ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ದೇಶೀಯ ವಿದ್ಯಾಶಾಲಾ ಸಮಿತಿ, ಕುವೆಂಪು ವಿಶ್ವವಿದ್ಯಾಲಯ, ಡಿವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಸಹಯೋಗದಲ್ಲಿ ಡಿ.4ರಿಂದ 6ರವರೆಗೆ ನಗರದ ನೆಹರು ಕ್ರೀಡಾಂಗಣದಲ್ಲಿ ಕುವೆಂಪು ವಿಶ್ವವಿದ್ಯಾಲಯ ಅಂತರ ಕಾಲೇಜು ಅಥ್ಲೆಟಿಕ್ಸ್ ಕ್ರೀಡಾಕೂಟ 2024-25 ಹಮ್ಮಿಕೊಳ್ಳಲಾಗಿದೆ ಎಂದು ಡಿವಿಎಸ್ ಕಾರ್ಯದರ್ಶಿ ಎಸ್.ರಾಜಶೇಖರ್ ಹೇಳಿದರು.ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕುವೆಂಪು ವಿಶ್ವವಿದ್ಯಾಲಯ ವ್ಯಾಪ್ತಿಯ ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಒಟ್ಟು 51 ಕಾಲೇಜುಗಳ 712 ಕ್ರೀಡಾಪಟುಗಳು ಭಾಗವಹಿಸುತ್ತಿದ್ದು, ಅದರಲ್ಲಿ 455 ವಿದ್ಯಾರ್ಥಿಗಳು ಹಾಗೂ 257 ವಿದ್ಯಾರ್ಥಿನಿಯರಿದ್ದಾರೆ.
160 ಜನ ಅಧಿಕಾರಿ ವರ್ಗ ಹಾಗೂ ತಾಂತ್ರಿಕ ವರ್ಗ, 75 ಜನ ಸ್ವಯಂಸೇವಕರು ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.ಕ್ರೀಡಾಕೂಟದ ಮೂರನೇಯ ದಿನ ಪುರುಷ, ಮಹಿಳೆಯರ ಮ್ಯಾರಥಾನ್ ಓಟ ನಡೆಯಲಿದ್ದು, ಎಂ.ಆರ್.ಎಸ್ ವೃತ್ತದಿಂದ ಆರಂಭವಾಗಿ ಲಕ್ಕಿನಕೊಪ್ಪ ಸರ್ಕಲ್ ಎಡ ಭಾಗಕ್ಕೆ ತಿರುಗಿ 1ಕಿಮೀ ವ್ಯಾಪ್ತಿಯವರೆಗೆ ಕ್ರಮಿಸಿ ಬಂದು ಎಂ.ಆರ್.ಎಸ್ ವೃತ್ತದಲ್ಲಿ ಮುಕ್ತಾಯಗೊಳ್ಳಲಿದೆ ಎಂದರು.
ಡಿವಿಎಸ್ ಸಹ ಕಾರ್ಯದರ್ಶಿ ಡಾ.ಎ.ಸತೀಶ್‌ಕುಮಾರ್ ಶೆಟ್ಟಿ ಮಾತನಾಡಿ, ಡಿ.4ರಂದು ಬೆಳಗ್ಗೆ 10 ಗಂಟೆಗೆ ಕ್ರೀಡಾಕೂಟಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್‌ಕುಮಾರ್ ಉದ್ಘಾಟಿಸುವರು. ದೇಶೀಯ ವಿದ್ಯಾಶಾಲಾ ಸಮಿತಿಯ ಅಧ್ಯಕ್ಷ ಕೆ.ಎನ್.ರುದ್ರಪ್ಪ ಕೊಳಲೆ ಅಧ್ಯಕ್ಷತೆ ವಹಿಸಲಿದ್ದು, ಕುವೆಂಪು ವಿವಿ ಪರೀಕ್ಷಾಂಗ ಕುಲಸಚಿವ ಪ್ರೊ.ಎಸ್.ಎಂ.ಗೋಪಿನಾಥ್, ಡಿವಿಎಸ್ ಉಪಾಧ್ಯಕ್ಷ ಎಸ್.ಪಿ.ದಿನೇಶ್, ಖಜಾಂಚಿ ಬಿ.