ಸಾರಾಂಶ
ಕನ್ನಡಪ್ರಭ ವಾರ್ತೆ ಶಿರಾ ಹೇಮಾವತಿ ನೀರಿನಿಂದ ಈ ಬಾರಿ ಶಿರಾ ತಾಲೂಕಿನ 45 ಬ್ಯಾರೇಜ್, 35 ಕೆರೆಗಳು ತುಂಬಿ ರೈತರ ಮತ್ತು ಜನಸಾಮಾನ್ಯರ ನೀರಿನ ಬರ ನೀಗಿಸಿದೆ. ಇದು ನನ್ನ ಜೀವನದ ಅತ್ಯಂತ ಸಂತೋಷದಾಯಕ ಸಂದರ್ಭವಾಗಿದೆ ಎಂದು ಶಾಸಕ ಡಾ.ಟಿ.ಬಿ.ಜಯಚಂದ್ರ ಹೇಳಿದರು.ಅವರು ಬುಧವಾರ ತಾಲೂಕಿನ ರತ್ನಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡಗೂಳ ಕೆರೆ ಹೇಮಾವತಿ ನೀರಿನಿಂದ ತುಂಬಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರು ಹಾಗೂ ಮುಖಂಡರು ಕಾರ್ಯಕರ್ತರ ಜೊತೆಗೂಡಿ ದಂಪತಿ ಸಮೇತ ಗಂಗಾಪೂಜೆ ನೆರವೇರಿಸಿ ಬಾಗಿನ ಅರ್ಪಿಸಿ ಮಾತನಾಡಿದರು. ಹೇಮಾವತಿ ಕಾಲಿಟ್ಟು ಶಿರಾ ತಾಲೂಕಿಗೆ ಕಾಲಿಟ್ಟು ಸುಮಾರು 21 ವರ್ಷ ತುಂಬಿದೆ. ಮಳೆ ಬಾರದ ಸಂದರ್ಭದಲ್ಲಿಯೂ ಹೇಮಾವತಿ ನೀರು ನಮ್ಮ ತಾಲೂಕಿನ ಕೈಹಿಡಿದಿದೆ. ಎಲ್ಲಿ ನೋಡಿದರೂ ಅಂತರ್ಜಲ ಹೆಚ್ಚಿದೆ. 300 ಕಿ.ಮೀ. ದೂರದ ಹೇಮಾವತಿ ನೀರು ಅಲ್ಲಿಂದ ಇಲ್ಲಿಗೆ ಬರುತ್ತದೆ ಎಂಬುದು ಎಲ್ಲರಿಗೂ ಕನಸಾಗಿತ್ತು. ಅದನ್ನು ನಾನು ನನಸು ಮಾಡಿದ್ದೇನೆ. ದಿ. ಡಿ. ದೇವರಾಜ ಅರಸು ಅವರ ಪ್ರಯತ್ನದಿಂದಾಗಿ ಹೇಮಾವತಿ ನೀರನ್ನು ತುಮಕೂರಿಗೆ ಕೊಡಬೇಕೆಂದು ಮಾಡಿದ ಪ್ರಯತ್ನ ಸಾಕಾರಗೊಂಡಿದೆ. ಶಿರಾ ತಾಲೂಕಿಗೆ ಈ ವರ್ಷ ಸಮರ್ಪಕವಾಗಿ ಮಳೆ ಬಾರದಿದ್ದರೂ ಸಹ ಹೇಮಾವತಿ ನೀರಿನಿಂದ ತಾಲೂಕಿನ ಹಲವು ಕೆರೆಗಳು, ಬ್ಯಾರೇಜ್‌ಗಳು, ಚೆಕ್ ಡ್ಯಾಂಗಳು ತುಂಬಿದ್ದು ತಾಲೂಕಿನಲ್ಲಿ ಅಂತರ್ಜಲ ವೃದ್ಧಿಗೆ ನಾಂದಿಯಾಗಿದೆ ಎಂದರು.ಈ ಸಂದರ್ಭದಲ್ಲಿ ನಿರ್ಮಲ ಟಿ.ಬಿ.ಜಯಚಂದ್ರ, ನಗರಸಭೆ ಅಧ್ಯಕ್ಷ ಜೀಷಾನ್ ಮೊಹಮದ್, ಗ್ರಾಪಂ ಅಧ್ಯಕ್ಷೆ ನಿಂಗಮ್ಮ ಶ್ರೀರಂಗಪ್ಪ, ಸದಸ್ಯರಾದ ಹರೀಶ್, ರಾಮಣ್ಣ, ಬಾಬಣ್ಣ, ಮಾಜಿ ಜಿ.ಪಂ. ಸದಸ್ಯ ರಾಮಚಂದ್ರಪ್ಪ, ಗ್ರಾ.ಪಂ. ಮಾಜಿ ಅಧ್ಯಕ್ಷ ಮಂಜುನಾಥ್, ಪರಸಣ್ಣ, ಮಹದೇವ್, ಸಣ್ಣಲಿಂಗಪ್ಪ, ಪದ್ಮಾಪುರ ಮಂಜಣ್ಣ, ಪಿಡಿಓ ಗುಜ್ಜೇಗೌಡ ಸೇರಿದಂತೆ ಹಲವರು ಹಾಜರಿದ್ದರು.