ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಮಂಡ್ಯದ ಮಿಮ್ಸ್ ಆವರಣದಲ್ಲಿ ನಾನ್ ಕ್ಲಿನಿಕಲ್ ಕಾರ್ಮಿಕರೊಂದಿಗೆ ಶಾಸಕ ಪಿ.ರವಿಕುಮಾರ್ ಕಾರ್ಮಿಕ ದಿನವನ್ನು ಆಚರಿಸಿದರು. ಕೇಕ್ ಕತ್ತರಿಸಿ ತಿನ್ನಿಸುವುದರೊಂದಿಗೆ ಕಾರ್ಮಿಕರೊಂದಿಗೆ ಸಂಭ್ರಮ ಹಂಚಿಕೊಂಡರು.ರಾಜ್ಯ ಸರ್ಕಾರಿ ಆಸ್ಪತ್ರೆ ಮೆಡಿಕಲ್ ಕಾಲೇಜು ಹೊರಗುತ್ತಿಗೆ ನೌಕರರ ಸಂಘ ಆಯೋಜಿಸಿದ್ದ ವಿಶ್ವ ಕಾರ್ಮಿಕರ ದಿನಾಚರಣೆಯನ್ನು ಉದ್ದೇಶಿಸಿ ಮಾತನಾಡಿ, ನಮ್ಮ ಸರ್ಕಾರ ಎಂದಿಗೂ ಕಾರ್ಮಿಕರ ಪರವಾಗಿದೆ. ಅವರ ಕಷ್ಟ-ಸುಖಗಳಲ್ಲಿ ಭಾಗಿಯಾಗಿದೆ. ನಮ್ಮ ಪಕ್ಷ ಚುನಾವಣೆಯ ಸಂದರ್ಭದಲ್ಲಿ ಪೌರಕಾರ್ಮಿಕರನ್ನು ಕಾಯಂ ಮಾಡುವುದಾಗಿ ಮಾತು ಕೊಟ್ಟಿತ್ತು. ಅದರಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ೧೨,೬೦೦ ಪೌರಕಾರ್ಮಿಕರನ್ನು ಕಾಯಂ ಆಗಿ ನೇಮಕ ಮಾಡಿ ಆದೇಶಿಸಿದ್ದಾರೆ ಎಂದರು.
ಹಾಗೆಯೇ ನಗರ ಸ್ಥಳೀಯ ಸಂಸ್ಥೆಗಳ ಕಸದ ವಾಹನ ಚಾಲಕರು, ನೀರು ಸರಬರಾಜು ಸಹಾಯಕರು ಸೇರಿದಂತೆ ಹೊರಗುತ್ತಿಗೆ ಕಾರ್ಮಿಕರನ್ನು ಹಂತ ಹಂತವಾಗಿ ನೇರ ಪಾವತಿಯಡಿ ತರಲಿದ್ದಾರೆ. ಕಾಂಗ್ರೆಸ್ ಸರ್ಕಾರ ಎಲ್ಲಾ ರೀತಿಯ ಕಾರ್ಮಿಕರ ರಕ್ಷಣೆಗೆ ಬದ್ಧವಾಗಿದೆ. ಕಾರ್ಮಿಕರಿಗೆ ವೇತನ, ವಸತಿ ಸೇರಿದಂತೆ ಹಲವು ಸೌಲಭ್ಯ ಕಲ್ಪಿಸಲಿದೆ ಎಂದರು.ಹೊರಗುತ್ತಿಗೆ ನೌಕರರ ಸಂಘದ ಸಂಚಾಲಕಿ ವೆಂಕಟಲಕ್ಷ್ಮೀ, ಹೊರಗುತ್ತಿಗೆ ನೌಕರರಿಗೆ ಶಾಶ್ವತವಾದ ಸೂರಿನ ವ್ಯವಸ್ಥೆ ಮಾಡುವಂತೆ ಶಾಸಕರಲ್ಲಿ ಮನವಿ ಮಾಡಿದರು. ಈ ಕುರಿತು ಅಗತ್ಯ ಯೋಜನೆ ಸಿದ್ಧಪಡಿಸುತ್ತಿರುವುದಾಗಿ ಶಾಸಕರು ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಹಿರಿಯ ನಾನ್ ಕ್ಲಿನಿಕಲ್ ಕಾರ್ಮಿಕರನ್ನು ಗೌರವದಿಂದ ಸನ್ಮಾನಿಸಲಾಯಿತು.ಮೆಡಿಕಲ್ ಕಾಲೇಜು ಹೊರಗುತ್ತಿಗೆ ನೌಕರರ ಸಂಘದ ಅಧ್ಯಕ್ಷ ಎಂ.ಬಿ.ನಾಗಣ್ಣಗೌಡ, ಚಿನ್ನರಾಜು, ಕರುನಾಡ ಸೇವಕರು ಸಂಘದ ಜಿಲ್ಲಾಧ್ಯಕ್ಷ ಎಂ.ಎನ್.ಚಂದ್ರು, ಕಾಂಗ್ರೆಸ್ ಮುಖಂಡರಾದ ಹಾಲಹಳ್ಳಿ ಅಶೋಕ್, ಯೋಗೇಶ್, ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಎಲ್.ಸಂದೇಶ್ ಸೇರಿದಂತೆ ನೂರಾರು ನಾನ್ ಕ್ಲಿನಿಕಲ್ ಕಾರ್ಮಿಕರು ಉಪಸ್ಥಿತರಿದ್ದರು.
