ಹುಬ್ಬಳ್ಳಿ: ದೇಶವು ಯಾವುದೇ ಒಂದು ಪಕ್ಷಕ್ಕೆ ಸೀಮಿತವಾಗಿಲ್ಲ. ಇದು ಪ್ರಜ್ಞಾವಂತರು ಮಾಡುವ ಮತದಾನವಾಗಿದೆ. ನೀವು ಯಾವ ಆಧಾರದ ಮೇಲೆ ಅಭ್ಯರ್ಥಿಗೆ ಮತ ನೀಡುತ್ತಿದ್ದೀರಿ. ಆ ಪಕ್ಷದಿಂದ ದೇಶಕ್ಕಾದ ಅನಕೂಲಗಳೇನು ಎಂಬುದರ ಕುರಿತು ಸಮಾಲೋಚಿಸಿ ಮತ ಹಾಕುವಂತೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಮನವಿ ಮಾಡಿದರು.
ಗೋಕುಲ ರಸ್ತೆಯಲ್ಲಿ ಬುಧವಾರ ಸಂಜೆ ಕಾಂಗ್ರೆಸ್ ಪಕ್ಷದ ಪಶ್ಚಿಮ ಪದವೀಧರ ಕ್ಷೇತ್ರದ ವಿಧಾನ ಪರಿಷತ್ ಚುನಾವಣಾ ಕಚೇರಿ ಉದ್ಘಾಟಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.ಕಾಂಗ್ರೆಸ್ ಪಕ್ಷ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳು ಹಾಗೂ ಹೈಕಮಾಂಡ್ ನಿರ್ಣಯದಂತೆ ವಿಪ ಮಾಜಿ ಸದಸ್ಯ ಮೋಹನ್ ಲಿಂಬಿಕಾಯಿ ಅವರಿಗೆ ಟಿಕೆಟ್ ನೀಡಿದೆ. ಈ ತೀರ್ಮಾನದಿಂದ ಪಕ್ಷದ ಕೆಲವರಲ್ಲಿ ಅಸಮಾಧಾನ ಉಂಟಾಗಿದೆ. ಅವರೆಲ್ಲರನ್ನೂ ವಿಶ್ವಾಸಕ್ಕೆ ತಗೆದುಕೊಂಡು ಹೋಗುವುದರೊಂದಿಗೆ ಪಕ್ಷದ ಅಭ್ಯರ್ಥಿ ಗೆಲುವಿಗೆ ಶ್ರಮಿಸಲಾಗುವುದು ಎಂದರು.
ಈ ಹಿಂದೆ ಸಾರ್ವಜನಿಕ ಕ್ಷೇತ್ರದಲ್ಲಿ ಮೋಹನ್ ಲಿಂಬಿಕಾಯಿ ಮಾಡಿದ ಹೋರಾಟ, ಸಾಧನೆ ಬಹಳಷ್ಟಿದೆ. ಚುನಾವಣಾ ದಿನಾಂಕ ಇನ್ನೂ ಘೋಷಣೆಯಾಗಿಲ್ಲ. ಆದರೂ ಪಕ್ಷದ ಶಾಸಕರು, ನಾಯಕರು ಹಾಗೂ ಬ್ಲಾಕ್ ಅಧ್ಯಕ್ಷರು ಹೆಚ್ಚಿನ ಸಂಖ್ಯೆಯಲ್ಲಿ ಗೆಲುವಿಗಾಗಿ ಕಾರ್ಯಪ್ರವೃತ್ತರಾಗಿದ್ದಾರೆ ಎಂದರು.ಪಕ್ಷದ ಅಭ್ಯರ್ಥಿ ಮೋಹನ ಲಿಂಬಿಕಾಯಿ ಮಾತನಾಡಿ, ಈಗಾಗಲೇ 87 ಸಾವಿರ ಮತದಾರರು ಪದವೀಧರ ಕ್ಷೇತ್ರದ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಂಡಿದ್ದಾರೆ. ಧಾರವಾಡ, ಗದಗ, ಹಾವೇರಿ, ಉತ್ತರ ಕನ್ನಡ ಮತದಾರರಿದ್ದಾರೆ. ಎಲ್ಲ ಶಾಸಕರು, ಸಚಿವರು ಹಾಗೂ ಕಾರ್ಯಕರ್ತರು ಸಕ್ರಿಯವಾಗಿ ತೊಡಗಿಕೊಂಡು