ಸಾರಾಂಶ
ಪ್ರಪಂಚದಾದ್ಯಂತ ಎಲ್ಲಾ ದೇಶಗಳಲ್ಲೂ, ಎಲ್ಲಾ ಸಂದರ್ಭಗಳಲ್ಲೂ ಮನುಷ್ಯರು ಗೋಡಂಬಿ ಉಪಯೋಗಿಸುತ್ತಾರೆ.
ಕನ್ನಡಪ್ರಭ ವಾರ್ತೆ ಮೈಸೂರು
ಗೋಡಂಬಿ ಬೆಳೆ ಮತ್ತು ವ್ಯಾಪಾರೋದ್ಯಮದಿಂದ ಎಂದಿಗೂ ನಷ್ಟ ಸಂಭವಿಸುವುದಿಲ್ಲ ಎಂದು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ. ನಾರಾಯಣಗೌಡ ತಿಳಿಸಿದರು.ನಗರದ ಕೃಷ್ಣಮೂರ್ತಿಪುರಂನ ಹೋಟೆಲ್ ಮಾಲೀಕರ ಸಂಘದ ಕುತ್ತೆತ್ತೂರು ಸೀತಾರಾಮ ಭವನದಲ್ಲಿ ಬುಧವಾರ ಏರ್ಪಡಿಸಿದ್ದ ಗೋಡಂಬಿ ಪ್ರಚಾರ ಮತ್ತು ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಪಂಚದಾದ್ಯಂತ ಎಲ್ಲಾ ದೇಶಗಳಲ್ಲೂ, ಎಲ್ಲಾ ಸಂದರ್ಭಗಳಲ್ಲೂ ಮನುಷ್ಯರು ಗೋಡಂಬಿ ಉಪಯೋಗಿಸುತ್ತಾರೆ. ಆದ್ದರಿಂದ ಗೋಡಂಬಿಗೆ ತುಂಬಾ ಬೇಡಿಕೆ ಇದೆ. ಸಿಹಿತಿನಿಸು ಅಂಗಡಿಗಳು, ಹೋಟೆಲ್, ರೆಸ್ಟೋರೆಂಟ್, ಬೇಕರಿ ಇತ್ಯಾದಿ ಕಡೆಗಳಲ್ಲಿ ಗೋಡಂಬಿ ಬಳಕೆ ಸರ್ವೇಸಾಮಾನ್ಯವಾಗಿದೆ. ಸಿಹಿ ಮತ್ತು ಖಾರ ತಿನಿಸುಗಳು, ವಿವಿಧ ಪಾನೀಯಗಳಲ್ಲೂ ಗೋಡಂಬಿಯನ್ನು ಬಳಸಲಾಗುತ್ತದೆ. ಪ್ರತಿ ಮನೆಯಲ್ಲೂ ವಿಶೇಷ ಸಂದರ್ಭಗಳಲ್ಲಿ ಗೋಡಂಬಿ ಉಪಯೋಗಿಸುತ್ತಾರೆ ಎಂದರು.ಹೊಡೆದು ಪುಡಿಯಾದ ಗೋಡಂಬಿಯೂ ಕೂಡ ಗುಣಮಟ್ಟ ಮತ್ತು ಪೌಷ್ಟಿಕತೆ ಹೊಂದಿರುತ್ತದೆ. ಹಾಗಾಗಿ ಇಂತಹ ಗೋಡಂಬಿಯನ್ನು ವಿವಿಧ ಆಹಾರ, ತಿನಿಸುಗಳ ತಯಾರಿಕೆಗೆ ಬಳಸಿಕೊಳ್ಳಬಹುದು. ಗೋಡಂಬಿ ಎಂದಿಗೂ ವ್ಯರ್ಥವಾಗದೆ, ಎಲ್ಲಾ ಹಂತದಲ್ಲೂ ಉಪಯೋಗಕ್ಕೆ ಬರುತ್ತದೆ ಎಂದರು.
ಗೋಡಂಬಿ ಪೋಷಕಾಂಶಯುಕ್ತ ಆಹಾರವಾಗಿದ್ದು, ಎಲ್ಲಾ ಋತುಗಳಲ್ಲೂ ಮಾರುಕಟ್ಟೆಯ ಮೌಲ್ಯವನ್ನು ಉಳಿಸಿಕೊಂಡು ಆದಾಯ ತಂದುಕೊಡುತ್ತದೆ. ಬೀದಿ ಬದಿ ವ್ಯಾಪಾರಿಗಳಿಂದ ಐಶಾರಾಮಿ ಹೋಟೆಲ್ ಗಳವರೆಗೂ ಜನರಿಗೆ ವಿವಿಧ ಬೆಲೆಗಳಲ್ಲಿ ದೊರೆಯುತ್ತದೆ ಎಂದು ಅವರು ತಿಳಿಸಿದರು.ಕರ್ನಾಟಕ ಗೋಡಂಬಿ ಉತ್ಪಾದಕರ ಸಂಘದ ಅಧ್ಯಕ್ಷ ಎಸ್. ಅನಂತಕೃಷ್ಣ ರಾವ್ ಮಾತನಾಡಿ, ದೇಶದಲ್ಲಿ ಗೋಡಂಬಿಗೆ ಬೇಡಿಕೆ ಇದ್ದರೂ, ಗೇರು ಬೀಜದ ಕೊರತೆ ಕಾಡುತ್ತಿದೆ. ಗೋಡಂಬಿ ಬೆಳೆಗೆ ಹೆಚ್ಚಿನ ಪ್ರೋತ್ಸಾಾಹ ದೊರೆತರೆ ಲಕ್ಷಾಂತರ ಜನರಿಗೆ ಉದ್ಯೋಗ ಲಭ್ಯವಾಗುತ್ತದೆ ಎಂದರು.
ಸಂಘದ ಉಪಾಧ್ಯಕ್ಷ ತುಕಾರಾಮ್ ಪ್ರಭು, ಕಾರ್ಯದರ್ಶಿ ಪಿ. ಅಮಿತ್ ಪೈ, ನಿಮಿಷಾಂಭ ಪ್ರೋಡಕ್ಟ್ನ ಪಾಂಡುರಂಗ ಸತೀಶ್, ಖಜಾಂಚಿ ಗಣೇಶ್ ಕಾಮತ್ ಮೊದಲಾದವರು ಇದ್ದರು.