ಕನ್ನಡಪ್ರಭ ವಾರ್ತೆ ಹುಕ್ಕೇರಿ

ದೇಶವನ್ನು ಪೋಲಿಯೋ ಮುಕ್ತವಾಗಿಸಲು ಇದೇ ತಿಂಗಳು ಜೂ.28 ರಂದು ಭಾನುವಾರ ನಡೆಯಲಿರುವ ರಾಷ್ಟ್ರೀಯ ಪಲ್ಸ್ ಪೋಲಿಯೊ ಕಾರ್ಯಕ್ರಮದಲ್ಲಿ ಹುಕ್ಕೇರಿ ತಾಲೂಕಿನ 5 ವರ್ಷದೊಳಗಿನ 43546 ಮಕ್ಕಳಿಗೆ ಲಸಿಕೆ ಹಾಕಲು ಯೋಜಿಸಿರುವುದಾಗಿ ತಾಲೂಕು ಆರೋಗ್ಯ ಅಧಿಕಾರಿ ಡಾ.ಉದಯ ಕುಡಚಿ ಹೇಳಿದರು.

ತಾಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಚೇರಿಯಲ್ಲಿ ಭಾನುವಾರ ಅಭಿಯಾನ ಯಶಸ್ವಿಗೊಳಿಸಲು ಆಯೋಜಿಸಿದ ಪೂರ್ವಭಾವಿ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಪೋಲಿಯೊ ನಿವಾರಣೆಯಾಗಿದೆ. ಆದರೂ ಮುನ್ನೆಚ್ಚರಿಕೆ ಕ್ರಮವಾಗಿ ದೇಶದ್ಯಾಂತ ಜೂ.28 ರಂದು ಪಲ್ಸ್ ಪೋಲಿಯೊ ಲಸಿಕೆ ಅಭಿಯಾನ ನಡೆಯುತ್ತಿದ್ದು, ಹುಕ್ಕೇರಿ ತಾಲೂಕಿನಲ್ಲಿ ಆಂದೋಲನ ರೂಪದಲ್ಲಿ ಕಾರ್ಯಕ್ರಮ ರೂಪಿಸಿರುವುದಾಗಿ ತಿಳಿಸಿದರು.ತಾಲೂಕಿನ 5 ವರ್ಷದೊಳಗಿನ 43546 ಮಕ್ಕಳನ್ನು ಗುರುತಿಸಲಾಗಿದ್ದು, 202 ಲಸಿಕಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಹುಕ್ಕೇರಿ, ಸಂಕೇಶ್ವರ ಮತ್ತು ಹತ್ತರಗಿ ಬಸ್ ನಿಲ್ದಾಣಗಳಲ್ಲಿ 6 ಟ್ರಾನ್ಸಿಟ್ ಕೇಂದ್ರಗಳನ್ನು ತೆರೆಯಲಾಗಿದೆ. 824 ಲಸಿಕಾ ಸಿಬ್ಬಂದಿ ನೇಮಿಸಲಾಗಿದೆ. 45 ಮೇಲ್ವಿಚಾರಕರು ಮತ್ತು 2 ಮೊಬೈಲ್ ತಂಡಗಳನ್ನು ಲಸಿಕಾ ಕಾರ್ಯಕ್ರಮಕ್ಕೆ ನೇಮಿಸಲಾಗಿದೆ. 18 ಲಸಿಕೆ ಶೇಖರಣೆ ಶಿಥಿಲೀಕರಣ ಘಟಕಗಳಿಗೆ ನಿರಂತರವಾಗಿ ವಿದ್ಯುತ್ ಪೂರೈಸಲು ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘಕ್ಕೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.