ಗೋಪಿನಾಥ್, ನಿರ್ದೇಶಕ ಎಂ.ರಾಜು, ನಿರ್ದೇಶಕ ಎನ್.ಆರ್.ನಿತಿನ್, ಐಕ್ಯೂಎಸಿ ಸಂಯೋಜಕ ಪ್ರೊ. ಎನ್.ಕುಮಾರಸ್ವಾಮಿ ಉಪಸ್ಥಿತರಿರುವರು ಎಂದು ಹೇಳಿದರು.ಡಿ.6ರಂದು ಮಧ್ಯಾಹ್ನ 3.30ಕ್ಕೆ ಕ್ರೀಡಾಕೂಟದ ಸಮಾರೋಪ ಹಾಗೂ ಬಹುಮಾನ ವಿತರಣಾ ಸಮಾರಂಭ ನಡೆಯಲಿದೆ. ಕಾಲೇಜು ಶಿಕ್ಷಣ ಇಲಾಖೆ ಪ್ರಾದೇಶಿಕ ಜಂಟಿ ನಿರ್ದೇಶಕ ಡಾ.ಕೆ.ಎ.ವಿಷ್ಣುಮೂರ್ತಿ, ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರೇಖಾನಾಯ್ಕ್, ಡಿವಿಎಸ್ ಆಡಳಿತ ಮಂಡಳಿ ಪದಾಧಿಕಾರಿಗಳು ಉಪಸ್ಥಿತರಿರುವರು ಎಂದು ತಿಳಿಸಿದರು.
ಡಿವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಪ್ರಾಚಾರ್ಯ ಡಾ.ಎಂ.ವೆಂಕಟೇಶ್ ಮಾತನಾಡಿ, ಕ್ರೀಡಾಪಟುಗಳಿಗೆ ದೇಶೀಯ ವಿದ್ಯಾಶಾಲಾ ಸಮಿತಿಯ ಕಾಲೇಜು ಮತ್ತು ನೆಹರು ಕ್ರೀಡಾಂಗಣದಲ್ಲಿ ವಸತಿ ವ್ಯವಸ್ಥೆ ಮಾಡಲಾಗಿದೆ. ಕ್ರೀಡಾಕೂಟದಲ್ಲಿ ಭಾಗವಹಿಸುವ ಕ್ರೀಡಾಪಟುಗಳು, ಅಧಿಕಾರಿಗಳಿಗೆ ಕಾಲೇಜಿನಿಂದ ಕ್ರೀಡಾಂಗಣದಲ್ಲಿ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.ಈಗಾಗಲೇ ಎಲ್ಲ ಕಾಲೇಜುಗಳಿಗೆ ಪ್ರವೇಶ ಪತ್ರ ಕಳುಹಿಸಲಾಗಿದ್ದು, ಕ್ರೀಡಾಪಟುಗಳು ತಮ್ಮ ತಮ್ಮ ಕಾಲೇಜುಗಳ ಧ್ವಜ, ಸಮವಸ್ತ್ರದೊಂದಿಗೆ, ತಮ್ಮ ತಂಡದ ವ್ಯವಸ್ಥಾಪಕರೊಂದಿಗೆ ಡಿ.4ರಂದು ಬೆಳಗ್ಗೆ 8ಗಂಟೆಗೆ ಕ್ರೀಡಾಂಗಣದಲ್ಲಿ ಹಾಜರಾಗಲು ಸೂಚಿಸಲಾಗಿದೆ. ಕ್ರೀಡಾಪಟುಗಳಿಗೆ ಕುಡಿಯುವ ಮಿನರಲ್ ನೀರಿನ ವ್ಯವಸ್ಥೆ ಮಾಡಲಾಗಿದೆ ಎಂದರು.
ಕ್ರೀಡಾಕೂಟದ ಸಂಚಾಲಕತ್ವವನ್ನು ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಸಚಿನ್.ಕೆ ವಹಿಸುವರು. ಕ್ರೀಡಾಕೂಟಕ್ಕಾಗಿ ವಿವಿಧ ಸಮಿತಿಗಳನ್ನು ರಚಿಸಲಾಗಿದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಐಕ್ಯೂಎಸಿ ಸಂಯೋಜಕ ಪ್ರೊ.ಎನ್.ಕುಮಾರಸ್ವಾಮಿ, ದೈಹಿಕ ಶಿಕ್ಷಣ ನಿರ್ದೇಶಕ ಕೆ.ಸಚಿನ್ ಇದ್ದರು.