ತುಮಕೂರು ಜಿಲ್ಲೆಯಲ್ಲಿ ಫಾರ್ಮರ್ ಸಿಟಿ ಸ್ಥಾಪಿಸಲು ಕುಂದರಹಳ್ಳಿ ರಮೇಶ್ ಆಗ್ರಹ

| Published : Oct 29 2025, 01:00 AM IST

ತುಮಕೂರು ಜಿಲ್ಲೆಯಲ್ಲಿ ಫಾರ್ಮರ್ ಸಿಟಿ ಸ್ಥಾಪಿಸಲು ಕುಂದರಹಳ್ಳಿ ರಮೇಶ್ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಸರ್ಕಾರದಿಂದ ದೊರೆಯುವ ಎಲ್ಲಾ ಸವಲತ್ತುಗಳನ್ನು ನಮ್ಮ ತಾಲೂಕಿನ ರೈತರಿಗೆ ಕೊಡಿಸಲು ಸದಾ ಬದ್ಧ, ಕೃಷಿ ಆಶ್ರಮ ನಿರ್ಮಾಣಕ್ಕೆ ಅಗತ್ಯವಿರುವ ನೆರವನ್ನು ತಾವು ನೀಡಲು ಸಿದ್ಧವಾಗಿರುವುದಾಗಿ ಭರವಸೆ ನೀಡಿದರು.

ಕನ್ನಡಪ್ರಭ ವಾರ್ತೆ ತುರುವೇಕೆರೆ

ತುಮಕೂರು ಜಿಲ್ಲೆಯಲ್ಲಿ ಫಾರ್ಮರ್ ಸಿಟಿಯನ್ನು ಸ್ಥಾಪಿಸಲು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕೆಂದು ರಾಜ್ಯ ಮಟ್ಟದ ಕೃಷಿ ಆಶ್ರಮದ ಪರಿಕಲ್ಪನೆಯ ರೂವಾರಿ, ಶಕ್ತಿಪೀಠದ ಸಂಸ್ಥಾಪಕ ಕುಂದರಹಳ್ಳಿ ರಮೇಶ್ ಆಗ್ರಹಿಸಿದ್ದಾರೆ.

ಪಟ್ಟಣದ ಎಪಿಎಂಸಿ ಆವರಣದಲ್ಲಿರುವ ನಂದಿನಿ ಕ್ಷೀರ ಭವನದಲ್ಲಿ ಪರಿವರ್ತನ ಇಕೋ ರೈತ ಉತ್ಪಾದಕರ ಕಂಪನಿ ಲಿಮಿಟೆಡ್ ವತಿಯಿಂದ ಹಮ್ಮಿಕೊಂಡಿದ್ದ ಕೃಷಿ ಆಶ್ರಮ ಕಚೇರಿ ಉದ್ಘಾಟನೆ, ಇ- ಸ್ಟ್ಯಾಂಪಿಂಗ್ ಮತ್ತು ರೈತ ಸೇವಾ ಕೇಂದ್ರ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಅಭಿವೃದ್ಧಿ ವಿಷಯದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತಾರತಮ್ಯ ಮಾಡುತ್ತಿವೆ. ಎಲ್ಲಾ ಸವಲತ್ತುಗಳನ್ನು ನಗರ ಪ್ರದೇಶಗಳಿಗೇ ನೀಡಲಾಗುತ್ತಿದೆ. ಹೀಗಾಗಿ ನಗರ ಪ್ರದೇಶಗಳು ಮಾತ್ರ ಅಭಿವೃದ್ಧಿ ಹೊಂದುತ್ತಿವೆ. ಗ್ರಾಮಾಂತರ ಪ್ರದೇಶದಲ್ಲಿರುವ ಮಾನವ ಸಂಪನ್ಮೂಲ ನಗರಕ್ಕೆ ಗುಳೆ ಹೋಗುತ್ತಿವೆ. ಇದನ್ನು ತಪ್ಪಿಸುವ ಸಲುವಾಗಿ ಗ್ರಾಮಾಂತರ ಪ್ರದೇಶಗಳಿಗೆ ಹೆಚ್ಚಿನ ಅಭಿವೃದ್ಧಿಗೆ ಆಧ್ಯತೆ ನೀಡಿ ಕೈಗಾರಿಕೆಗಳನ್ನು ಸ್ಥಾಪಿಸಿದರೆ ಸಹಜವಾಗಿ ಗ್ರಾಮಾಂತರ ಪ್ರದೇಶಗಳೂ ಅಭಿವೃದ್ಧಿ ಆಗುತ್ತವೆ ಎಂಬ ಸಾಮಾನ್ಯ ಜ್ಞಾನವೂ ನಮ್ಮನ್ನಾಳುವ ಮಂದಿಗೆ ಇಲ್ಲವಾಗಿದೆ ಎಂದು ವಿಷಾದಿಸಿದರು.