ಜೂ.28 ರಂದು ಸರ್ಕಾರಿ ಆಸ್ಪತ್ರೆಗಳು, ಅಂಗನವಾಡಿ ಕೇಂದ್ರಗಳು, ಬಸ್ ನಿಲ್ದಾಣ ಸೇರಿದಂತೆ ಪ್ರಮುಖ ಸಾರ್ವಜನಿಕ ಸ್ಥಳಗಳಲ್ಲಿ ಸ್ಥಾಪಿಸಲಾದ ಪೋಲಿಯೋ ಬೂತ್‌ಗಳಲ್ಲಿ ಲಸಿಕೆ ಹಾಕಲು ವ್ಯವಸ್ಥೆ ಮಾಡಲಾಗಿದೆ. ಜೂ.29 ರಿಂದ ಜು.1 ರವರೆಗೆ ಬೂತ್‌ಗಳಿಗೆ ಬರಲು ಸಾಧ್ಯವಾಗದ ಮಕ್ಕಳಿಗಾಗಿ ಆರೋಗ್ಯ ಕಾರ್ಯಕರ್ತರು, ಆಶಾ-ಅಂಗನವಾಡಿ ಕಾರ್ಯಕರ್ತೆಯರು ಮನೆ, ಮನೆಗೆ ಭೇಟಿ ನೀಡಿ ಲಸಿಕೆ ಹಾಕಲಿದ್ದಾರೆ ಎಂದು ಮಾಹಿತಿ ನೀಡಿದರು.ಅಂದು ಎಲ್ಲ ಕೇಂದ್ರಗಳಲ್ಲಿ ಪಲ್ಸ್ ಪೋಲಿಯೋ ಲಸಿಕೆ ಹಾಕಲಾಗುತ್ತದೆ. ನಂತರ ಗ್ರಾಮಾಂತರ ಪ್ರದೇಶದಲ್ಲಿ ಹೆಚ್ಚುವರಿಯಾಗಿ 2 ದಿನ ಹಾಗೂ ನಗರ ಪ್ರದೇಶದಲ್ಲಿ 3 ದಿನಗಳ ಕಾಲ ಮನೆ ಮನೆಗೆ ಭೇಟಿ ನೀಡಿ ಯಾವ ಮಕ್ಕಳೂ ಅಭಿಯಾನದಿಂದ ಬಿಟ್ಟು ಹೋಗದಂತೆ ಲಸಿಕೆ ನೀಡುವ ಯೋಜನೆ ರೂಪಿಸಲಾಗಿದೆ. ಪುರಸಭೆ, ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲೂ ವ್ಯಾಪಕ ಪ್ರಚಾರ ಹಾಗೂ ಕಾರ್ಯಕ್ರಮಕ್ಕಾಗಿ ವಿಶೇಷ ವ್ಯವಸ್ಥೆಗಳನ್ನು ರೂಪಿಸಲಾಗಿದೆ ಎಂದು ತಿಳಿಸಿದರು.ಸಾರ್ವಜನಿಕ ಶಿಕ್ಷಣ ಇಲಾಖೆ ಮೂಲಕ ಮುನ್ನಾ ದಿನವಾದ ಶನಿವಾರ ವ್ಯಾಪಕ ಜಾಥಾ ಮೂಲಕ ಹಾಗೂ ಪ್ರಾರ್ಥನಾ ಸಭೆಯ ವೇಳೆ, ಶಾಲಾ ಅವಧಿಯಲ್ಲಿ ಮಾಹಿತಿ ನೀಡಲಾಗಿದೆ. ಅಲ್ಲದೇ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಅಂಗನವಾಡಿ ಕಾರ್ಯಕರ್ತೆಯರ ಮೂಲಕ ವಿವಿಧ ಪ್ರಚಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅಲ್ಲದೇ ಸಾರಿಗೆ, ಕಾರ್ಮಿಕ ಇಲಾಖೆ ಸೇರಿದಂತೆ ಅನೇಕ ಸ್ವಯಂ ಸೇವಾ ಸಂಸ್ಥೆಗಳು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಲಿವೆ ಎಂದರು.ಮುಖ್ಯ ವೈದ್ಯಾಧಿಕಾರಿಗಳಾದ ಡಾ.ಶಾಮಲಾ ಪೂಜಾರಿ, ಡಾ.ಎಂ.ಎಂ.ನರಸನ್ನವರ, ಡಾ.ಪೂರ್ಣಿಮಾ ತಲ್ಲೂರ, ಆರೋಗ್ಯ ಶಿಕ್ಷಣಾಧಿಕಾರಿ ನಾಯಿಕ, ತಾಲೂಕು ಮೇಲ್ವಿಚಾರಕ ನವೀನ ಬಾಯನಾಯಿಕ, ಸೋಮೇಶ ಅರೆಬೆಂಚಿ ಮತ್ತಿತರರು ಉಪಸ್ಥಿತರಿದ್ದರು.