಿರುವ ರಾಜ್ಯ ಹೈಕೋರ್ಟ್ ಸೆ.2ರಂದು ನಡೆಯಬೇಕಿದ್ದ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಗೆ ತಡೆಯಾಜ್ಞೆ ನೀಡಿದೆ. ಉಪಾಧ್ಯಕ್ಷರ ಆಯ್ಕೆ ಅಭಾದಿತವಾಗಿ ನಡೆಯಲಿದೆ.

ಕಾಂಗ್ರೆಸ್‌ನಿಂದ ವಿಪ್ ಜಾರಿ:

ಉಪಾಧ್ಯಕ್ಷರ ಸ್ಥಾನಕ್ಕೆ ಕಾಂಗ್ರೆಸ್‌ನ ಸೌಭಾಗ್ಯ ಉಮೇಶ್ ಸ್ಪರ್ಧಿಸುತ್ತಿದ್ದು, ಇವರಿಗೆ ಬೆಂಬಲ ಸೂಚಿಸುವಂತೆ ಕಾಂಗ್ರೆಸ್ ಸದಸ್ಯರಿಗೆ ವ್ಹಿಪ್ ಜಾರಿಗೊಳಿಸಲಾಗಿದೆ.

ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್ ಮಾತನಾಡಿ, ಸೌಭಾಗ್ಯ ಪರ ಮತ ಚಲಾಯಿಸುವಂತೆ ಸೂಚಿಸಿ ಪಕ್ಷದ ಎಲ್ಲಾ 10 ಜನ ಸದಸ್ಯರಿಗೂ ವ್ಹಿಪ್ ಜಾರಿಗೊಳಿಸುತ್ತಿರುವುದಾಗಿ ತಿಳಿಸಿದರು.

ನಂತರ ಮುಖಂಡರ ಜೊತೆಗೂಡಿ 10 ಸದಸ್ಯರ ಮನೆಗಳಿಗೂ ಸಚೇತಕ ಆದೇಶ ಪ್ರತಿ(ವ್ಹಿಪ್)ಯನ್ನು ನೀಡಿದರು. ಅಭ್ಯರ್ಥಿಗಳು ಮನೆಯಲ್ಲಿ ಇಲ್ಲದ ಕಡೆ ಮನೆ ಬಾಗಿಲಿಗೆ ವ್ಹಿಪ್ ಆದೇಶದ ಪ್ರತಿ ಅಂಟಿಸಿದರು.

ಈ ವೇಳೆ ಕೆಪಿಸಿಸಿ ಸದಸ್ಯ ಕಿಕ್ಕೇರಿ ಸುರೇಶ್, ತಾಲೂಕು ಉಸ್ತುವಾರಿ ಚಿನಕುರಳಿ ರಮೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹರಳಹಳ್ಳಿ ವಿಶ್ವನಾಥ್, ಬಿ.ನಾಗೇಂದ್ರ ಕುಮಾರ್, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಟಿ.ಎನ್.ದಿವಾಕರ್, ಮುಖಂಡರಾದ ಚೇತನ ಮಹೇಶ್, ಲಕ್ಷ್ಮೀಪುರ ಚಂದ್ರೇಗೌಡ, ಇಲಿಯಾಸ್ ಅಹಮದ್ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಇದ್ದರು.