ಸಾರಾಂಶ
ಶಿಗ್ಗಾಂವಿ: ನಾಡು, ನುಡಿ, ನೆಲ, ಜಲ, ಭಾಷೆ, ಸಾಹಿತ್ಯ, ಸಂಸ್ಕೃತಿ, ಆಚಾರ-ವಿಚಾರ, ಭವ್ಯ ಪರಂಪರೆ, ಜನರ ಜೀವನಕ್ರಮ, ಹಬ್ಬಗಳ ಆಚರಣೆ, ಸಾಮಾಜಿಕ ಕಳಕಳಿ, ಮಾನವೀಯ ಮೌಲ್ಯಗಳು ಇಡೀ ವಿಶ್ವಕ್ಕೆಅನುಕರಣೀಯವಾಗಿವೆ. ಇಂತಹುಗಳನ್ನು ಉಪನ್ಯಾಸಗಳ ಮೂಲಕ ವಿದ್ಯಾರ್ಥಿಗಳಲ್ಲಿ ಮನದಟ್ಟು ಮಾಡುತ್ತಿರುವ ಕನ್ನಡ ಸಾಹಿತ್ಯ ಪರಿಷತ್ ಶಿಗ್ಗಾಂವಿ ಕಾರ್ಯ ಶ್ಲಾಘನೀಯವಾದದ್ದು ಎಂದು ಪ್ರಾಚಾರ್ಯ ಎಂ.ಎಸ್. ಕುಲಕರ್ಣಿ ಹೇಳಿದರು.ತಾಲೂಕಿನ ತಡಸದ ಸರಕಾರಿ ಸ್ವತಂತ್ರ ಪದವಿ ಪೂರ್ವ ಮಹಾವಿದ್ಯಾಲಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು, ಜಿಲ್ಲಾಘಟಕ ಹಾವೇರಿ ಮತ್ತು ತಾಲೂಕು ಘಟಕ ಶಿಗ್ಗಾಂವಿ ಹಾಗೂ ಹೋಬಳಿ ಘಟಕ ದುಂಡಶಿ ತಡಸ ಸಂಯುಕ್ತ ಆಶ್ರಯದಲ್ಲಿ ನಡೆದ ದಿ.ಮಾತೋಶ್ರೀ ಗಂಗಮ್ಮ ಕೋಂ, ಸೋಮಶೇಖರಯ್ಯ ಕಂಬಾಳಿಮಠ ಮತ್ತು ದಿ.ಯಜಮಾನ ಶ್ರೀ ಚನ್ನವೀರಪ್ಪ ವೀ ಮಹಾಜನಶೆಟ್ಟರ ಹಾಗೂ ವೀರಪ್ಪ ಬಸಪ್ಪ ಮತ್ತಿಗಟ್ಟಿ ಸ್ಮರಣಾರ್ಥ ದತ್ತಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಜಗತ್ತಿನ ಎಲ್ಲ ಸಾಹಿತ್ಯ ಮತ್ತು ಸಂಸ್ಕೃತಿಯ ತಾಯಿ ಬೇರು ‘ಜನಪದ’ವೇ ಆಗಿದೆ. ಆದ್ದರಿಂದ ಜನಪದ ಸಾಹಿತ್ಯ, ಕಲೆ, ಸಂಸ್ಕೃತಿಯೆಡೆಗೆ ಮಕ್ಕಳ ಮನೋಭಾವ ತುಡಿಯುವಂತೆ ಮಾಡುವ ವಾತಾವರಣ ನಿರ್ಮಿಸಬೇಕಿದೆ ಎಂದು ಡಾ.ರಾಮೂ ಮೂಲಗಿ ಜಾನಪದ ವಿದ್ವಾಂಸರು ಹುಬ್ಬಳ್ಳಿ ತಮ್ಮ ಹಾಡಿನ ಮೂಲಕ ಮಕ್ಕಳಿಗೆ ವಿವರಿಸಿದ್ದು ಮನೋಜ್ಞವಾಗಿತ್ತು.ತಾಯಿಯ ಮಹತ್ವದ ವಿಷಯದ ಕುರಿತು ಎಚ್. ಎಚ್. ನದಾಫ್ ಕ.ಜಾ.ವಿ.ವಿ. ಗೊಟಗೋಡಿ ಮತ್ತು ವರ್ತಮಾನದಲ್ಲಿ ಸಾಮಾಜಿಕ ಮೌಲ್ಯಗಳು ವಿಷಯದ ಕುರಿತು ಶಿಕ್ಷಕ, ಸಾಹಿತಿ ಹೊನ್ನಪ್ಪ ಕರೆಕನ್ನಮ್ಮನವರ ಹಾಗೂ ಸಾಮಾಜಿಕ ಕಳಕಳಿ ವಿಷಯ ಕುರಿತು ಶ್ರೀ ಗುರುರಾಜ ಹುಚ್ಚಣ್ಣವರ ಮಕ್ಕಳ ಮನದಟ್ಟುವಂತೆ ವಿವರಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ದುಂಡಶಿ ಹೋಬಳಿ ಘಟಕದ ಅಧ್ಯಕ್ಷ ಈರಪ್ಪ ಭೋಸಲೆ ವಹಿಸಿದ್ದರು. ದತ್ತಿ ದಾನಿಗಳಾದ ವಿಶ್ವನಾಥ ಸೋ ಕಂಬಾಳಿಮಠ. ರುದ್ರಮ್ಮ ಕಂಬಾಳಿಮಠ, ಸೋಮಶೇಖರ ಚ. ಮಹಾಜನಶೆಟ್ಟರ, ಚನ್ನಬಸಪ್ಪ ವೀರಪ್ಪ ಮತ್ತಿಗಟ್ಟಿ, ಶಾರಮ್ಮ, ಲಕ್ಷ್ಮಿ ಮತ್ತು ಕಸಾಪ ಅಧ್ಯಕ್ಷ ನಾಗಪ್ಪ ಬೆಂತೂರ ಉಪಸ್ಥಿತರಿದ್ದರು. ತಾಲೂಕು ಕಸಾಪ ಅಧ್ಯಕ್ಷ ನಾಗಪ್ಪ ಬೆಂತೂರ, ಚನ್ನಬಸಪ್ಪ ಶಿರಗುಪ್ಪಿ, ಈರಣ್ಣ ಗೋಣೆಪ್ಪನವರ, ಈಶ್ವರ ಕುಂಕೂರ, ಬಸವರಾಜ ಬಮ್ಮಿಗಟ್ಟಿ, ವಿನಾಯಕ ರೇವಣಕರ, ಬಸವರಾಜ ಕೌದಿ ಹಾಗೂ ಮಹಾವಿದ್ಯಾಲಯದ ಉಪನ್ಯಾಸಕರು, ಕನ್ನಡಾಭಿಮಾನಿಗಳು, ವಿದ್ಯಾರ್ಥಿಗಳು ಭಾಗವಹಿಸಿದ್ದರು.ಪ್ರಾಸ್ತಾವಿಕವಾಗಿ ತಾಲೂಕು ಕಸಾಪ ಅಧ್ಯಕ್ಷ ನಾಗಪ್ಪ ಬೆಂತೂರ ಮಾತನಾಡಿದರು. ಶಿವನಾಗಪ್ಪ ಶೆಟ್ಟರ ಸ್ವಾಗತಿಸಿದರು. ಬಸವರಾಜ ಬಮ್ಮಿಗಟ್ಟಿ ಕಾರ್ಯಕ್ರಮವನ್ನು ನಿರೂಪಿಸಿದರು.