ಲೋಕಾಪುರ: ಜಿಲ್ಲೆಯಲ್ಲಿ ಮಳೆಯ ಅಭಾವದಿಂದ ಈರುಳ್ಳಿ ಬೆಳೆದ ರೈತರು ನಷ್ಟ ಅನುಭವಿಸುತ್ತಿದ್ದಾರೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ರಾಜ್ಯ ಈರುಳ್ಳಿ ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಲೋಕಣ್ಣ ಉಳ್ಳಾಗಡ್ಡಿ ಒತ್ತಾಯಿಸಿದ್ದಾರೆ.

ಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಾಗಲಕೋಟೆ ಜಿಲ್ಲೆಯ ಅತ್ಯಂತ ಅತಿ ಹೆಚ್ಚು ಈರುಳ್ಳಿ ಬೆಳೆಯುವ ಜಿಲ್ಲೆಯಾಗಿದೆ. ರೈತರು 10 ರಿಂದ 20 ಎಕರೆ ವರೆಗೆ ಈರುಳ್ಳಿ ಬೆಳೆ ಬಿತ್ತನೆ ಮಾಡಿ ಎಕರೆಗೆ ಈರುಳ್ಳಿ ಬೆಳೆಗೆ ₹ 30 ಸಾವಿರ ಖರ್ಚು ಮಾಡುತ್ತಾರೆ. ಕಳೆದ 15 ದಿನಗಳಿಂದ ಈರುಳ್ಳಿ ಬೆಳೆ ಮೊಳಕೆ ಆಗಿಲ್ಲ, ಜಿಲ್ಲೆಯ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಸರಿಯಾಗಿ ಮಳೆಯಾಗಿಲ್ಲ ಮತ್ತು ಬಿಸಿಲಿನ ತಾಪದಿಂದ ಈರುಳ್ಳಿ ಬೆಳೆ ಕಪ್ಪು ಆಗುತ್ತಿದ್ದರಿಂದ ರೈತರಿಗೆ ದಿಕ್ಕು ತೋಚುದಂತಾಗಿದೆ. ಕೂಡಲೇ ಜಿಲ್ಲಾಧಿಕಾರಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ಮತ್ತು ಸಂಬಂಧಪಟ್ಟ ಬೀಜದ ಕಂಪನಿಯವರ ಜತೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಎಕರೆಗೆ 15 ಸಾವಿರದಂತೆ ಕಂಪನಿಯವರು ಇನ್ಸುರೆನ್ಸ್ ನೀಡಬೇಕು. ಇಲ್ಲದಿದ್ದರೆ ಲೋಕಾಪುರ ಪಟ್ಟಣದಲ್ಲಿ ನಮ್ಮ ಎಲ್ಲ ಈರುಳ್ಳಿ ಬೆಳೆಗಾರ ರೈತರು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ. ವಿದ್ಯುತ್ ಖಾಸಗಿಕರಣವನ್ನು ಮಾಡುವುದು ಸರಿಯಲ್ಲ. ಇದರಿಂದ ಮುಂದಿನ ದಿನಗಳಲ್ಲಿ ಬಡ ರೈತರಿಗೆ, ಬಡ ಕುಟುಂಬಗಳಿಗೆ ದೊಡ್ಡ ಹೊಡೆತವಾಗುತ್ತದೆ ಎಂದರು.