ಸಾರಾಂಶ
ಹಾವೇರಿ: ಅರೆ ಮಲೆನಾಡು ಪ್ರದೇಶದಲ್ಲಿ ಇತ್ತೀಚಿನ ವರ್ಷಗಳಲ್ಲಿ ಹಾಲು ಉತ್ಪಾದನೆ, ಹೈನುಗಾರಿಕೆಗೆ ಪ್ರೋತ್ಸಾಹ ಸಿಕ್ಕಿದ್ದರಿಂದ ಪಶು ಸಾಕಣೆ ಹೆಚ್ಚಿದೆ. ಆದರೆ, ಜಾನುವಾರುಗಳ ಸಂಖ್ಯೆಗೆ ತಕ್ಕಂತೆ ಪಶು ವೈದ್ಯರಿಲ್ಲದೇ ಪರದಾಡುವ ಪರಿಸ್ಥಿತಿ ಜಿಲ್ಲೆಯಲ್ಲಿ ಎದುರಾಗಿದೆ.
ಜಿಲ್ಲೆಯಲ್ಲಿ ಸುಮಾರು ೧೨.೪೧ ಲಕ್ಷ ಜಾನುವಾರುಗಳಿದ್ದು, ಲಂಪಿ ಸ್ಕಿನ್ ಸೇರಿದಂತೆ ನಾನಾ ರೀತಿಯ ಕಾಯಿಲೆಗಳು ಜಿಲ್ಲೆಯ ಜಾನುವಾರುಗಳನ್ನು ಬಾಧಿಸಿವೆ. ಜಿಲ್ಲೆಗೆ ೧೦೯ ಪಶು ವೈದ್ಯಾಧಿಕಾರಿ ಹುದ್ದೆಗಳು ಮಂಜೂರಾಗಿದ್ದರೂ ಕೇವಲ ೪೪ ಪಶು ವೈದ್ಯರಿದ್ದಾರೆ.ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಜಿಲ್ಲೆಗೆ ಒಟ್ಟಾರೆ ೫೫೮ ಹುದ್ದೆಗಳನ್ನು ಮಂಜೂರು ಮಾಡಿದೆ. ಇದರಲ್ಲಿ ಸದ್ಯಕ್ಕೆ ೩೧೪ ಹುದ್ದೆಗಳು ಮಾತ್ರ ಭರ್ತಿಯಾಗಿದ್ದು, ಬರೋಬ್ಬರಿ ೨೪೪ ಹುದ್ದೆಗಳು ಖಾಲಿ ಇವೆ. ೧೦೯ ಪಶುವೈದ್ಯರ ಪೈಕಿ ಕೇವಲ ೪೪ ವೈದ್ಯರಿದ್ದು, ೬೮ ಹುದ್ದೆಗಳು ಖಾಲಿ ಇವೆ. ರಾಷ್ಟ್ರೀಯ ಜಾನುವಾರು ಅಭಿವೃದ್ಧಿ ಮಾರ್ಗಸೂಚಿ ಅನ್ವಯ ಪ್ರತಿ ೫ ಸಾವಿರ ಜಾನುವಾರುಗಳಿಗೆ ಒಬ್ಬ ಪಶು ವೈದ್ಯರು ಇರಬೇಕೆಂಬ ನಿಯಮವಿದೆ. ಆದರೆ, ಈ ನಿಯಮದ ಕಾಲುಭಾಗವೂ ಇಲ್ಲಿ ಪಾಲನೆಯಾಗುತ್ತಿಲ್ಲ. ಜಿಲ್ಲೆಯಲ್ಲಿ ೨೦ನೇ ಜಾನುವಾರು ಗಣತಿ ಪ್ರಕಾರ ೩.೪೬ ಲಕ್ಷ ದೊಡ್ಡ ಜಾನುವಾರುಗಳಿವೆ. ಕುರಿ, ಆಡು, ಮೊಲ, ಇತರ ಪ್ರಾಣಿಗಳು ಸೇರಿ ೯ ಲಕ್ಷಕ್ಕೂ ಅಧಿಕ ಸಣ್ಣ ಜಾನುವಾರುಗಳಿದ್ದು, ಒಟ್ಟಾರೆ ೧೨.೪೧ ಲಕ್ಷ ಜಾನುವಾರುಗಳಿವೆ.