ತುಮಕೂರಿನ ಜಿಲ್ಲಾಧಿಕಾರಿಗಳಿಗೆ ರೈತರ ಸಮಸ್ಯೆಯನ್ನು ಬಗೆಹರಿಸುವ ಅಥವಾ ರೈತರಿಗೆ ಅಗತ್ಯವಿರುವ ಸವಲತ್ತುಗಳನ್ನು ಸರ್ಕಾರದಿಂದ ತರಬೇಕೆಂಬ ಕಳಕಳಿ ಇಲ್ಲವಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಲ್ಲಿ ರೈತರಿಗೆ ಅಗತ್ಯವಿರುವ ನೂರಾರು ಯೋಜನೆಗಳು ಇವೆ. ಅವೆಲ್ಲವೂ ಪುಸ್ತಕದ ರೂಪದಲ್ಲಿ ಕೂತಿವೆ. ಅವುಗಳನ್ನು ಕಾರ್ಯರೂಪಕ್ಕೆ ತಂದಲ್ಲಿ ದೇಶದಲ್ಲಿರುವ ಪ್ರತಿಯೊಬ್ಬ ರೈತ ಸುಖಿಯಾಗಿರುತ್ತಾನೆ. ಆದರೆ ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಇಚ್ಛಾಶಕ್ತಿ ಕೊರತೆ ಎದ್ದು ಕಾಣುತ್ತಿದೆ ಎಂದು ಹೇಳಿದರು.

ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ತಮ್ಮ ಸಂಸ್ಥೆ ಖುದ್ದಾಗಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ, ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳ ಕುರಿತು ಮನವಿ ಸಲ್ಲಿಸಿತ್ತು. ಮುಖ್ಯಮಂತ್ರಿಗಳ ಕಚೇರಿಯಿಂದ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನಾ ಪತ್ರವನ್ನು ಜಿಲ್ಲಾಧಿಕಾರಿಗಳಿಗೆ ರವಾನಿಸಲಾಗಿದೆ. ಆದರೆ ಆ ಪತ್ರವನ್ನು ಇಂದಿನವರೆಗೂ ತೆಗೆದು ನೋಡುವ ಸೌಜನ್ಯವನ್ನೂ ಜಿಲ್ಲಾಡಳಿತ ಹೊಂದಿಲ್ಲ. ಜಿಲ್ಲಾಡಳಿತ ಜಿಲ್ಲೆಯ ಅಭಿವೃದ್ಧಿ ವಿಷಯದಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಕುಂದರಹಳ್ಳಿ ರಮೇಶ್ ದೂರಿದರು.

