ಎಸ್‌ಎಸ್‌ಎಲ್‌ಸಿಯಲ್ಲಿ ರಾಜ್ಯಕ್ಕೆ ಪ್ರಥಮ ಬಂದರೆ 5ಲಕ್ಷ ಬಹುಮಾನ

| Published : Jan 05 2025, 01:33 AM IST

ಎಸ್‌ಎಸ್‌ಎಲ್‌ಸಿಯಲ್ಲಿ ರಾಜ್ಯಕ್ಕೆ ಪ್ರಥಮ ಬಂದರೆ 5ಲಕ್ಷ ಬಹುಮಾನ
Share this Article
  • FB
  • TW
  • Linkdin
  • Email

ಸಾರಾಂಶ

ಹಿರಿಯೂರು ನಗರದ ತುಳಸಿ ಕಲ್ಯಾಣ ಮಂಟಪದಲ್ಲಿ ಗಣಿತದ ಗಣಿ ಎಂಬ 10ನೇ ತರಗತಿ ಪುಸ್ತಕವನ್ನು ಸಚಿವ ಡಿ.ಸುಧಾಕರ್ ಬಿಡುಗಡೆ ಮಾಡಿದರು.

ಕನ್ನಡಪ್ರಭ ವಾರ್ತೆ ಹಿರಿಯೂರು

ಚಿತ್ರದುರ್ಗ ಜಿಲ್ಲೆಯು 2022-23 ರಲ್ಲಿ ಪರೀಕ್ಷಾ ಫಲಿತಾಂಶದಲ್ಲಿ ರಾಜ್ಯಕ್ಕೆ ಮೊದಲ ಸ್ಥಾನದಲ್ಲಿತ್ತು. ಆದರೆ ಕಳೆದ ವರ್ಷ ಫಲಿತಾಂಶದಲ್ಲಿ ಕುಸಿತವಾಗಿದೆ. ಆದ್ದರಿಂದ ಎಲ್ಲರೂ ಕ್ರಿಯಾಶೀಲರಾಗಿ ಮಕ್ಕಳನ್ನು ಪರೀಕ್ಷೆಗೆ ಸಿದ್ಧಪಡಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು.

ನಗರದ ತುಳಸಿ ಕಲ್ಯಾಣ ಮಂಟಪದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಶಾಲಾ ಶಿಕ್ಷಣ ಇಲಾಖೆ ಹಾಗೂ ಹಿರಿಯೂರು ತಾಲೂಕು ಗಣಿತ ಶಿಕ್ಷಕರ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ಗಣಿತದ ಗಣಿ ಎಂಬ 10ನೇ ತರಗತಿ ವಿಷಯದ ಅಭ್ಯಾಸ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು.

2025ರ ಎಸ್‌ಎಸ್ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಚಿತ್ರದುರ್ಗ ಜಿಲ್ಲೆಯು ಮೊದಲ ಸ್ಥಾನಕ್ಕೆ ಬರಬೇಕು. ಎಲ್ಲಾ ಶಿಕ್ಷಕರು ಹಿರಿಯೂರು ತಾಲೂಕನ್ನು ಪ್ರಥಮ ಸ್ಥಾನಕ್ಕೆ ತರಲು ಶ್ರಮಿಸಬೇಕು. ರಾಜ್ಯಕ್ಕೆ ಪ್ರಥಮ ಬಂದ ಹಿರಿಯೂರು ತಾಲೂಕಿನ ವಿದ್ಯಾರ್ಥಿಗೆ 5ಲಕ್ಷ ನಗದು ಬಹುಮಾನ ನೀಡಲಾಗುವುದು, ವಿದ್ಯಾರ್ಥಿಗಳಿಗೆ ಗಣಿತ ವಿಷಯ ಪರೀಕ್ಷೆ ಬರೆಯಲು ಸಹಕಾರಿಯಾಗುವಂತೆ 150 ಪುಟಗಳ ಗಣಿತ ಪುಸ್ತಕ ವಿದ್ಯಾರ್ಥಿಗಳಿಗೆ ಸಹಕಾರಿಯಾಗಲಿದೆ ಎಂದರು.ಕ್ಷೇತ್ರಶಿಕ್ಷಣಾಧಿಕಾರಿ ಸಿ.ಎಂ.ತಿಪ್ಪೇಸ್ವಾಮಿ ಮಾತನಾಡಿ, ಶಿಕ್ಷಕರ ಶ್ರಮವನ್ನು ಅರ್ಥ ಮಾಡಿಕೊಂಡು ಮಕ್ಕಳ ಶೈಕ್ಷಣಿಕ ಹಿತ ದೃಷ್ಟಿಯಿಂದ ಹಿರಿಯೂರು ತಾಲೂಕಿನ ಸರ್ಕಾರಿ, ಅನುದಾನಿತ, ಅನುದಾನ ರಹಿತ ಪ್ರೌಢ ಶಾಲೆಗಳಲ್ಲಿ ಅಧ್ಯಯನ ಮಾಡುತ್ತಿರುವ 3800 ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಸಚಿವರಾದ ಡಿ.ಸುಧಾಕರ್ ಅವರು ಈ ಪುಸ್ತಕ ನೀಡುತ್ತಿರುವುದು ಮಾದರಿಯಾಗಿದೆ. ಮತ್ತಷ್ಟು ಉತ್ತಮ ಕಾರ್ಯ ನೀಡಲು ಇದೊಂದು ಪ್ರೇರಣಾ ಕಾರ್ಯವಾಗಿದೆ ಎಂದರು.