ಹಾವೇರಿ ಜಿಲ್ಲೆ ಕೃಷಿ ಪ್ರಧಾನವಾಗಿದ್ದರಿಂದ ರೈತರು ಕೃಷಿ ಚಟುವಟಿಕೆಗೆ ಜಾನುವಾರುಗಳನ್ನೇ ಅವಲಂಬಿಸಿದ್ದಾರೆ. ಜತೆಗೆ ಹೈನುಗಾರಿಕೆಯಿಂದಲೇ ಜೀವನ ಸಾಗಿಸುವವರಿದ್ದಾರೆ. ರೋಗ, ಮತ್ತಿತರ ತೊಂದರೆಗೀಡಾದ ಜಾನುವಾರುಗಳಿಗೆ ಸಮಯಕ್ಕೆ ಸರಿಯಾದ ಚಿಕಿತ್ಸೆ ಲಭ್ಯವಾಗುತ್ತಿಲ್ಲ. ಒಬ್ಬ ಪಶುವೈದ್ಯರು ಎರಡು, ಮೂರು ಕಡೆಗಳಲ್ಲಿ ಹೆಚ್ಚುವರಿಯಾಗಿ ಕೆಲಸ ನಿರ್ವಹಿಸುವ ಅನಿವಾರ್ಯತೆ ಇದೆ. ಹೀಗಾಗಿ, ಈಗಿರುವ ಸಿಬ್ಬಂದಿ ಮೇಲೆ ಕಾರ್ಯಭಾರ ಒತ್ತಡ ಸೃಷ್ಟಿಯಾಗಿದೆ.ಸಿಬ್ಬಂದಿ ಕೊರತೆ ನೀಗಿಸಲು ಜಿಲ್ಲಾ ಪಶು ಇಲಾಖೆ ಅಧಿಕಾರಿಗಳು ಹಲವು ಬಾರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಆದರೂ, ನೇಮಕ ಪ್ರಕ್ರಿಯೆ ಆಗಿಲ್ಲ. ತಾತ್ಕಾಲಿಕವಾಗಿ ೮೧ ಹೊರಗುತ್ತಿಗೆ ಆಧಾರದ ಮೇಲೆ ಡಿ ದರ್ಜೆ ಸಿಬ್ಬಂದಿಯನ್ನು ನೇಮಿಸಿಕೊಳ್ಳಲಾಗಿದೆ. ಇಷ್ಟೊಂದು ಪ್ರಮಾಣದ ಜಾನುವಾರುಗಳಿದ್ದರೂ ಸರ್ಕಾರ ಮಾತ್ರ ಖಾಲಿ ಹುದ್ದೆ ಭರ್ತಿಗೆ ಮುಂದಾಗುತ್ತಿಲ್ಲ. ಕೂಡಲೇ ಸರ್ಕಾರ ಪಶು ವೈದ್ಯರನ್ನು ನೇಮಕ ಮಾಡಿಕೊಂಡು ಜಿಲ್ಲೆಯಲ್ಲಿ ಆಗುತ್ತಿರುವ ಸಮಸ್ಯೆಗೆ ಸ್ಪಂದಿಸಬೇಕು ಎಂದು ರೈತ ಮುಖಂಡ ಮಲ್ಲಿಕಾರ್ಜುನ ಬಳ್ಳಾರಿ ಆಗ್ರಹಿಸಿದ್ದಾರೆ.ಜಿಲ್ಲೆಯಲ್ಲಿವೆ ೧೫೨ ಪಶು ಆಸ್ಪತ್ರೆಗಳು..ಜಿಲ್ಲೆಯಲ್ಲಿ ಹಾವೇರಿ ನಗರದಲ್ಲಿ ೧ ಜಿಲ್ಲಾಮಟ್ಟದ ಪಾಲಿಕ್ಲಿನಿಕ್, ವಿವಿಧೆಡೆ ೫೦ ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರಗಳು, ೭೩ ಪಶು ಚಿಕಿತ್ಸಾಲಯಗಳು, ೧೯ ಪಶು ಆಸ್ಪತ್ರೆಗಳು, ೭ ಮೊಬೈಲ್ ವೆಟರ್ನರಿ ಕ್ಲಿನಿಕ್ (ತಾಲೂಕಿಗೊಂದು), ೨ ಬ್ರಿಡಿಂಗ್ ಸೆಂಟರ್ ಸೇರಿ ಒಟ್ಟು ೧೫೨ ಪಶು ಆಸ್ಪತ್ರೆಗಳಿವೆ.ಪಶುವೈದ್ಯರ ಕೊರತೆ ಇದ್ದರೂ, ಜಾನುವಾರುಗಳ ಚಿಕಿತ್ಸೆಯಲ್ಲಿ ಯಾವುದೇ ತೊಂದರೆಯಾಗದ ರೀತಿಯಲ್ಲಿ ಇರುವ ವೈದ್ಯರಿಂದಲೇ ಸೇವೆ ನೀಡಲಾಗುತ್ತಿದೆ. ಪಶು ವೈದ್ಯರು ಸೇರಿದಂತೆ ಇತರ ಹುದ್ದೆಗಳ ನೇಮಕಾತಿಗಾಗಿ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಪ್ರಕ್ರಿಯೆ ನಡೆಸುತ್ತಿದೆ ಪಶು ಸಂಗೋಪನಾ ಇಲಾಖೆ ಉಪನಿರ್ದೇಶಕ ಡಾ. ಸತೀಶ ಸಂತಿ ಹೇಳಿದರು.