ಕಾರ್ಮಿಕರ ದಿನಾಚರಣೆ ಅಂಗವಾಗಿ ಪೌರಕಾರ್ಮಿಕರಿಗೆ ಸನ್ಮಾನಹಲಗೂರು:
ಗ್ರಾಪಂನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 15 ಪೌರ ಕಾರ್ಮಿಕರಿಗೆ ಕಾರ್ಮಿಕರ ದಿನಾಚರಣೆ ಅಂಗವಾಗಿ ವಸ್ತ್ರ ವಿತರಣೆ ಮಾಡಿ ಸನ್ಮಾನಿಸಲಾಯಿತು.ಡಿ.ಆರ್. ಗುರು ಶಿಷ್ಯರ ಬಳಗದಿಂದ ಸನ್ಮಾನಿಸಿ ಮಾತನಾಡಿದ ಬಳಗದ ಅಧ್ಯಕ್ಷ ಎ.ಎಸ್.ದೇವರಾಜು, ನಾನು ವೃತ್ತಿಯಲ್ಲಿ ಮುಖ್ಯ ಶಿಕ್ಷಕನಾಗಿ ನಿವೃತ್ತಿ ನಂತರ ವಿದ್ಯೆ ಕಲಿತ ವಿದ್ಯಾರ್ಥಿಗಳು ನನ್ನ ಹೆಸರಿನಲ್ಲಿ ಸಂಘ ಸ್ಥಾಪನೆ ಮಾಡಿಕೊಂಡು ಸಮಾಜ ಸೇವೆ ಮಾಡುವ ಮುಖಾಂತರ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದ್ದೇವೆ. ಇಂದು ಕಾರ್ಮಿಕರ ದಿನಾಚರಣೆ ಪ್ರಯುಕ್ತ 15 ಜನ ಪೌರಕಾರ್ಮಿಕರನ್ನು ಅಭಿನಂದಿಸಲಾಗಿದೆ ಎಂದರು.
ಪೌರಕಾರ್ಮಿಕ ಭದ್ರ ಮಾತನಾಡಿ, ಸುಮಾರು 28 ವರ್ಷಗಳಿಂದ ಪಂಚಾಯ್ತಿಯಲ್ಲಿ ಸೇವೆ ಸಲ್ಲಿಸುತ್ತಿದ್ದೇವೆ. ನಮಗೆ ಇದುವರೆಗೂ ಯಾರು ಗುರುತಿಸಿ ಸನ್ಮಾನ ಮಾಡಲಿಲ್ಲ. ಇಂದು ಗುರುಶಿಷ್ಯರ ಸಂಘದಿಂದ ಸನ್ಮಾನಿಸುವುದಕ್ಕೆ ನಾನು ಆಭಾರಿಯಾಗಿದ್ದೇನೆ ಎಂದರು.ಈ ವೇಳೆ ಪೌರಕಾರ್ಮಿಕರಾದ ಪಾರ್ವತಮ್ಮ, ರೇಣುಕಮ್ಮ, ನಾಗಮ್ಮ, ಸವಿತಾ, ರೇಖಾ, ರಾಮಸ್ವಾಮಿ, ಲಕ್ಷ್ಮಣ, ಮಹಾದೇವ, ಎಂ.ನಾಗರಾಜು, ಪ್ರದೀಪ್ ಕುಮಾರ್, ಎಚ್.ಎಸ್.ರಮೇಶ್, ಮಹದೇವಮೂರ್ತಿ, ಶ್ರೀನಿವಾಸ, ಮಾದೇಶ್, ಭದ್ರಸ್ವಾಮಿ ಅವರನ್ನು ಅಭಿನಂದಿಸಲಾಯಿತು.
ಬಳಗದ ಸುರೇಂದ್ರ, ಗುರುಸಿದ್ದು, ರಾಜೇಂದ್ರ, ಜಿ.ಕೆ.ನಾಗೇಶ, ಮನೋಹರ, ಜಿ.ಎಸ್.ಕೃಷ್ಣ, ಶ್ರೀನಿವಾಸ್, ಪ್ರವೀಣ್, ರಾಜೇಶ್ವರಿ, ಮುನಿರಾಜ್, ಸೇರಿದಂತೆ ಇತರರು ಇದ್ದರು.