ಕೃಷಿ ಆಶ್ರಮದ ಕಲ್ಪನೆ ವಿಶೇಷವಾಗಿದೆ. ಕನಿಷ್ಠ 5 ರಿಂದ 10 ಎಕರೆ ಜಮೀನಿನಲ್ಲಿ ರೈತರು ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಅಗತ್ಯವಿರುವ ಸಮಗ್ರ ಮಾಹಿತಿಯನ್ನು ನೀಡುವ ಪಾಠಶಾಲೆಯಾಗಿದೆ. ಅದನ್ನು ನಿರ್ಮಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರ ಮುಂದಾಗಬೇಕು. ಪ್ರತಿ ತಾಲೂಕಿನಲ್ಲೂ ಒಂದೊಂದು ಕೃಷಿ ಆಶ್ರಮ ತೆರೆದರೆ ಒಂದು ಕೃಷಿ ಕಾಲೇಜನ್ನೇ ತೆರೆದಂತೆ ಆಗುತ್ತದೆ ಎಂದು ಕುಂದರಹಳ್ಳಿ ರಮೇಶ್ ಆಶಾಭಾವನೆ ವ್ಯಕ್ತಪಡಿಸಿದರು.

ಶಾಸಕ ಎಂ.ಟಿ.ಕೃಷ್ಣಪ್ಪ ಮಾತನಾಡಿ, ಸರ್ಕಾರದಿಂದ ದೊರೆಯುವ ಎಲ್ಲಾ ಸವಲತ್ತುಗಳನ್ನು ನಮ್ಮ ತಾಲೂಕಿನ ರೈತರಿಗೆ ಕೊಡಿಸಲು ಸದಾ ಬದ್ಧ, ಕೃಷಿ ಆಶ್ರಮ ನಿರ್ಮಾಣಕ್ಕೆ ಅಗತ್ಯವಿರುವ ನೆರವನ್ನು ತಾವು ನೀಡಲು ಸಿದ್ಧವಾಗಿರುವುದಾಗಿ ಶಾಸಕ ಎಂ.ಟಿ.ಕೃಷ್ಣಪ್ಪ ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಸಿ.ವಿ.ಮಹಲಿಂಗಯ್ಯ, ಪರಿವರ್ತನ ಇಕೋ ರೈತ ಉತ್ಪಾದಕರ ಕಂಪನಿ ಲಿಮಿಟೆಡ್ ನ ತಾಲೂಕು ಅಧ್ಯಕ್ಷ ಎಚ್.ಎಸ್.ನಾಗರಾಜು, ಪರಿವರ್ತನ ಸಮೂಹ ಸಂಸ್ಥೆಯ ಅಧ್ಯಕ್ಷ ಎಚ್.ಪಿ.ಶಿವಕುಮಾರ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಸಿದ್ದಲಿಂಗಪ್ಪ, ಎಂ.ಎಸ್.ರಾಮಯ್ಯ ಇನ್ಸ್ ಟ್ಯೂಟ್ ಆಫ್ ಟೆಕ್ನಾಲಜಿಯ ನಿವೃತ್ತ ಪ್ರಾಧ್ಯಾಪಕ ಡಾ.ನಾಗಭೂಷಣ್, ನುಗ್ಗೆ ಬೆಳೆ ಸಂಶೋಧಕ ಮಧುರನಾಥ್, ಉಪಾಧ್ಯಕ್ಷ ಡಿ.ಜೆ.ಬಸವರಾಜು, ಖಜಾಂಚಿ ಸೋಮಶೇಖರ್, ನಿರ್ದೇಶಕರಾದ ವಿಜಯೆಂದ್ರ, ಎಂ.ಕೆ.ಗಿರೀಶ್, ಮೃತ್ಯಂಜಯ, ಕಿರಣ್ ಕುಮಾರ್, ಸೋಮಶೇಖರ್, ಸುರೇಶ್, ದೇವರಾಜು, ಗೋವಿಂದಯ್ಯ, ಪ್ರಕಾಶ್, ರೇಣುಕಪ್ಪ, ಶ್ರೀನಿವಾಸ್, ಪಾರ್ವತಿ ಯೋಗೀಶ್, ಬಸವರಾಜು, ನಂಜುಂಡಪ್ಪ ಸೇರಿದಂತೆ ರೈತರು ಇದ್ದರು.