ತಾಲೂಕು ಗಣಿತ ಶಿಕ್ಷಕರ ಸಂಘದ ಅಧ್ಯಕ್ಷ ನರಸಿಂಹಮೂರ್ತಿ ಮಾತನಾಡಿ, ಮಕ್ಕಳಿಗೆ ಅನುಕೂಲವಾಗುವಂತಹ ಶೈಕ್ಷಣಿಕ ಕ್ರಿಯಾಶೀಲತೆಯುಳ್ಳ ಚಟುವಟಿಕೆ ಮಾಡುವ ನಮ್ಮ ಸಂಘದ ಆಶಯದಂತೆ ಸಚಿವರು ಪುಸ್ತಕವನ್ನು ಉಚಿತವಾಗಿ ಮುದ್ರಿಸಿ ಹಂಚುತ್ತಿರುವುದರಿಂದ ನಮಗೆ ಅತ್ಯಂತ ಹೆಚ್ಚು ಸಂತಸವಾಗಿದೆ. ಹಾಗಾಗಿ ನಾವು ಉತ್ತಮ ಫಲಿತಾಂಶದ ನಿರೀಕ್ಷೆಯಲ್ಲಿ ಇದ್ದೇವೆ ಎಂದರು.

ಈ ಸಂದರ್ಭದಲ್ಲಿ ಕ್ಷೇತ್ರ ಸಮನ್ವಾಧಿಕಾರಿ ಈ.ತಿಪ್ಪೇರುದ್ರಪ್ಪ, ಇಂಗ್ಲಿಷ್ ವಿಷಯ ಪರೀವೀಕ್ಷಕ ಚಂದ್ರಣ್ಣ, ಕನ್ನಡ ವಿಷಯ ಪರೀವೀಕ್ಷಕ ಶಿವಣ್ಣ, ಸಮಾಜ ವಿಜ್ಞಾನ ವಿಷಯ ಪರೀವೀಕ್ಷಕ ಪ್ರಸಾದ್, ಗಣಿತ ವಿಷಯ ಪರೀಕ್ಷಕಿ ಫೈರೋಜಾ ಬೇಗಂ, ಕಾಂಗ್ರೆಸ್ ಮುಖಂಡರಾದ ಖಾದಿ ರಮೇಶ್, ಈರಲಿಂಗೇಗೌಡ, ಕೃಷ್ಣಮೂರ್ತಿ, ಅಂಬಿಕಾ ಆರಾಧ್ಯ, ಗಣಿತ ಸಂಘದ ಉಪಾಧ್ಯಕ್ಷೆ ರೂಪಕಲಾ ಹಾಗೂ ಎಲ್ಲಾ ಗಣಿತ ಶಿಕ್ಷಕರು ಮತ್ತು ತಾಲೂಕಿನ ಸಾವಿರಕ್ಕೂ ಎಸ್ಎಸ್ಎಲ್‌ಸಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.