ಚುನಾವಣೆಗೆ ಶ್ರಮಿಸುತ್ತಿದ್ದಾರೆ. ಪಶ್ಚಿಮ ಪದವೀಧರರ ಮತಕ್ಷೇತ್ರದ ಚುನಾವಣೆಯಲ್ಲಿ ಅತೀ ಹೆಚ್ಚು ಮತಗಳಿಂದ ಗೆಲುವು ಸಾಧಿಸುತ್ತೇನೆ ಎಂಬ ವಿಶ್ವಾಸವಿದೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಎಂ.ಎಸ್. ಅಕ್ಕಿ, ಜಿಲ್ಲಾಧ್ಯಕ್ಷರಾದ ಅಲ್ತಾಫ ಹಳ್ಳೂರ, ಅನಿಲಕುಮಾರ ಪಾಟೀಲ, ಪಾಲಿಕೆ ಪ್ರತಿಪಕ್ಷದ ನಾಯಕ ಇಮ್ರಾನ್ ಯಲಿಗಾರ, ಎಸ್.ಆರ್. ಪಾಟೀಲ, ಅರ್ಜುನ ಪಾಟೀಲ ಸೇರಿದಂತೆ ಹಲವರಿದ್ದರು.ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಗೆ ಲಾಡ್ ನೆರವು
ಧಾರವಾಡ: ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಎಸ್ ಲಾಡ್ ಅವರು ಅಪಘಾತದಲ್ಲಿ ಗಾಯಗೊಂಡ ಬೈಕ್ ಸವಾರನನ್ನು ಆಸ್ಪತ್ರೆಗೆ ಸಾಗಿಸಲು ನೆರವಾಗುವ ಮೂಲಕ ಮಾನವೀಯತೆ ಮೆರೆದರು.
ಸಚಿವ ಲಾಡ್ ಅವರು ಧಾರವಾಡ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಭೆ ಮುಗಿಸಿಕೊಂಡು, ಹುಬ್ಬಳ್ಳಿಗೆ ಹೊರಟಿದ್ದರು. ಈ ವೇಳೆ ನಗರದ ಟೋಲ್ ನಾಕಾ ಹತ್ತಿರ ದಂಪತಿ ಸಂಚರಿಸುತ್ತಿದ್ದ ಸ್ಕೂಟರ್ ಮತ್ತು ನ್ಯಾನೋ ಕಾರ್ ಪರಸ್ಪರ ಡಿಕ್ಕಿಯಾಗಿ ಅಪಘಾತವಾಗಿತ್ತು.ಅದೇ ರಸ್ತೆಯಲ್ಲಿ ಸಂಚರಿಸುತ್ತಿದ್ದ ಸಚಿವ ಸಂತೋಷ ಲಾಡ್ ಅವರು, ವಾಹನಗಳ ಅಪಘಾತ ಗಮನಿಸಿ, ತಕ್ಷಣ ತಮ್ಮ ವಾಹನದಿಂದ ಇಳಿದು, ಅಪಘಾತದಲ್ಲಿ ಗಾಯಗೊಂಡ ಬೈಕ್ ಸವಾರನನ್ನು ತಮ್ಮ ಎಸ್ಕಾರ್ಟ್ ಪೊಲೀಸ್ ಜೀಪ್‌ನಲ್ಲಿ ಮಲಗಿಸಿ, ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗಾಗಿ ಕಳುಹಿಸಿದರು.ವೈದ್ಯರಿಗೆ ಕರೆ ಮಾಡಿದ ಸಚಿವರು, ಗಾಯಾಳುವಿಗೆ ತಕ್ಷಣ ಉತ್ತಮ ಚಿಕಿತ್ಸೆ ನೀಡಲು ಸೂಚಿಸಿದರು. ಸಚಿವರ ಈ ತುರ್ತು ಸ್ಪಂದನೆ, ಮಾನವೀಯ ಕಾರ್ಯಕ್ಕೆ ಸ್ಥಳದಲ್ಲಿ ಇದ್ದ ಜನರು ಮೆಚ್ವುಗೆ ವ್ಯಕ್ತಪಡಿಸಿದರು.