ಸಾರಾಂಶ
ಹರಪನಹಳ್ಳಿ: ಕಾರ್ಮಿಕರ ಸುರಕ್ಷೆ, ಸಾಮಾಜಿಕ ಭದ್ರತೆಗೆ ಹಾಗೂ ಕನಿಷ್ಟ ವೇತನ ಜಾರಿಗೆ ಬಂಡವಾಳ ಶಾಹಿಗಳ ಒತ್ತಡ ಮೀರಿ ರಾಜ್ಯ ಸರ್ಕಾರ ಕಾನೂನು ರೂಪಿಸುವ ಬದ್ದತೆ ಪ್ರದರ್ಶಿಸಬೇಕೆಂದು ಎಂದು ಸಿಪಿಐ ತಾಲೂಕು ಕಾರ್ಯದರ್ಶಿ ಗುಡಿಹಳ್ಳಿ ಹಾಲೇಶ ಆಗ್ರಹಿಸಿದ್ದಾರೆ.
ಅವರು ಆಲ್ ಇಂಡಿಯ ಟ್ರೇಡ್ ಯೂನಿಯನ್ ಕಾಂಗ್ರೆಸ್ ಎಐಟಿಯುಸಿ ಹರಪನಹಳ್ಳಿ ಸಮಿತಿಯಿಂದ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಹತ್ತಿರದ ಹಡಗಲಿ ರಸ್ತೆಯ ತಿರುವುನಲ್ಲಿ ಆಯೋಜಿಸಿದ್ದ ಕಾರ್ಮಿಕ ದಿನಾಚರಣೆ ಕಾರ್ಯಕ್ರಮದಲ್ಲಿ ಗುರುವಾರ ಮಾತನಾಡಿದರು.ಈ ವರ್ಷದ ಕಾರ್ಮಿಕ ದಿನಾಚರಣೆ ಘೋಷಣೆಯಾದ ಸಾಮಾಜಿಕ ನ್ಯಾಯ ಮತ್ತು ಶಿಸ್ತು ಬದ್ದ ಕೆಲಸ,ಕಾರ್ಮಿಕರಲ್ಲಿ ಹಕ್ಕುಗಳ ಪ್ರಜ್ಞೆ ಮತ್ತು ಆರೋಗ್ಯ ಸುರಕ್ಷೆ ಎಂಬುದು ಘೋಷಣೆಗೆ ಸೀಮಿತವಾಗದೇ ಪ್ರಾಮಾಣಿಕ ಜಾರಿಯಾಗಬೇಕು ಎಂದು ಹೇಳಿದರು.
ಪ್ರಸ್ತುತ ಜಾಗತೀಕರಣ ಮತ್ತು ಬಂಡವಾಳ ಶಾಹಿಯ ಅಲೆಯಲ್ಲಿ ಕಾರ್ಮಿಕರ ಕಾನೂನು ಬದ್ದ ಹಕ್ಕುಗಳು,ಸಾಮಾಜಿಕ ಭದ್ರತೆಯಂತಹ ವಿಷಯಗಳ ಆದ್ಯತೆಗಳು ಬದಲಾಗಿವೆ ಎಂದು ತಿಳಿಸಿದರು.ಹಿರಿಯ ಕಾರ್ಮಿಕ ಮುಖಂಡ ಕಾಂ. ಕೆ.ಎಸ್. ಹಡಗಲಿ ಮಠ್ ಧ್ವಜಾರೋಹಣ ನೆರವೇರಿಸಿ ಮಾತನಾಡಿ,ತಮ್ಮ ನ್ಯಾಯಯುತ ಹಕ್ಕು ಪಡೆಯಲು ನಿರಂತರ ಸಂಘರ್ಷದೊಂದಿಗೆ ಕಾರ್ಮಿಕರು ಸೆಣೆಸಬೇಕಾದ ಅನಿವಾರ್ಯತೆ ಬಗ್ಗೆ ಆತಂಕ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಕಟ್ಟಡ ಕಟ್ಟುವ, ಕಲ್ಲು ಒಡೆಯುವ ಮತ್ತು ಕ್ವಾರಿ ಕಾರ್ಮಿಕರ ಸಂಘ, ಕೆ.ಎಸ್.ಆರ್.ಟಿ.ಸಿ ಕಾರ್ಮಿಕ ಸಂಘಟನೆ, ಸೇರಿದಂತೆ ಇತರೇ ಸಂಘಟನೆಗಳ ಮುಖಂಡರುಗಳು ಭಾಗವಹಿಸಿದ್ದರು.ಕಾಂ. ಬಳಿಗನೂರು ಕೊಟ್ರೇಶ್, ಕಾಂ.ಅನಿಲ್‌ಕುಮಾರ, ಕಾಂ. ಯರಬಳ್ಳಿ ಅಭಿಷೇಕ್, ಡಿ.ಎಚ್.ಅರುಣ, ದಾದಾಪೀರ್. ಕೋಟೆಪ್ಪ. ದುಗ್ಗತ್ತಿ ಹನುಮಂತಪ್ಪ, ಉಚ್ಚಂಗುದುರ್ಗ ಪರಸಪ್ಪ ಚೌಡಪ್ಪ, ಮತ್ತಿಹಳ್ಳಿ ಅಂಜಿನಪ್ಪ ಇತರರು ಭಾಗವಹಿಸಿದ್ದರು.