ತೆಕ್ಕಲಕೋಟೆ: ಪಟ್ಟಣದಲ್ಲಿ ಇತ್ತೀಚೆಗೆ ನಡೆದ ಪ್ರಾಗೈತಿಹಾಸಿಕ ಕಾಲದ ಉತ್ಪನನ ನಡೆದ ''''ಗೌಡ್ರ ಮೂಲೆ'''' ಸ್ಥಳದಲ್ಲಿ ಬಂಡೆಗಲ್ಲು ಶಾಸನ ಪತ್ತೆಯಾಗಿದೆ ಹಾಗೂ ಸ್ಥಳೀಯ ಇತಿಹಾಸ ಸಂಶೋಧನಾರ್ಥಿ ಮನೋಹರ್ ಸಿ.ಎಂ. ಬಂಡೆಗಲ್ಲು ಶಾಸನವನ್ನು ಗುರುತಿಸಿದ್ದಾರೆ.
ಧಾರವಾಡದ ಲಿಪಿತಜ್ಞ ಮಾರುತಿ ಭಜಂತ್ರಿ ಅಧ್ಯಯನ ಮಾಡಿ ಶಾಸನದ ಲಿಪಿ ಮತ್ತು ಬರವಣಿಗೆಯ ಭಾಷೆ ಪರಿಗಣಿಸಿ ಇದು ವಿಜಯನಗರ ಅಥವಾ ವಿಜಯನಗರೋತ್ತರ (17 ರಿಂದ 18ನೇ ಶತಮಾನ) ಕಾಲಘಟ್ಟದಲ್ಲಿ ಬರೆಸಿರಬಹುದು ಎಂದು ಅಭಿಪ್ರಾಯ ಪಟ್ಟಿದ್ದಾರೆ.ಬಂಡೆಗಲ್ಲು ಶಾಸನವು ಆರು ಸಾಲು ಹೊಂದಿದ್ದು, ಕನ್ನಡ ಲಿಪಿ ಬಳಸಲಾಗಿದೆ. ಆರಂಭದಲ್ಲಿ ಸೂರ್ಯ ಮತ್ತು ಚಂದ್ರನ ಸಂಕೇತ ಇದ್ದು, ''''ಟೆಕಲಕೊಟೆ ನಾಡಗೌಡಯರೆ ತ್ರಿಜಣ ಗೌಡನ ಮಗ ಮಲಣಗೌಡನ ಮಗ ಚಿಣಗೌಡನ ಮಗ ಪ್ರಜಟನ ಮಗ ಗೌಡಪನ ಮಗ ತ್ರಿಚಣ ಚನ್ನವಿರಪ ಗೌಡನು ಕಟಿಸಿದ ಕೆರೆ " ಎಂದು ಬರೆಯಲಾಗಿದೆ.
ಈ ಪ್ರದೇಶದಲ್ಲಿ ಗೌಡರು ಅಧಿಪತ್ಯವನ್ನು ಹೊಂದಿದ್ದ ಕಾರಣ ಈ ಸ್ಥಳಕ್ಕೆ ಗೌಡರ ಮೂಲೆ (ಪ್ರಸ್ತುತ) ಎಂಬ ಹೆಸರು ಬಂದಿತು ಎಂದು ಅರಿಯಲು ಸಹಕಾರಿಯಾಗಿದೆ.ಶಾಸನದಲ್ಲಿ ತೆಕ್ಕಲಕೋಟೆಯ ಸ್ಥಳನಾಮವನ್ನು "ಟೆಕಲಕೊಟೆ " ಎಂದು ನಮೂದಿಸಿದ್ದು ವ್ಯಕ್ತಿಯೊಬ್ಬ (ತ್ರಿಚಣ ಚನ್ನವಿರಪ ಗೌಡ) ತಾನು ಕೆರೆಯನ್ನು ನಿರ್ಮಿಸಿದ ಸಂದರ್ಭದಲ್ಲಿ ತನ್ನ ವಂಶದ ಮತ್ತು ತನ್ನ ಪ್ರತಿಷ್ಠೆಯನ್ನು ತೋರ್ಪಡಿಸಲು ಹಾಗೂ ವಿಜಯನಗರ ಕಾಲದಲ್ಲಿ ನಾಡಗೌಡರಾಗಿದ್ದ ತನ್ನ ವಂಶದ ಹಿರಿಯಜ್ಜನ ಹೆಸರನ್ನು ಗುರುತಿಸುವ ಕಾರ್ಯವನ್ನು ಮಾಡಿದ್ದಾನೆ.
ಈ ಶಾಸನದ ಪ್ರಕಾರ ತೆಕ್ಕಲಕೋಟೆ ಕುರುಗೋಡಿನ ಸಿಂಧರ ಕಾಲದಲ್ಲಿ ತೆಕ್ಕೆಕಲ್ಲು ೧೨ ಎಂಬ ನಾಮ ವಿಶೇಷತೆ ಪಡೆದು ವಿಜಯನಗರ ಕಾಲದಲ್ಲಿಯೂ ಒಂದು ನಾಡು ಆಗಿ ಪ್ರಸಿದ್ಧತೆ ಹೊಂದಿತ್ತು ಎಂದು ತಿಳಿದುಬರುತ್ತದೆ.
ಬೃಹತ್ ಬಂಡೆಯೊಂದರ ಮೇಲೆ ಶಾಸನವನ್ನು ಬರೆಯಲಾಗಿದೆ. ಶಾಸನದ ಮುಂದೆಯೇ ಕೆರೆಯ ಕುರುಹುಗಳು ಕಂಡು ಬರುತ್ತಿದ್ದು, ಪ್ರಸ್ತುತ ''''ಗುನ್ನಯ್ಯನ ಕೆರೆ'''' ಎಂದು ಕರೆಯಲಾಗುತ್ತಿದೆ. ವ್ಯವಸಾಯ, ಸಾರ್ವಜನಿಕರಿಗೆ ಹಾಗೂ ಪ್ರಾಣಿ, ಪಕ್ಷಿಗಳಿಗೆ ನೀರುಣಿಸಲು ಕೆರೆಯನ್ನು ನಿರ್ಮಾಣ ಮಾಡಿದ ಮಹತ್ತರ ಕಾರ್ಯ ಸ್ಮರಿಸುವ ದಾಖಲೆಯಾಗಿದೆ. ಶಾಸನ ಪತ್ತೆ ಕಾರ್ಯದಲ್ಲಿ ಅಶೋಕ್ ಅಬಕಾರಿ ಹಾಗೂ ಎಂ.ನಾಗರಾಜ ಸಹಕರಿಸಿದ್ದಾರೆ.